ಶಹಾಪುರ: ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ನಗರದ ನಾಗರ ಕೆರೆ, ಮಾವಿನ ಕೆರೆ ತುಂಬಿವೆ. ಅಲ್ಲದೇ ಸಗರಾದ್ರಿ ಬೆಟ್ಟದಲ್ಲಿ ಹರಿಯುವ ಜಪಪಾತದ ಸೌಂದರ್ಯ ಸವಿಯಲು ಜನಸ್ತೋಮವೇ ಬೆಟ್ಟದ ಹಲವೆಡೆ ಗುಂಪು ಗುಂಪಾಗಿ ಆಗಮಿಸಿ, ನಿಸರ್ಗ ಸೌಂದರ್ಯ ಸವಿಯುತ್ತಿರುವುದು ಬುಧವಾರ ಕಂಡುಬಂತು.
ಒಂದಡೆ ಭಾರಿ ಮಳೆಯಿಂದಾಗಿ ನಗರದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾದರೆ, ಇನ್ನೊಂದಡೆ ಸಗರಾದ್ರಿ ಬೆಟ್ಟದ ಸೌಂದರ್ಯ ಹೆಚ್ಚಿಸಿದೆ. ಹೀಗಾಗಿ ಪ್ರಕೃತಿ ಪ್ರಿಯರು ಬೆಟ್ಟಕ್ಕೆ ತೆರಳಿ ನಿಸರ್ಗ ಸೌಂದರ್ಯ ಸವಿದು ಸಂತಸಗೊಂಡರು. ವ್ಯಾಪಾರಸ್ಥರು ಮಳೆಯಿಂದಾಗಿ ಉಂಟಾದ ನಷ್ಟಕ್ಕೆ ಮರಗುವಂತಾಗಿದೆ.
ನಾಗರಪಂಚಮಿ ಹಬ್ಬದ ಅಂಗವಾಗಿ ಮನೆಯಲ್ಲಿ ರವೆ ಉಂಟೆ, ಶೇಂಗಾ-ಬೆಲ್ಲದುಂಡೆ, ಚಕಲಿ, ಕೋಡುಬಳೆ ಸೇರಿದಂತೆ ವಿವಿಧ ಖಾದ್ಯ ಕಟ್ಟಿಕೊಂಡು ಒಂದು ದಿನದ ಪಿಕ್‌ನಿಕ್‌ಗಾಗಿ ಸಗರಾದ್ರಿ ಬೆಟ್ಟದ ವಿಶೇಷ ಸ್ಥಳಗಳಾದ ಸಿದ್ಧಲಿಂಗೇಶ್ವರ ಬೆಟ್ಟ, ಕೋಟೆಯೊಳಗಿನ ಮಂದಾಕಿನಿ, ತಾವರಗೆರೆ ಇತರೆಡೆ ಕುಟುಂಬಸ್ಥರು, ಮಕ್ಕಳು, ಯುವಕ-ಯುವತಿಯರು ತೆರಳಿ ಪ್ರಕೃತಿ ಸೌಂದರ್ಯ ಸವಿಯುವುದರಲ್ಲಿ ನಿರತರಾಗಿರುವುದು ಕಂಡುಬಂತು. ವಿಶೇಷವಾಗಿ ಫಾಲ್ಸ್‌ನಲ್ಲಿ ಮಕ್ಕಳು ನೀರಲ್ಲಿ ಆಟವಾಡುವ ಮೂಲಕ ಖುಷಿ ಪಟ್ಟರು.
ನಳನಳಿಸಿದ ಕೆರೆಗಳ ಸೌಂದರ್ಯ
ನಗರ ಪ್ರಮುಖ ಕೆರೆಗಳಾದ ನಾಗರ ಕೆರೆ ಮತ್ತು ಮಾವಿನ ಕೆರೆ ತುಂಬಿ ನಳನಳಿಸುತ್ತಿವೆ. ಮಾವಿನ ಕೆರೆ ಒಡ್ಡಿನ ಸುತ್ತಲೂ ಸಿಮೆಂಟ್ ರಸ್ತೆ ಇರುವುದರಿಂದ ನಿತ್ಯ ಆ ರಸ್ತೆ ಮೇಲೆ ವಾಕಿಂಗ್ ನಡೆಸುವ ಜನ. ಇದೀಗ ನಳನಳಿಸುತ್ತಿರುವ ನೀರನ್ನು ಕಂಡು ಸಂತಸ ವ್ಯಕ್ತಪಡಿಸುತ್ತಾರೆ. ಇಡಿ ಕೆರೆ ತುಂಬಿ ತುಳುಕುತ್ತಿದ್ದು, ಹಿಂಬದಿ ಬೆಟ್ಟ ಹಸಿರು ವಾತಾವರಣ ಆಹ್ಲಾದಕರವಾಗಿದೆ ಎನ್ನುತ್ತಾರೆ ಪ್ರಕೃತಿ ಪ್ರಿಯರು. ಅಲ್ಲದೇ ಎರಡು ಕೆರೆ ತುಂಬಿರುವುದರಿಂದ ನಗರದ ಕೊಳವೆಬಾವಿಯಲ್ಲಿ ಬೇಸಿಗೆಗೆ ಬತ್ತಿ ಹೋಗಿದ್ದ ಅಂತರ್ಜಲಮಟ್ಟ ಹೆಚ್ಚಾಗಲಿದೆ ಎಂದು ಶಿಕ್ಷಕ ಬಸವರಾಜ ಚಲವಾದಿ ಆಶಯ ವ್ಯಕ್ತಪಡಿಸಿದ್ದಾರೆ.
–ಮಲ್ಲಿಕಾರ್ಜುನ ಮುದ್ನೂರ