Advertisement

ಅಲೆದಾಟ ತಪ್ಪಿಸಲಿದೆ ಒಪಿಡಿ ಘಟಕ

09:36 PM Mar 23, 2019 | Team Udayavani |

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಗೆ ಬರುವ ರೋಗಿಗಳು ಅಲೆದಾಡುವುದನ್ನು ತಪ್ಪಿಸಿ ಒಂದೇ ಸೂರಿನಡಿ ಎಲ್ಲಾ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜುಲೈ ತಿಂಗಳಲ್ಲಿ “ಜನಸ್ನೇಹಿ ಒಪಿಡಿ ಘಟಕ’ ಲೋಕಾರ್ಪಣೆಗೊಳ್ಳಲಿದೆ.

Advertisement

ಆಸ್ಪತ್ರೆ ಆವರಣದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಹೊರ ರೋಗಿಗಳ ಘಟಕ ನಿರ್ಮಿಸಲಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ವ್ಯಾಪ್ತಿಯ ಶತಮಾನಗಳ ಇತಿಹಾಸ ಹೊಂದಿರುವ ವಿಕ್ಟೋರಿಯಾ ಆಸ್ಪತ್ರೆಗೆ ನಿತ್ಯ ಸುಮಾರು 2ರಿಂದ 3 ಸಾವಿರ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ, ಇವರಿಗೆ ನಿರ್ದಿಷ್ಟವಾಗಿ ಒಂದು ಕಡೆ ಎಲ್ಲಾ ಚಿಕಿತ್ಸೆ ಇಂದಿಗೂ ಸಿಗುತ್ತಿಲ್ಲ.

ಈ ವಿಂಗಡಣೆಯಿಂದ ಆರೋಗ್ಯ ಸಮಸ್ಯೆಯೆಂದು ಬರುವ ರೋಗಿ, ಒಂದೊಂದು ರೋಗಕ್ಕೆ ಒಂದೊಂದು ಆಸ್ಪತ್ರೆಯಂತೆ ಕನಿಷ್ಠ ಮೂರ್‍ನಾಲ್ಕು ಕಟ್ಟಡ ಸುತ್ತಾಡಬೇಕು, ನಂತರ ಅಲ್ಲಿನ ಪ್ರಯೋಗಾಲಯಗಳಿಗೆ ಅಲೆದಾಡಬೇಕಾದ ಅನಿವಾರ್ಯತೆ ಇದೆ. ಈ ಕಟ್ಟಡ ಅಲೆಯುವ ಗೊಂದಲ ಹಾಗೂ ಶ್ರಮದಿಂದ ರೋಗಿಗಳು ಹಾಗೂ ಅವರ ಜತೆಗಾರರು ಹೈರಾಣಾಗುತ್ತಿದ್ದಾರೆ.

ಈ ಅಲೆದಾಟ ತಪ್ಪಿಸಿ, ಒಂದೇ ಕಟ್ಟಡದಲ್ಲಿ ಎಲ್ಲಾ ರೋಗಗಳಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸುವ ಸಲುವಾಗಿ ಒಂದೇ ಕಟ್ಟಡದಲ್ಲಿ ಎಲ್ಲಾ ರೋಗಗಳ ಚಿಕಿತ್ಸೆ, ವೈದ್ಯರ ಸಲಹೆ, ಪ್ರಯೋಗಾಲಯಗಳು ಹಾಗೂ ಔಷಧ ಮಳಿಗೆ ಬರುವಂತೆ ಸಮಗ್ರ ಒಪಿಡಿ ಘಟಕ ಆರಂಭಿಸಲು ಬಿಎಂಸಿಆರ್‌ಐ ಮುಂದಾಗಿದೆ. ಈ ಸಂಬಂಧ ಹೊರರೋಗಿಗಳ ಘಟಕದ ಮೇಲೆ ಜನವರಿಯಿಂದಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

30 ಕೋಟಿ ರೂ. ವೆಚ್ಚದಲ್ಲಿ ಐದು ಮಹಡಿಯ ಹೆಚ್ಚುವರಿ ಕಟ್ಟಡ ನಿರ್ಮಾಣವಾಗುತ್ತಿದೆ. ಬರುವ ಜೂನ್‌ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ. ನಂತರ ವಿಕ್ಟೋರಿಯಾ ಸಮುತ್ಛಯದ ವಿವಿಧ ಆಸ್ಪತ್ರೆಗಳ ಹೊರರೋಗಿ ಘಟಕಗಳು ರಡೂ ಕಡೆ ಕಾರ್ಯ ಆರಂಭಿಸಲಿವೆ. ಈ ಮೂಲಕ ಇಲ್ಲಿಯೇ ವಿವಿಧ ರೋಗಗಳಿಗೂ ಚಿಕಿತ್ಸೆ, ವೈದ್ಯರ ಸಲಹೆ ಮಾರ್ಗದರ್ಶನ, ಪ್ರಯೋಗಾಲಯ, ಔಷಧಾಲಯ ಸೇವೆ ಲಭ್ಯವಾಗಲಿದೆ.

