Advertisement

ಸಿನಿಮಾದಿಂದ ದೇಶದ ಜನರ ಬೆಸುಗೆ: ಕಾಯ್ಕಿಣಿ

09:33 AM Sep 08, 2019 | Team Udayavani |

ಧಾರವಾಡ: ಸಿನಿಮಾ ಭಾರತದ ಆತ್ಮ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸಿನಿಮಾ ಎಲ್ಲರನ್ನು ಒಗ್ಗೂಡಿಸಿದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

Advertisement

ಕವಿಸಂನಲ್ಲಿ ನ್ಯಾಯವಾದಿ ಎಂ.ಸಿ. ಶಾಂತನಗೌಡರ ದತ್ತಿ ಕಾರ್ಯಕ್ರಮದ ಅಂಗವಾಗಿ ‘ಸಿನಿಮಾ ಎಂಬ ಮಾಯೆ’ ಎಂಬ ವಿಷಯದ ಕುರಿತು ಅವರು ಶನಿವಾರ ಉಪನ್ಯಾಸ ನೀಡಿದರು.

ಸಿನಿಮಾವನ್ನು ಜನರೊಟ್ಟಿಗೆ ನೋಡಬೇಕು, ಜನರಿದ್ದರೆ ಮಾತ್ರ ಸಿನಿಮಾಗೆ ಮೌಲ್ಯ ಬರಲು ಸಾಧ್ಯ. ಇಂದು ಸಿನಿಮಾ ಸಂಕಷ್ಟದಲ್ಲಿದೆ. ಕಾರಣ ಜನರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಸಿನಿಮಾಗೆ ಚಿತ್ರಕತೆ, ಸಂಗೀತ ಮುಖ್ಯ. ಚಿತ್ರಕತೆ ಜತೆಗೆ ಸಂಭಾಷಣೆ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನ ಚಿತ್ರಗಳಲ್ಲಿ ಬಡತನ, ಪ್ರಜಾಪ್ರಭುತ್ವ, ಉದ್ಯೋಗದ ಮೇಲೆ ಚಿತ್ರಗಳು ಮೂಡಿ ಬರುತ್ತಿದ್ದವು. ಜನ ಅದನ್ನು ನೋಡಿ ತಮ್ಮ ಬದುಕು ರೂಪಿಸಿಕೊಳ್ಳುತ್ತಿದ್ದರು. ಈಗಲೂ ಅದೇ ಪರಂಪರೆ ಮುಂದುವರಿಯುವ ಜತೆಗೆ ನೂತನ ತಂತ್ರಜ್ಞಾನ ಅವಳಡಿಕೊಳ್ಳಲಾಗಿದೆ ಎಂದು ಹೇಳಿದರು.

ಇಡೀ ಪ್ರಪಂಚದಲ್ಲಿ ಹಾಡಿನೊಂದಿಗೆ ಬದುಕುವ ಸಂಸ್ಕೃತಿ ನಮ್ಮ ದೇಶದಲ್ಲಿ ಮಾತ್ರ ಇದೆ. ಜನರು ತಮ್ಮ ಮೇಲೆ ಪ್ರಭಾವ ಬೀರಿದ ಹಾಡುಗಳನ್ನು ಗುನುಗುತ್ತಲೇ ದಿನ ಕಳೆಯುತ್ತಾರೆ. ರಂಗಭೂಮಿ ಸಿನಿಮಾದ ತಂದೆ-ತಾಯಿ ಎಂದರು. ಚಿತ್ರಗಳಲ್ಲಿ ಬಳಸುವ ಲೊಕೇಶನ್‌ಗಳು, ತಾವು ನೋಡಿದ ಸಿನಿಮಾಗಳು, ಪ್ರಭಾವ ಬೀರಿದ ಅಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

Advertisement

ದತ್ತಿ ದಾನಿ ಸರ್ವೂಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಪ್ರಾಸ್ತಾವಿಕ ಮಾತನಾಡಿ, ಅಗಲಿದ ನಮ್ಮ ತಂದೆಯ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜೀವನದಲ್ಲಿ ಹಣ ಗಳಿಕೆಗಿಂತ ಆದರ್ಶ ಮುಖ್ಯ. ಅಂತೆಯೇ ನಮ್ಮ ತಂದೆ ನನಗಾಗಿ ಆಸ್ತಿ ಮಾಡದೇ ಆದರ್ಶ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ನೀವು ಕೂಡಾ ಆದರ್ಶಪ್ರಾಯರಾಗಿ ಬದುಕಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌.ಎನ್‌. ಸತ್ಯನಾರಾಯಣ ಅವರು ನ್ಯಾಯವಾದಿ ಎಂ.ಸಿ. ಶಾಂತನಗೌಡರ ಜೀವನದ ಬಗ್ಗೆ ಮಾಹಿತಿ ನೀಡಿದರು.

ಕವಿಸಂ ಅಧ್ಯಕ್ಷ ನಾಡೋಜ ಪಾಟೀಲ ಪುಟ್ಟಪ್ಪ, ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ, ನ್ಯಾ| ಸುಭಾಸ ಅಡಿ, ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ, ಹೈಕೋರ್ಟ್‌ ರಜಿಸ್ಟ್ರಾರ್‌ ವಿ.ಶ್ರೀಶಾನಂದ, ನ್ಯಾ| ಎಸ್‌. ಸುನೀಲದತ್ತ ಯಾದವ, ನ್ಯಾ| ಕೆ. ನಟರಾಜನ್‌, ಸಾಹಿತಿ ಶ್ಯಾಮಸುಂದರ ಬಿದರಕುಂದಿ ಮೊದಲಾದವರಿದ್ದರು. ಪ್ರಶಾಂತ ಕುಲಕರ್ಣಿ ಪ್ರಾರ್ಥಿಸಿದರು. ಕವಿಸಂ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ ಸ್ವಾಗತಿಸಿದರು. ನ್ಯಾಯವಾದಿ ಬಸವಪ್ರಭು ಹೊಸಕೇರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next