Advertisement
ನೆರೆಯ ದ್ವೀಪರಾಷ್ಟ್ರದಲ್ಲಿ ಪೂರ್ಣ ಪ್ರಮಾಣದ ಸರಣಿ ಆಡಲಿರುವ ಟೀಮ್ ಇಂಡಿಯಾ ಎಂಥ ಸಾಧನೆ ಮಾಡೀತು, ಇತ್ತೀಚೆಗೆ ತವರಿನಲ್ಲಿ ಅಷ್ಟೇನೂ ಮಿಂಚದ ಲಂಕಾ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸೀತೇ… ಎಂಬೆಲ್ಲ ಕುತೂಹಲಕ್ಕೆ ಇಲ್ಲಿ ಉತ್ತರ ಸಿಗಬೇಕಿದೆ.
Related Articles
ಭಾರತದ ಕ್ರಿಕೆಟ್ ಚಕ್ರ ಗಾಲೆಯಿಂದ ಮತ್ತೆ ಗಾಲೆಗೆ ತಿರುಗಿ ಬಂದುದು ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿ. 2015ರಲ್ಲಿ ಕೊನೆಯ ಸಲ ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತ ಗಾಲೆಯಲ್ಲೇ ಪ್ರಥಮ ಟೆಸ್ಟ್ ಆಡಿತ್ತು. ಗೆಲುವಿಗೆ ಕೇವಲ 178 ರನ್ ಸವಾಲು ಪಡೆದ ಕೊಹ್ಲಿ ಪಡೆ 112 ರನ್ನಿಗೆ ಕುಸಿದು 63 ರನ್ನುಗಳ ಸೋಲಿಗೆ ತುತ್ತಾಗಿತ್ತು. ಆದರೆ ಮುಂದಿನದ್ದೆಲ್ಲ ಇತಿ ಹಾಸವಾಗಿ ದಾಖಲಾಯಿತು.
Advertisement
ಕೊಲಂಬೋದಲ್ಲಿ ನಡೆದ ಉಳಿದೆರಡು ಟೆಸ್ಟ್‌ಗಳನ್ನು ಕ್ರಮವಾಗಿ 278 ರನ್ ಹಾಗೂ 117 ರನ್ ಅಂತರದಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಅಷ್ಟೇ ಅಲ್ಲ, ಅನಂತರದ ಸರಣಿಗಳಲ್ಲಿ ಸಾಲು ಸಾಲು ಗೆಲುವನ್ನು ಕಾಣುತ್ತ ಹೋಯಿತು. ವೆಸ್ಟ್ ಇಂಡೀಸ್, ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ ಗೆದ್ದ ಹಿರಿಮೆ ಟೀಮ್ ಇಂಡಿಯದ್ದಾಗಿತ್ತು. ಗಾಲೆ ಸೋಲಿನ ಬಳಿಕ ಆಡಿದ 23 ಟೆಸ್ಟ್‌ಗಳಲ್ಲಿ ಭಾರತ ಸೋತದ್ದು ಒಂದರಲ್ಲಿ ಮಾತ್ರ. ಅದು ಆಸ್ಟ್ರೇಲಿಯ ಎದುರಿನ ಪುಣೆ ಪಂದ್ಯವಾಗಿತ್ತು.
