Advertisement

ಕಲ್ಯಾಣ ಕ್ರಾಂತಿ: ಮಲ್ಟಿಪ್ಲೆಕ್ಸ್‌ ವಿರುದ್ಧ ಶ್ರೀನಿ ಫೈಟ್‌

03:50 AM Mar 17, 2017 | |

ಕನ್ನಡದ ನೆಲದಲ್ಲಿ ಕನ್ನಡ ಚಿತ್ರಗಳಿಗೆ ಯಾಕೆ ತಾತ್ಸಾರ? ಅಂಥದ್ದೊಂದು ಪ್ರಶ್ನೆ “ಶ್ರೀನಿವಾಸ ಕಲ್ಯಾಣ’ ಚಿತ್ರತಂಡದವರಲ್ಲಿ ಬೇರೂರಿದೆ. ಅದಕ್ಕೆ ಕಾರಣವೂ ಇದೆ. ಅವರ ಚಿತ್ರಕ್ಕೆ ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆಯಂತೆ. ಆದರೆ, ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ. ಸಿಕ್ಕರೂ ಪ್ರೈಮ್‌ ಟೈಮ್‌ನಲ್ಲಿ ಪ್ರದರ್ಶನ ಸಿಗುತ್ತಿಲ್ಲ. ಹಾಗಾಗಿ ಏನಾದರೂ ಮಾಡಬೇಕು ಎಂದು ಚಿತ್ರತಂಡದವರು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲ, ಹೊಸ ಕ್ರಾಂತಿ ಮಾಡುವುದಕ್ಕೆ ಹೊರಟಿದ್ದಾರೆ.

Advertisement

“ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋ ಇಲ್ಲ ಎನ್ನುತ್ತಾರೆ. ಆದರೆ, ತಮಿಳು-ತೆಲುಗು ಚಿತ್ರಗಳಿಗೆ ಮಾತ್ರ ಪ್ರೈಮ್‌ಟೈಮ್‌ನಲ್ಲಿ ಪ್ರದರ್ಶನ ಮಾಡುವುದಕ್ಕೆ ಅವಕಾಶ ಸಿಗುತ್ತದೆ. ನಮಗೆ ಬೆಳಿಗ್ಗೆ 9.45ಗೆ ಪ್ರದರ್ಶನ ಮಾಡುವುದಕ್ಕೆ ಅವಕಾಶ ಕೊಡುತ್ತಾರೆ. ಅಷ್ಟು ಮುಂಚೆ ಸಿಕ್ಕರೆ, ಜನ ಹೇಗೆ ಬರೋದಕ್ಕೆ ಸಾಧ್ಯ. ಜನ ಬರದೇ ಇದ್ದಾಗ, ಕಲೆಕ್ಷನ್‌ ಇಲ್ಲ ಅಂತ ಕಿತ್ತು ಹಾಕುತ್ತಾರೆ. ಒಂಥರಾ ಕೊಟ್ಟ ಹಾಗೂ ಇರಬೇಕು, ಜನಾನೂ ಬರಬಾರದು ಅಂತಿರುತ್ತಾರೆ. ಇದರ ವಿರುದ್ಧ ಕೆಲವು ಕನ್ನಡಪರ ಸಂಘಟನೆಗಳ ಜೊತೆಗೆ ಸೇರಿ ಪ್ರತಿಭಟನೆ ಮಾಡಬೇಕಾಯಿತು. ಕೊನೆಗೆ ಕೆಲವು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರೈಮ್‌ಟೈಮ್‌ನಲ್ಲಿ ಪ್ರದರ್ಶನ ಮಾಡುವ ಅವಕಾಶ ಸಿಗುತ್ತಿದೆ. ಈಗ ಕ್ರಮೇಣ ಪಿಕಪ್‌ ಆಗುತ್ತಿದೆ. ಹಾಗಾಗಿ ದಯವಿಟ್ಟು ತೊಂದರೆ ಮಾಡಬೇಡಿ’ ಎಂದು ಕೇಳಿಕೊಳ್ಳುತ್ತಾರೆ “ಶ್ರೀನಿವಾಸ ಕಲ್ಯಾಣ’ ಚಿತ್ರದ ನಿರ್ದೇಶಕ ಕಂ ನಾಯಕ ಶ್ರೀನಿ. ಈ ವಿಷಯವಾಗಿ ಈಗಾಗಲೇ ಶ್ರೀನಿ ಮತ್ತು ತಂಡದವರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ವಿಷಯ ಮುಟ್ಟಿಸಿ ಬಂದಿದ್ದಾರೆ. ಸಾಧ್ಯವಾದರೆ ಮುಖ್ಯಮಂತ್ರಿಗಳನ್ನು ಸಹ ಭೇಟಿ ಮಾಡುತ್ತಾರಂತೆ.

