ದಾವಣಗೆರೆ: ನೇಕಾರ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ದೊರೆಯಲು ಪ್ರತಿಯೊಬ್ಬರೂ ಒಗ್ಗೂಡಬೇಕು ಎಂದು ನೇಕಾರ ಸಮಾಜ ಮುಖಂಡ ಆರ್.ಎಚ್. ನಾಗಭೂಷಣ ಹೇಳಿದರು. ನಿಟುವಳ್ಳಿಯ ಬನಶಂಕರಿ ದೇವಸ್ಥಾನದಲ್ಲಿ ವಿಶ್ವ-ನೇಕಾರ ವಧು ವರರ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ನೇಕಾರ ವಧು ವರರ ಸಮಾವೇಶದಲ್ಲಿ ಅವರು ಮಾತನಾಡಿದರು.
ನೇಕಾರ ಸಮುದಾಯ ಒಗ್ಗಟ್ಟಿನ ಕೊರತೆಯಿಂದಾಗಿ ಹಲವು ಸೌಲಭ್ಯ ಪಡೆಯಲಾಗುತ್ತಿಲ್ಲ. ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದೆ. ಕೆಲವೇ ಕೆಲವು ನಾಯಕರು ಇಂದು ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದಾರೆ. ಇನ್ನೂ ಹೆಚ್ಚಿನ ಸ್ಥಾನಮಾನ ಪಡೆಯಲು ಎಲ್ಲರೂ ಒಗ್ಗಟ್ಟಾಗಿ ಶರಮಿಸಬೇಕು ಎಂದರು. ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಒಗ್ಗಟ್ಟಿನ ಕೊರತೆಯಿಂದ ಸವಲತ್ತುಗಳು ಮರೀಚಿಕೆ ಆಗಿವೆ.
ರಾಜಕೀಯ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆಯಬೇಕಾದರೆ ಸಮಾಜ ಬಂಧುಗಳು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ನೇಕಾರರ ಸಮುದಾಯ ಅಭಿವೃದ್ಧಿ ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಸೇರಬೇಕು ಎಂದು ಹೇಳಿದರು. ರಾಜಕೀಯ ಕ್ಷೇತ್ರದಲ್ಲಿ ಲಕ್ಷ್ಮೀನಾರಾಯಣ, ಕೆ.ಸಿ. ಕೊಂಡಯ್ಯ, ಉಮಾಶ್ರೀ ಅವರಂತಹ ಮುಖಂಡರಿಂದ ಸಮಾಜದ ಬೆಳೆಯಬೇಕಿದೆ.
ಅನ್ಯ ಸಮುದಾಯಗಳಲ್ಲಿ ಕಡಿಮೆ ಜನಸಂಖ್ಯೆ ಹೊಂದಿದ್ದರೂ ರಾಜಕೀಯ ಪ್ರಾಬಲ್ಯ ಹೊಂದಿವೆ. ನಾವು ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಸಹ ಸ್ಥಾನಮಾನ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸ್ಥಾನ ಪಡೆಯಲು ಸಂಘಟನೆಯಿಂದ ಮಾತ್ರ ಸಾಧ್ಯ ಎಂದರು. ಸಮಾಜದ ಮುಖಂಡ ಪಿ.ಜೆ. ನಾಗರಾಜ ಒದ್ದಿ ಮಾತನಾಡಿ, ದೇಶದಲ್ಲಿ 6 ಕೋಟಿ ಜನಸಂಖ್ಯೆ ಇದೆ.
ಇಡೀ ನೇಕಾರ ಸಮಾಜ ಸೇರಿಕೊಂಡು ಒಂದು ರಾಷ್ಟ್ರೀಯ ಸಮಾವೇಶ ಮಾಡಿ ಸರ್ಕಾರಕ್ಕೆ ಒಂದು ಸ್ಪಷ್ಟ ನಿರ್ದೇಶನ ನೀಡಬೇಕು. ಸ್ಥಳೀಯ ಸಂಸ್ಥೆಯಲ್ಲಿ ಮಹಿಳಾ ಮೀಸಲಾತಿ ಕೇಳಬೇಕು ಎಂದರು. ಸಮಾಜದ ಮುಖಂಡ ನಾರಾಯಣ ಮಾತನಾಡಿ, ಪದ್ಮಶಾಲಿ, ದೇವಾಂಗ, ಕುರುಹಿನಶೆಟ್ಟಿ ಹೀಗೆ ಹಲವು ಹೆಸರಲ್ಲಿ ಒಡೆದಿರುವ ಸಮುದಾಯ ಒಂದಾಗಬೇಕು. ಈ ನಿಟ್ಟಿನಲ್ಲಿ ಸಮುದಾಯ ಮುಖಂಡರು, ಯುವಕರು ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಗುಬ್ಬಿ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಸದಸ್ಯೆ ಪುಷ್ಪಲತಾ ಜಗನ್ನಾಥ ಉದ್ಘಾಟಿಸಿದರು. ಧರ್ಮರಾಜ ಏಕಬೋಟೆ, ಮರುಡಪ್ಪ, ಬಿದ್ರೆ ಸೋಮಣ್ಣ, ಲಕ್ಷ್ಮೀನಾರಾಯಣ, ಪಿ. ರಾಮಕುಮಾರ್, ಟಿ. ಅಜ್ಜೆàಶ್, ಪಿ.ಎಂ. ಆಂಜನೇಯ ಇತರರು ವೇದಿಕೆಯಲ್ಲಿದ್ದರು.