ಒಟ್ಟಾರೆ, ಅಂದು ಗಾಲೆಯಲ್ಲಿ ಅನುಭವಿಸಿದ ಸೋಲನ್ನೇ ಸವಾಲಾಗಿ ಸ್ವೀಕರಿಸಿದ ಭಾರತ ಟೆಸ್ಟ್ ಕ್ರಿಕೆಟಿನ ಅಗ್ರಮಾನ್ಯ ತಂಡವಾಗಿ ಹೊರಹೊಮ್ಮಿದ್ದೊಂದು ಸುಂದರ ಇತಿಹಾಸ. ಈಗ ಮತ್ತೆ ಭಾರತದ ಟೆಸ್ಟ್ ರಥದ ಗಾಲಿ ಗಾಲೆಯತ್ತ ಉರುಳಿ ಬಂದಿದೆ. ಇಲ್ಲಿ ಕೊಹ್ಲಿ ಬಳಗ ಕಳೆದ ಸೋಲಿಗೆ ಸೇಡು ತೀರಿಸಿಕೊಂಡು ಸರಣಿಯನ್ನು ಶುಭಾರಂಭ ಮಾಡೀತೇ ಎಂಬುದೊಂದು ಕುತೂಹಲ. ಅಂದಹಾಗೆ ಅಂದಿನ ಗಾಲೆ ಟೆಸ್ಟ್ ವೇಳೆ ರವಿಶಾಸಿŒ ಟೀಮ್ ಡೈರೆಕ್ಟರ್ ಆಗಿದ್ದರು. ಈ ಬಾರಿ ಕೋಚ್ ಆಗಿ ನೂತನ ಜವಾಬ್ದಾರಿ ಹೊತ್ತಿದ್ದಾರೆ.
ಭಾರತಕ್ಕೆ ಓಪನಿಂಗ್ ಚಿಂತೆಎಲ್ಲವೂ ಕ್ಯಾಪ್ಟನ್ ಕೊಹ್ಲಿ ಬಯಸಿ ದಂತೆಯೇ ಆದುದರಿಂದ ಭಾರತ ಹೆಚ್ಚು ಲವಲವಿಕೆ ಹಾಗೂ ಉತ್ಸಾಹದಿಂದ ಆಡ ಬಹುದೆಂಬ ನಿರೀಕ್ಷೆ ಎಲ್ಲರದು. ಆಟಗಾರರ ಫಾರ್ಮ್ ಕೂಡ ಉತ್ತಮ ಮಟ್ಟದಲ್ಲೇ ಇದೆ. ಸದ್ಯದ ಚಿಂತೆಯೆಂದರೆ ಓಪನಿಂಗ್ ಮಾತ್ರ. ಈ ಸರಣಿಯಲ್ಲಿ ಮುರಳಿ ವಿಜಯ್-ಕೆ.ಎಲ್. ರಾಹುಲ್ ಭಾರತದ ಇನ್ನಿಂಗ್ಸ್ ಆರಂಭಿಸಬೇಕಿತ್ತು. ಆದರೆ ಇವರಿಬ್ಬರ ಸೇವೆ ಯಿಂದ ತಂಡ ವಂಚಿತವಾಗಿದೆ. ಹೀಗಾಗಿ ಶಿಖರ್ ಧವನ್-ಅಭಿನವ್ ಮುಕುಂದ್ ಜೋಡಿ ಕಣಕ್ಕಿಳಿಯಲಿದೆ. ಇವರಲ್ಲಿ ಮುಕುಂದ್‌ಗೆ ಹೆಚ್ಚಿನ ಅನುಭವವಿಲ್ಲ. ಆಸ್ಟ್ರೇಲಿಯ ವಿರುದ್ಧ ಬೆಂಗಳೂರು ಟೆಸ್ಟ್ ಆಡಿದರೂ ಒಟ್ಟು ಗಳಿಸಿದ್ದು 16 ರನ್ ಮಾತ್ರ. ಅಕಸ್ಮಾತ್ ಓಪನಿಂಗ್ ವೈಫಲ್ಯವೇನಾದರೂ ಎದುರಾದಲ್ಲಿ ಭಾರತಕ್ಕೆ ಗಂಡಾಂತರ ಎದುರಾಗಲೂಬಹುದು.