Advertisement

ಮೊದಲು ಆಸ್ಪತ್ರೆಗೆ ಬರುವ ರೋಗಗಳು ಚಿಕಿತ್ಸೆಗಾಗಿ ನೆಫ್ರಾಲಜಿ, ಪಿಎಂಎಸ್‌ಎಸ್‌ವೈ, ಮಿಂಟೋ, ವಾಣಿವಿಲಾಸ ಆಸ್ಪತ್ರೆಗಳಿಗೆ ಅಲೆದಾಡದೆ ನೇರವಾಗಿ ಈ ಸಮಗ್ರ ಒಪಿಡಿ ಘಟಕಕ್ಕೆ ಬಂದು ಪ್ರಾಥಮಿಕ ಚಿಕಿತ್ಸೆ ಪಡೆದು ಆ ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದವರೆ ಮಾತ್ರ ಸಂಬಂಧಪಟ್ಟ ವಿಭಾಗ/ಸಮುಚ್ಚಯ ಅಥವಾ ಆಸ್ಪತ್ರೆಗೆ ತೆರಳಲು ಸೂಚಿಸಲಾಗುತ್ತದೆ.

ಆದರೆ, ಹೊಸ ಸಮುಚ್ಚಯದಲ್ಲಿ ಹೊರ ರೋಗಿಗಳಿಗೆ ಮಾತ್ರ ಸೇವೆ ದೊರೆಯಲಿದ್ದು, ಚಿಕಿತ್ಸೆಗಾಗಿ ಶುಲ್ಕ ಪಾವತಿಸಿ, ಹೆಸರು ಬರೆಸಲು, ಸಂಬಂಧಪಟ್ಟ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಪ್ರಯೋಗಾಲಯದ ಪರೀಕ್ಷೆ ಅಗತ್ಯ ಇರುವ ರೋಗಿಗಳ ರಕ್ತ ಮತ್ತು ಮೂತ್ರವನ್ನು ಇಲ್ಲೇ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಗತ್ಯ ಚುಚ್ಚುಮದ್ದು, ಔಷಧ ವಿತರಣೆ ಇಲ್ಲಿಯೇ ಲಭ್ಯವಾಗಲಿದೆ ಎಂದು ಬಿಎಂಸಿಆರ್‌ಐ ವೈದ್ಯರು ತಿಳಿಸಿದರು.

ಎಲ್ಲೆಲ್ಲಿ ಅಲೆದಾಟ?
-ಹೊಟ್ಟೆ ನೋವು ಅಥವಾ ಕಿಡ್ನಿ ಸಮಸ್ಯೆ- ನೆಫ್ರೋ ಯುರಾಲಜಿ ಘಟಕ
-ಹೃದಯ, ಲಿವರ್‌ (ಯಕೃತ್‌), ನರ ರೋಗ- ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆ,
-ಗರ್ಭಿಣಿ, ಮಕ್ಕಳ ಆರೋಗ್ಯ- ವಾಣಿ ವಿಲಾಸ ಆಸ್ಪತ್ರೆ
-ದಂತ ಚಿಕಿತ್ಸೆ- ದಂತ ವೈದ್ಯಕೀಯ ಆಸ್ಪತ್ರೆ
-ಕಣ್ಣಿನ ಸಮಸ್ಯೆ – ಮಿಂಟೋ ಆಸ್ಪತ್ರೆ
-ಸುಟ್ಟ ಗಾಯ- ಬೆಂಕಿ ಅನಾಹುತ ವಿಭಾಗ
-ಚರ್ಮ ರೋಗ- ಚರ್ಮರೋಗ ಘಟಕ

ನೋವಿನಿಂದ ಆಸ್ಪತ್ರೆಗೆ ಬರುವ ರೋಗಿಗಳು ಒಂದೊಂದು ರೋಗಕ್ಕೆ ಒಂದೊಂದು ಘಟಕ ಅಲೆಯುವುದು ಕಷ್ಟ. ಇದನ್ನು ತಪ್ಪಿಸುವ ಉದ್ದೇಶದಿಂದ ಒಂದೇ ಸೂರಿನಡಿ ಎಲ್ಲಾ ರೋಗಗಳ ಒಪಿಡಿ ಘಟಕಗಳನ್ನು ತೆರೆಯಲಾಗುತ್ತಿದ್ದು, ಮೂರ್‍ನಾಲ್ಕು ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ.
-ಡಾ. ಎಚ್‌.ಎಸ್‌.ಸತೀಶ್‌, ಬಿಎಂಸಿಆರ್‌ಐ ನಿರ್ದೇಶಕ ಹಾಗೂ ಡೀನ್‌

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next