ಪ್ರತಿ ನಿರ್ದೇಶಕ ಮತ್ತು ನಿರ್ಮಾಪಕರೂ ತಮ್ಮ ಚಿತ್ರಕ್ಕೆ ಸಮಸ್ಯೆಯಾದಾಗ, ಇವೆಲ್ಲಾ ಮಾಡುವುದು ಉಂಟು. ಆ ನಂತರ ತಮ್ಮ ಚಿತ್ರ ಹೋದ ಮೇಲೆ, ಈ ವಿಷಯವಾಗಿ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಈ ವಿಷಯವನ್ನು ಶ್ರೀನಿ ಅವರ ಗಮನಕ್ಕೆ ತಂದಾಗ, ತಾವು ಹಾಗಲ ಎಂದರು ಶ್ರೀನಿ. “ನಾನು ಬರೀ ನನ್ನ ಸಿನಿಮಾ ಅಂತ ಹೋರಾಟ ಮಾಡುತ್ತಿಲ್ಲ. ಮುಂದೆ ಯಾವುದೇ ಚಿತ್ರಕ್ಕೆ ಸಮಸ್ಯೆಯಾದರೂ ನಾನಂತೂ ಖಂಡಿತಾ ಇರುತ್ತೇನೆ. ಈಗಾಗಲೇ ಈ ವಿಷಯವಾಗಿ ಒಂದು ವಾಟ್ಸಪ್‌ ಗ್ರೂಪ್‌ ಆಗಿದೆ. ಅದರ ಮೂಲಕ ಆನ್‌ಲೈನ್‌ ಕ್ಯಾಂಪೇನ್‌ ಮಾಡುತ್ತಿದ್ದೇವೆ. ಇತ್ತೀಚೆಗೆ ಐನಾಕ್ಸ್‌ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ ಎಂದು, “ಬ್ಯಾನ್‌ ಐನಾಕ್ಸ್‌’ ಎಂಬ ಕ್ಯಾಂಪೇಮ್‌ ಶುರು ಮಾಡಿದೆವು. ಎರಡೇ ಎರಡು ದಿನದಲ್ಲಿ ಐನಾಕ್ಸ್‌ನ ದಕ್ಷಿಣದ ಮುಖ್ಯಸ್ಥರು ಫೋನ್‌ ಮಾಡಿ, ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿದರು. ಇನ್ನು ಮುಂದೆ ಸಹ ಸಕ್ರಿಯವಾಗಿ ಹೋರಾಟ ಮಾಡುತ್ತೇವೆ’ ಎನ್ನುತ್ತಾರೆ ಶ್ರೀನಿ.

ಅಂದು ಚಿತ್ರದ ನಿರ್ಮಾಪಕ ಭರತ್‌ ಜೈನ್‌, ನಾಯಕಿಯರಾದ ನಿಖೀಲಾ ಸುಮನ್‌ ಮತ್ತು ಕವಿತಾ ಗೌಡ ಸೇರಿದಂತೆ ಹಲವರು ಇದ್ದರು. ಅವರೆಲ್ಲಾ ತಮ್ಮ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next