Advertisement

ಸಾಗುತ ದೂರ ಹೃದಯ ಭಾರ

09:59 AM Feb 16, 2020 | Lakshmi GovindaRaj |

“ಅಮ್ಮನ ಊರಿಗೆ ದಾರಿ ಇದೇನಾ, ಹೇಳಿ ನೀವಾದ್ರೂ…?’ ಹೀಗೆ ಕೇಳುತ್ತಾ ತನ್ನ ಅಮ್ಮನನ್ನು ಹುಡುಕಿ ಹೊರಟವರ ಕಥೆ ಇದು. ಇಲ್ಲಿ ಕಥೆಯೂ ಇದೆ. ಕಣ್ಣೀರ ವ್ಯಥೆಯೂ ಇದೆ. ಒಂದೇ ಮಾತಲ್ಲಿ ಹೇಳುವುದಾದರೆ, ನಡೆದಷ್ಟು ದೂರ ಭಾವುಕತೆಯಲ್ಲೇ ಸಾಗುವ ಪಯಣದಲ್ಲಿ ಮುಗ್ಧ ಮನಸ್ಸುಗಳಿವೆ. ಅಸಹಾಯಕ ಜೀವಗಳಿವೆ. ನಿಷ್ಠುರ ಎನಿಸುವ ವ್ಯಕ್ತಿತ್ವಗಳೂ ಇವೆ. ಇವೆಲ್ಲದರ ನಡುವೆ ಸುಮ್ಮನೆ ನೋಡಿಸಿಕೊಂಡು ಹೋಗುವ, ಆಗಾಗ ಭಾವುಕತೆಗೆ ದೂಡುವ ಅಂಶಗಳೂ ಇವೆ.

Advertisement

ಹಾಗಾಗಿ, ಈ ವಾರವೂ ಕೂಡ ಒಂದೊಳ್ಳೆಯ ಅನುಭವ ಕಟ್ಟಿಕೊಡುವ, ಹೃದಯ ಭಾರ ಎನಿಸುವ, ನೋಡಿ ಸಣ್ಣದ್ದೊಂದು ಮರುಕಪಡುವ, ಕಣ್ಣಂಚು ಒದ್ದೆಯಾಗುವ ಕ್ಷಣಗಳಿಗೆ ಈ ಚಿತ್ರ ಸಾಕ್ಷಿಯಾಗುತ್ತೆ. ಇಲ್ಲಿ ಗಟ್ಟಿ ಕಥೆ ಇದೆ. ಅದಕ್ಕೆ ತಕ್ಕ “ಹೂರಣ’ ಎಂಬ ಚಿತ್ರಕಥೆಯೂ ಇದೆ. ಆಗಾಗ ನಗಿಸುವ, ಅಲ್ಲಲ್ಲಿ ಅಳಿಸುವ ದೃಶ್ಯಗಳೂ ಇವೆ. ವಿನಾಕಾರಣ ಗೊಂದಲವಿಲ್ಲದೆ, ಸುಖಾಸುಮ್ಮನೆ ಸೀನ್‌ಗಳನ್ನು ತುರುಕದೆ ಕಥೆ ಸಾಗಿದಷ್ಟೂ ದೂರ ನೋಡಿಸಿಕೊಂಡು ಹೋಗುತ್ತೆ.

