ಗೆಲುವು ಅಂದರೆ ಏನು?ಗಾಂಧಿನಗರದ ನಿರ್ಮಾಪಕರು ಹೇಳುವುದೇ ಬೇರೆ. 1) ಹಾಕಿದ ಹಣ ಬಂದರೆ, 2) ಸಿನಿಮಾ 50 ದಿನಓಡಿದರೆ. ಎರಡರಲ್ಲಿ ಯಾವುದನ್ನು ಬೇಕಾದರೂ ಗೆಲವು ಅಂತ ಕರೆಯಬಹುದಂತೆ. ಎರಡನೆ ವಿಧದಲ್ಲಿ ಬಹುತೇಕ ನಿರ್ಮಾಪಕರಿಗೆ ಹಣಕ್ಕಿಂತ ಹೆಚ್ಚಾಗಿ ಹೆಸರು ಬಂದಿರುತ್ತದೆ. ಹೀಗಾಗಿ, ಇದೂ ಕೂಡ ಅವರ ಪಾಲಿನ ಗೆಲುವು. ಇಲ್ಲಿ ಗೆಲುವನ್ನು ನಿರ್ಧರಿಸಬೇಕಾದವರು ನಿರ್ಮಾಪಕರು. ಅದು ಹಣದಿಂದಲೋ, ಹೆಸರಿಂದಲೋ ಅಂತ. ನಮ್ಮಲ್ಲಿ ಬೆರಳಿಕೆಯಷ್ಟು ನಿರ್ಮಾಪಕರು, ನಿರ್ದೇಶಕರು ದೊಡ್ಡ ಹೀರೋಗಳನ್ನು ಹಾಕಿಕೊಂಡು ನಿರ್ಮಿಸಿದ ಚಿತ್ರಗಳಿಂದ ಬಿಡುಗಡೆಗೆ ಮೊದಲೇ ಆದಾಯ ಪಡೆಯುವ ಭಾಗ್ಯವಿದೆ.
ಇದು ಎಲ್ಲರಿಗೂ ಅಲ್ಲ. ಏನೇ ಹೇಳಿ, ನಿರ್ಮಾಪಕರ ಆದಾಯದ ಹಾದಿಗಳು ಹಿಗ್ಗಿರುವುದಂತೂ ಸತ್ಯ. ಹಿಂದೆ, ಬರೀ ಥಿಯೇಟರ್ ಕಲೆಕ್ಷನ್, ಆಡಿಯೋ ರೈಟ್ಸ್‌ಗಳೆಂಬ ಟೂ.ವೇ ಮಾತ್ರ ಇದ್ದವು. ಈಗ ಸೆಟಲೈಟ್ ರೈಟ್ಸ್, ಮ್ಯೂಸಿಕ್ ರೈಟ್ಸ್, ಡಿಜಿಟಲ್ ರೈಟ್ಸ್ ಜೊತೆಗೆ ಥಿಯೇಟರ್ ಕಲಕ್ಷನ್ ಕೂಡ ಸೇರಿ ಆದಾಯದ ಹಾದಿ ಫೈವ್ ವೇ ಆಗಿದೆ. ದೊಡ್ಡ ಹೀರೋಗಳ ಸಿನಿಮಾಗಳಾದರೆ ಥಿಯೇಟರ್ ಮಾಲೀಕರೇ ಸಿನಿಮಾ ರೈಟ್ಸ್ ಕೊಂಡುಕೊಳ್ಳುವ ಪರಿಪಾಠ ಇದೆ. ಒಂದು ಪಕ್ಷ ಸೋತರೆ, ನಿರ್ಮಾಪಕ ಸೇಫ್, ಥಿಯೇಟರ್ ಮಾಲೀಕರ ಜೇಬಿಗೆ ಕತ್ತರಿ ಬೀಳುತ್ತದೆ.
