Advertisement

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

01:32 AM May 06, 2024 | Team Udayavani |

ಮಡಿಕೇರಿ: ಮದುವೆ ಹಿಂದಿನ ದಿನ ಸಿಹಿತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಪಟ್ಟಣದ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ.

Advertisement

ಸಮೀಪದ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕ ನೋರ್ವನೊಂದಿಗೆ ನಿಶ್ಚಯವಾಗಿದ್ದು, ಮೇ 5ರಂದು ಇಲ್ಲಿನ ಜಾನಕಿ ಕನ್ವೆನ್ಶನ್‌ ಹಾಲ್‌ನಲ್ಲಿ ವಿವಾಹ ನಿಗದಿಯಾಗಿತ್ತು.

ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದು, ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದು ಗಲಾಟೆ ಆರಂಭವಾಯಿತು. ಮಂಟಪದಲ್ಲಿಯೇ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು.

ರವಿವಾರ ಬೆಳಗ್ಗೆ ಅಂತಿಮವಾಗಿ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿತು. ಶನಿವಾರ ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದ ವರ ರವಿವಾರ ಬೆಳಗ್ಗೆ ನಾನು ಮದುವೆಯಾಗುತ್ತೇನೆ ಎಂದು ಹೊಸ ವರಸೆ ಆರಂಭಿಸಿದ್ದ. ಆದರೆ ದಿಢೀರ್‌ ಘಟನಾವಳಿಯಿಂದ ಬೇಸತ್ತ ವಧು ಮದುವೆಯೇ ಬೇಡ ಎಂದು ಪೊಲೀಸರೆದುರು ಹೇಳಿಕೆ ನೀಡಿದಳು.

ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಠಾಣೆ ಎದುರು ಆಗ್ರಹಿಸಿದರು. ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next