ಹಾಗಾಗಿ, ಇದೊಂದು ಅಮ್ಮನ ಹುಡುಕಿ ಹೊರಡುವ ಭಾವುಕ ಪಯಣ. ಇಲ್ಲಿ ಆ ಭಾವುಕತೆಯನ್ನು ಕಟ್ಟಿಕೊಡುವುದಕ್ಕಿಂತ, ಒಂದೊಮ್ಮೆ ಸಿನಿಮಾ ನೋಡಿ, ತಾಯಿ ಹಾಗೂ ಮಗನ ಬಾಂಧವ್ಯದ ಅನನ್ಯ ಅನುಭವ ತಿಳಿಯಲ್ಲಡ್ಡಿಯಿಲ್ಲ. ನಿರ್ದೇಶಕ ರವಿತೇಜ, ಇಲ್ಲಿ ಏನು ಹೇಳಬೇಕು, ಎಷ್ಟನ್ನು ಹೇಳಬೇಕು, ಎಲ್ಲಿ ನಗಿಸಬೇಕು, ಎಲ್ಲೆಲ್ಲಿ ಅಳಿಸಬೇಕು ಎಂಬ ವಾಸ್ತವದ ಅರಿವನ್ನು ಸರಿಯಾಗಿ ತಿಳಿದುಕೊಂಡಂತಿದೆ. ಹಾಗಾಗಿಯೇ, ಚಿತ್ರ ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಸಾಗುತ್ತೆ.

ಸಿನಿಮಾ ನೋಡಿದವರಿಗಂತೂ ತನ್ನ ಹೆತ್ತಮ್ಮನ ಪ್ರೀತಿ-ವಾತ್ಸಲ್ಯದ ದಿನಗಳು ಕಾಡದೇ ಇರದು. ಅಷ್ಟರಮಟ್ಟಿಗೆ ಜರ್ನಿಯಲ್ಲೇ ಹಿತಾನುಭವ ಎನಿಸುವ ಅಂಶಗಳನ್ನು ತೋರಿಸುವ ಮೂಲಕ ಒಂದಷ್ಟು ಮನಮುಟ್ಟುವ ಪ್ರಯತ್ನವೂ ನಡೆದಿದೆ. ಅಮ್ಮ-ಮಗನ ನಡುವಿನ ಅನೇಕ ಚಿತ್ರಗಳು ಬಂದಿದ್ದರೂ, ಈ ಚಿತ್ರ ಹೊಸ ವಿಷಯದೊಂದಿಗೆ ನೋಡುಗರ ಮನಸ್ಸು ಭಾರವಾಗಿಸುತ್ತಲೇ ಹತ್ತಿರವಾಗುತ್ತದೆ ಎಂಬುದು ವಿಶೇಷ.

ನೋಡುವ ಕಣ್ಣುಗಳಿಗೆ ಹಚ್ಚ ಹಸಿರು ತುಂಬಿದ್ದರೆ, ಕೇಳುವ ಕಿವಿಗಳಿಗೂ ಕಚಗುಳಿ ಇಡುವ ಮಾತುಗಳು, ಆಗಾಗ ಮನಕಲಕುವ ದೃಶ್ಯಗಳು ಕಾಡುವುದರಿಂದ ಚಿತ್ರತಂಡದ ಶ್ರಮ ಸಾರ್ಥಕ ಎನಿಸುತ್ತೆ. ಮೊದಲರ್ಧ ನೋಡುಗರಿಗೆ ಥ್ರಿಲ್ಲಿಂಗ್‌ ಸ್ಟೋರಿ ಎನಿಸಿದರೂ. ಕಥೆ ಸಾಗಿದಂತೆ, ಅದೊಂದು ಎಮೋಷನಲ್‌ ಜರ್ನಿಯತ್ತ ಕೊಂಡೊಯ್ಯುತ್ತದೆ. ದ್ವಿತಿಯಾರ್ಧ ಇಡೀ ಸಿನಿಮಾ ಗಂಭೀರತೆಗೆ ದೂಡುತ್ತದೆ. ಆರಂಭದಲ್ಲಿ ಬರುವ ತಾಯಿ ಹಾಡಿನ ಸಾಹಿತ್ಯ ಚೆನ್ನಾಗಿದೆ.