ಪೂಜಾರ, ಕೊಹ್ಲಿ, ರಹಾನೆ ಬ್ಯಾಟಿಂಗ್ ಸರದಿಯಲ್ಲಿ ಮುಂದುವರಿಯಲಿದ್ದಾರೆ. ಸಾಹಾ ಅನಿವಾರ್ಯ. ರೋಹಿತ್ ಅಥವಾ ಪಾಂಡ್ಯ ಒಂದು ಸ್ಥಾನ ತುಂಬಬಹುದು. ತವರಿನಲ್ಲೇ ಲಂಕಾ ಪರದಾಟ
ಕುಮಾರ ಸಂಗಕ್ಕರ, ಮಾಹೇಲ ಜಯವರ್ಧನ ಅವರ ನಿವೃತ್ತಿ ಬಳಿಕ ಶ್ರೀಲಂಕಾ ಒಂದು ಸಾಮಾನ್ಯ ತಂಡವಾಗಿ ಗೋಚರಿಸುತ್ತಿದೆ. ಮೊನ್ನೆ ಮೊನ್ನೆ ತವರಿನಲ್ಲೇ ಜಿಂಬಾಬ್ವೆಯಂಥ ಕೆಳ ದರ್ಜೆಯ ತಂಡದೆದುರು ಏಕದಿನ ಸರಣಿಯಲ್ಲಿ ಸೋಲಿನ ಪೆಟ್ಟು ತಿಂದಿತ್ತು. ಆದರೆ ಟೆಸ್ಟ್‌ನಲ್ಲಿ ಸೋಲಿನ ದವಡೆಯಿಂದ ಪಾರಾಗಿ ಮಾನ ಉಳಿಸಿಕೊಂಡಿತ್ತು. ಹೀಗಾಗಿ ಹೆಚ್ಚು ಬಲಿಷ್ಠ ಹಾಗೂ ನಂ.1 ತಂಡವಾದ ಭಾರತದ ವಿರುದ್ಧ ಲಂಕಾ ಪಡೆ ಅಗ್ನಿಪರೀಕ್ಷೆ ಎದುರಿಸಿದರೆ ಅಚ್ಚರಿಯೇನಿಲ್ಲ.
ಪ್ರವಾಸಿ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ಸೋತ ಬಳಿಕ ಏಂಜೆಲೊ ಮ್ಯಾಥ್ಯೂಸ್ ನಾಯಕತ್ವದ ಉಸಾಬರಿಯೇ ಬೇಡ ಎಂದು ದೂರ ಸರಿದಿದ್ದಾರೆ. ನಾಯಕನಾಗಿ ನೇಮಕಗೊಂಡ ದಿನೇಶ್ ಚಂಡಿಮಾಲ್ ನ್ಯುಮೋನಿಯಾದಿಂದ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಗಾಲೆಯಲ್ಲಿ ಲಂಕಾ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹಿರಿಯ ಸ್ಪಿನ್ನರ್ ರಂಗನ ಹೆರಾತ್ ಪಾಲಾಗಿದೆ. ಕಪ್ತಾನನ ಎಡಗೈ ಸ್ಪಿನ್ ಆಕ್ರಮಣವನ್ನು ಯಶಸ್ವಿಯಾಗಿ ನಿಭಾಯಿಸಿದರೆ ಭಾರತ ಅರ್ಧ ಪಂದ್ಯ ಗೆದ್ದಂತೆ. ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಹೆರಾತ್ 11 ವಿಕೆಟ್ ಉರುಳಿಸಿದ್ದನ್ನು ಮರೆಯುವಂತಿಲ್ಲ. ಬೌಲಿಂಗಿಗೆ ಹೋಲಿಸಿದರೆ ಲಂಕೆಯ ಬ್ಯಾಟಿಂಗ್ ವಿಭಾಗದಲ್ಲಿ ಒಂದಿಷ್ಟು ವೈವಿಧ್ಯ ಇರುವುದನ್ನು ಗಮನಿಸಬಹುದು. ತರಂಗ, ಕರುಣಾರತ್ನೆ, ಗುಣರತ್ನೆ, ಡಿಕ್ವೆಲ್ಲ, ಗುಣತಿಲಕ, ಮೆಂಡಿಸ್, ಮ್ಯಾಥ್ಯೂಸ್ ಅವರೆಲ್ಲ ಉತ್ತಮ ಹೋರಾಟ ಸಂಘಟಿಸಿಯಾರೆಂಬ ನಂಬಿಕೆ ಇದೆ.