Advertisement

ಜಮ್ಮುವಿನಲ್ಲಿ ಭಾರಿ ದಾಳಿಗೆ ಸಂಚು ನಡೆಸಿದ್ದ ಉಗ್ರರು: ಸುಧಾರಿತ ಶಸ್ತ್ರಾಸ್ತ್ರಗಳು ವಶಕ್ಕೆ

10:03 AM Feb 02, 2020 | keerthan |

ಶ್ರೀನಗರ: ಜಮ್ಮುವಿನ ನಾಗ್ರೋಟ ಟೋಲ್ ಪ್ಲಾಜಾದಲ್ಲಿ ಶುಕ್ರವಾರ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಇದೇ ವೇಳೆ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ದೊಡ್ಡ ಪ್ರಮಾಣದ ದಾಳಿಗೆ ಉಗ್ರರು ಸಂಚು ನಡೆಸಿದ್ದರು ಎಂದು ವರದಿಯಾಗಿದೆ.

Advertisement

ಕಾರ್ಯಾಚರಣೆಯ ಬಳಿಕ ಪಾಕಿಸ್ಥಾನಿ ನಿರ್ಮಿತ ಮಾರ್ಫಿನ್ ಇಂಜೆಕ್ಷನ್, ಸುಧಾರಿತ ಸ್ಪೋಟಕ ಸಾಧನಗಳು (ಐಇಡಿ) ಮತ್ತು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮೂವರು ಉಗ್ರಗಾಮಿಗಳು ಪಾಕಿಸ್ಥಾನದ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಗೆ ಸೇರಿದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲ್ಲಲ್ಪಟ್ಟ ಉಗ್ರರಿಂದ ಎಕೆ-47 ರೈಫಲ್ ಗಳು, ಮಾಗಜಿನ್ ಗಳು ಮತ್ತು ಗ್ರೇನೇಡ್ ಗಳನ್ನೂ ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಆರ್ ಡಿಎಕ್ಸ್, ಆರು ಚೈನೀಸ್ ಗ್ರೇನೆಡ್ ಗಳು ಮತ್ತು ಸುಮಾರು 32,000ದಷ್ಟು ನಗದನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದಾಗಿ ಈ ಉಗ್ರರು ಭಾರಿ ದಾಳಿ ಸಂಚು ರೂಪಿಸಿದ್ದರು ಎಂದು ಅಂದಾಜಿಸಲಾಗಿದೆ.

ಶುಕ್ರವಾರ ಮುಂಜಾನೆಯ ವೇಳೆಗೆ ನಾಗ್ರೊಟದ ಟೋಲ್ ಪ್ಲಾಜಾ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ನಂತರ ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಸಿಆರ್ ಪಿಎಫ್ ಜವಾನರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next