Advertisement

ಆದರೆ, ಆ ಹಾಡು ಹಾಡಿರುವ ರೀತಿ ಸರಿ ಎನಿಸುವುದಿಲ್ಲ. ಎಲ್ಲೋ ಒಂದು ಕಡೆ ಸಿನಿಮಾ ಗಂಭೀರತೆಗೆ ಕರೆದೊಯ್ಯುತ್ತೆ ಎನ್ನುವಾಗಲೇ, ಸಂಚಿತ್‌ ಹೆಗ್ಡೆ ಹಾಡೊಂದು ಕಾಣಿಸಿಕೊಂಡು ಕೊಂಚ ತಾಳ್ಮೆ ಕೆಡಿಸುತ್ತದೆ. ಅದು ತಾಯಿಗೆ ಸಂಬಂಧಿಸಿದ ಹಾಡು ಆಗಿದ್ದರೂ, ಹೇಳುವ ರೀತಿ ಕೇಳುವಂತಿಲ್ಲ. ಹಾಡು ಇರದಿದ್ದರೂ, ಸಿನಿಮಾಗೇನೂ ಸಮಸ್ಯೆ ಇರುತ್ತಿರಲಿಲ್ಲ. ಆದರೂ, ಕಥೆಯಲ್ಲಿ ನೋಡಿಸಿಕೊಂಡು ಹೋಗುವ ತಾಕತ್ತು ಇದೆ.

ಇನ್ನು, ಕೆಲವು ಕಡೆ ಛಾಯಾಗ್ರಹಣದಲ್ಲಿ ಸಣ್ಣಪುಟ್ಟ ಲೋಪಗಳಿದ್ದರೂ, ಮನಸ್ಸು ಭಾರವಾಗಿಸುವ ದೃಶ್ಯಗಳು ಬಂದಾಗ, ಎಲ್ಲಾ ಲೋಪಗಳು ಬದಿ ಸೇರುತ್ತವೆ. ಒಟ್ಟಾರೆ, ಅಮ್ಮನ ಪ್ರೀತಿ ಹುಡುಕಿ ಹೊರಡುವ ಹುಡುಗನೊಬ್ಬನ ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಸಸ್ಪೆನ್ಸ್‌ ಅಂಶಗಳೂ ಇವೆ. ಅದನ್ನು ನೋಡುವ ಕುತೂಹಲವಿದ್ದರೆ, ಮಿಸ್‌ ಮಾಡದೆ ಈ ಚಿತ್ರ ನೋಡಲು ಯಾವುದೇ ತಕರಾರಿಲ್ಲ. ಶಾಲೆಗೆ ಹೋಗುವ ಅಶು ಎಂಬ ಮುದ್ದಾದ ಹುಡುಗ ಹನ್ನೆರೆಡು ವರ್ಷದಿಂದ ತನ್ನ ಹೆತ್ತವಳನ್ನು ನೋಡಿಲ್ಲ.

ಆದರೆ, ಅವನಿಗೆ ದೂರದಲ್ಲೆಲ್ಲೋ ಇರುವ ಅಮ್ಮ ಪತ್ರ ಬರೆದು, ವಿಚಾರಿಸುತ್ತಿರುತ್ತಾಳೆ. ಅಮ್ಮ ಹೇಗಿದ್ದಾಳೆ, ಎಲ್ಲಿದ್ದಾಳೆ ಅನ್ನುವ ಕುತೂಹಲದಲ್ಲೇ ದಿನ ಕಳೆಯುವ ಅಶು, ಒಂದು ದಿನ ಅಮ್ಮನ ಹುಡುಕಿ ಪಯಣ ಬೆಳೆಸುತ್ತಾನೆ. ನಡೆಯುವ ಆಕಸ್ಮಿಕ ಘಟನೆಗಳಲ್ಲಿ ಅವನೊಂದಿಗೆ ಮಾನಸಿಕ ಅಸ್ವಸ್ಥನೊಬ್ಬ ಜೊತೆಗೂಡುತ್ತಾನೆ. ಅವರಿಬ್ಬರ ಜೊತೆ ಪ್ರಿಯಕರನ ಮಾಡಿದ ತಪ್ಪಿನಿಂದಾಗಿ, ಹೊಟ್ಟೆಪಾಡಿಗೆ ವೇಶ್ಯೆಯಾಗಲು ಹೊರಟ ಹುಡುಗಿಯೊಬ್ಬಳು ಸಾಥ್‌ ಕೊಡುತ್ತಾಳೆ.