ಹೀಗಾಗಿ, ಸಿನಿಮಾ ನೂರು ದಿನ ಓಡಿದರೆ ಮಾತ್ರ ಗೆದ್ದಿದೆ, ಆದಾಯ ಬಂದಿದೆ ಅಂತ ತೀರ್ಮಾನಿಸಬೇಕಾಗಿಲ್ಲ. ವರ್ಷದಲ್ಲಿ ಬಿಡುಗಡೆ ಗೊಳ್ಳುವ ಸರಾಸರಿ 120 ಸಿನಿಮಾಗಳಲ್ಲಿ ಐದು ಸಿನಿಮಾ ಕೂಡ ನೂರು ದಿನ ಓಡುವುದಿಲ್ಲ. ಆದರೆ, ನಿರ್ಮಾಪಕರಿಗೆ ಲಾಭ ತಂದು ಕೊಟ್ಟಿರುತ್ತದೆ.
ಈಗೇನಿದ್ದರೂ, ವೀಕ್ಲಿ ಜಮಾನ. ಶುಕ್ರವಾರ ಬಿಡುಗಡೆಯಾದರೆ, ಶನಿವಾರ, ಭಾನುವಾರ ರಜೆ ಇದ್ದು, ಸೋಮವಾರ ಸರ್ಕಾರಿ ರಜೆ ಸಿಕ್ಕರೆ ನಾಲ್ಕು ದಿನದಲ್ಲಿ ಹಣ ಹೇಗೆ ತೆಗೆಯಬಹುದು? ಎಷ್ಟು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಬಹುದು? ಎಲ್ಲಕ್ಕಿಂತ ಮೊದಲು ಸಿನಿಮಾವನ್ನು ಯಾವುದಾದರೂ ಒಂದು ಅಂಶ ಇಟ್ಟುಕೊಂಡು ಹೇಗೆ ಹೈಪ್ ಮಾಡಬಹುದು? ಅಂತೆಲ್ಲಾ ಗಣಿತ ಮಾಡುತ್ತಾರೆ. ಒಂದು ಪಕ್ಷ ಮಂಗಳವಾರದಿಂದ ಮತ್ತೆ ಶುಕ್ರವಾರದ ತನಕ ಗೃಹ ತುಂಬಿದರೆ ನಿರ್ಮಾಪಕರಿಗೆ ಲಾಭದ ಪರಾಕಾಷ್ಟೆ. ಹಾಗಂತ, ಇದು ಎಲ್ಲರಿಗೂ ಸಾಧ್ಯ ಎನ್ನುವಂತಿಲ್ಲ.
ಪ್ರತಿ ಹೀರೋನ ಹಿಂದೆ ಒಂದೊಂದು ಆರ್ಥಿಕ ಗಣಿತವಿರುತ್ತದೆ. ಒಬ್ಬರದ್ದು ಇನ್ನೊಬ್ಬರಿಗೆ ಹೊಂದುವುದಿಲ್ಲ. ಪ್ರತಿ ಸಿನಿಮಾ, ಪ್ರತಿ ಗೆಲುವಿನ ನಂತರ ಇದು ಬದಲಾಗುತ್ತಾ ಸಾಗುತ್ತದೆ. ಅದಕ್ಕೆ ತಕ್ಕಂತೆ ಸಿನಿಮಾ ವ್ಯವಹಾರಗಳು ನಡೆಯುತ್ತಿರುತ್ತದೆ.
ನಿರ್ಮಾಪಕರ ಆದಾಯ ಪಕ್ಕಕ್ಕೆ ಇಡಿ. ಹೀರೋಗಳ ಸಂಭಾವನೆ ಕೂಡ ಏರಿದೆ. ಮೊದಲು ಇಷ್ಟು ಅಷ್ಟು ಅಂತ ಚೌಕಾಸಿ ಮಾಡಿ ಕ್ಯಾಶ್ ಪಡೆಯುತ್ತಿದ್ದ ಎಷ್ಟೋ ಹೀರೋಗಳು ಈಗ ಸ್ಯಾಟಲೈಟ್ ರೈಟ್ಸ್, ಆದಾಯ ಬರುವ ವಿತರಣಾ
ವಲಯವನ್ನು ತಾವೇ ಇಟ್ಟುಕೊಳ್ಳುವುದರಿಂದ ಸಂಭಾವನೆ ಇಷ್ಟೇ ಅಂತ ಕೂಡ ಹೇಳಲು ಆಗುತ್ತಿಲ್ಲ.