ಹೀಗೆ ದಾರೀಲಿ ಸಿಗುವ ಒಬ್ಬೊಬ್ಬರದ್ದೂ ಒಂದೊಂದು ಕಥೆ ಇದೆ. ಇದಕ್ಕೂ ಮುನ್ನ ಒಂದು ಕೊಲೆಯೂ ಆಗಿರುತ್ತೆ. ಅದಕ್ಕೆ ಕಾರಣ ಯಾರು, ಪೊಲೀಸರು ಇವರ ಹಿಂಬಾಲಿಸುವುದು ಯಾಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಿನಿಮಾದಲ್ಲೇ ಉತ್ತರವಿದೆ. ಸಣ್ಣಪುಟ್ಟ ಪಾತ್ರಗಳ ಮೂಲಕ ತಕ್ಕ ಮಟ್ಟಿಗೆ ಗುರುತಿಸಿಕೊಂಡಿದ್ದ ಮಹೇಶ್‌ ಸಿದ್ದು, ಸಿನಿಮಾದ ಆಕರ್ಷಣೆ. ಇಡೀ ಚಿತ್ರವನ್ನು ಹೆಗಲಮೇಲೆ ಹೊತ್ತಿದ್ದಾರೆಂದರೆ ಅತಿಶಯೋಕ್ತಿಯಲ್ಲ. ಹುಚ್ಚನಂತೆ ವರ್ತಿಸುವ ಮೂಲಕ ಎಲ್ಲರಿಗೂ ಇಷ್ಟವಾಗುತ್ತಾರೆ.

ಇನ್ನು, ಆಶಿಕ್‌ ಆರ್ಯ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಪೇಕ್ಷಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಾತೇ ಇರದ ಪಾತ್ರದಲ್ಲೂ ಆಶಾ ಭಂಡಾರಿ ಗಮನಸೆಳೆಯುತ್ತಾರೆ. ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನವೀನ್‌ ಕೂಡ ಫೋಕಸ್‌ ಆಗುತ್ತಾರೆ. ಉಳಿದಂತೆ ಬರುವ ಪಾತ್ರಗಳು ಸಿನಿಮಾ ಓಟಕ್ಕೆ ಹೆಗಲು ಕೊಟ್ಟಿವೆ. ಮಣಿಕಾಂತ್‌ ಕದ್ರಿ ಸಂಗೀತದ ಒಂದು ಹಾಡು ಪರವಾಗಿಲ್ಲ. ಸತೀಶ್‌ ಬಾಬು ಹಿನ್ನೆಲೆ ಸಂಗೀತ ಪೂರಕವಾಗಿದೆ. ಅಭಿಲಾಶ್‌ ಕಲಾತಿ ಕ್ಯಾಮೆರಾದಲ್ಲಿ ಸಾಗುವ ದಾರಿ ಚೆನ್ನಾಗಿದೆ.

ಚಿತ್ರ: ಸಾಗುತ ದೂರ ದೂರ
ನಿರ್ಮಾಣ: ಅಮಿತ್‌ ಪೂಜಾರಿ
ನಿರ್ದೇಶನ: ರವಿತೇಜ
ತಾರಾಗಣ: ಮಹೇಶ್‌ ಸಿದ್ದು, ಅಪೇಕ್ಷಾ, ಆಶಾ ಭಂಡಾರಿ, ಆಶಿಕ್‌ ಆರ್ಯ, ನವೀನ್‌, ಹೊನ್ನವಳ್ಳಿ ಕೃಷ್ಣ, ಮೋಹನ್‌ ಜುನೇಜ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next