ಸೊರಬ: ಬೇಸಿಗೆಯ ಕೆನ್ನಾಲಿಗೆಗೆ ನೀರಿನ ಅಭಾವ ಹೆಚ್ಚುತ್ತಲಿದ್ದು, ತಾಲೂಕಿನಲ್ಲಿ ಹರಿದಿರುವ ಪ್ರಮುಖ ನದಿಗಳಾದ ವರದಾ, ದಂಡಾವತಿ ಸೇರಿ ಜಲ ಮೂಲಗಳು ಬರಿದಾಗ ತೊಡಗಿವೆ. ಇತ್ತ ರೈತಾಪಿ ವರ್ಗ ಮಾತ್ರ ಮುಂಗಾರು ಆಗಮನದ ನಿರೀಕ್ಷೆಯಲ್ಲಿದೆ.
ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಸು. 890 ಕೆರೆಗಳನ್ನು ಹೊಂದಿರುವ ತಾಲೂಕು ಎಂದು ಗುರುತಿಸಲ್ಪಟ್ಟಿದ್ದರೂ, ಬಹುತೇಕ ಕೆರೆಗಳು ಬರಿದಾಗಿವೆ. ಪ್ರಮುಖ ನದಿಗಳಾದ ವರದಾ ಹಾಗೂ ದಂಡಾವತಿಯಲ್ಲಿ ಹನಿ ನೀರಿನ ಹರಿವು ಇಲ್ಲದೇ ನದಿ ತಟದಲ್ಲಿರುವ ಗ್ರಾಮಗಳಲ್ಲೂ ಕುಡಿಯುವ ನೀರಿಗೂ ಸಹ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಕ್ರಮ ಪಂಪ್‌ಸೆಟ್ ಹಾವಳಿ: ಕಳೆದ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ನದಿಗಳಲ್ಲಿ ನೀರಿನ ಕೊರತೆಯ ನಡುವೆಯೂ ಚೆಕ್ ಡ್ಯಾಂಗಳ ನಿರ್ಮಾಣದಿಂದ ಕೊಂಚ ನೀರನ್ನು ಸಂಗ್ರಹಿಸಲಾಗಿತ್ತು. ಆದರೆ, ನದಿ ದಡದ ಕೆಲವರು ತಮ್ಮ ವಾಣಿಜ್ಯ ಬೆಳೆಗಳ ರಕ್ಷಣೆಗಾಗಿ ನದಿ ನೀರನ್ನು ಎತೇಚ್ಛವಾಗಿ ಬಳಸಿದ್ದರ ಪರಿಣಾಮ ನದಿಗಳಲ್ಲಿ ನೀರೇ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿ ವಾಣಿಜ್ಯ ಬೆಳೆಗಾರರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಪಂಪ್ ಸೆಂಟ್ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ವನ್ಯ ಜೀವಿಗಳ ರೋಧನೆ: ಕುಡಿಯುವ ನೀರಿನ ತೀವ್ರ ಅಭಾವವಿರುವ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಿಗೆ ಸ್ಥಳೀಯ ಆಡಳಿತಗಳು ಟ್ಯಾಂಕರ್ ಮೂಲಕ ನೀರನ್ನು ಪೂರೈಸಬಹುದು. ಆದರೆ, ವನ್ಯ ಜೀವಿಗಳ ರೋಧನ ಕೇಳುವವರೇ ಇಲ್ಲದಂತಾಗಿದೆ. ಈ ಹಿಂದೆ ಅರಣ್ಯ ದಂಚಿನ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ವನ್ಯ ಜೀವಿಗಳ ದಾಹವನ್ನು ತಣಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿತ್ತು. ಈ ಭಾರಿ ಬಿರು ಬೇಸಿಗೆಯ ಸಂದರ್ಭದಲ್ಲೂ ವನ್ಯ ಜೀವಿಗಳಿಗೆ ನೀರುಣಿಸಲು ಕ್ರಮ ಕೈಗೊಳ್ಳದಿರುವುದು ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ವಾಡಿಕೆ ಮಳೆಯಲ್ಲಿ ಕುಂಠಿತ: ತಾಲೂಕಿನಲ್ಲಿ ರೈತಾಪಿ ವರ್ಗ ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದು, ತಮ್ಮ ಕೃಷಿ ಚಟುವಟಿಕೆಗೆ ಅಣಿಯಾಗುತ್ತಿದ್ದಾರೆ. ಆದರೇ, ವರುಣ ಮಾತ್ರ ಕೃಪೆ ತೋರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ತಾಲೂಕಿನ ಏಪ್ರಿಲ್ ತಿಂಗಳಲ್ಲಿ ವಾಡಿಕೆ ಮಳೆ ಪ್ರಮಾಣ 35 ಮೀ ಆಗಿದ್ದು, 2018ರಲ್ಲಿ 33 ಮೀ.ಮೀ ಮಳೆಯಾಗಿತ್ತು. ಆದರೆ, ಪ್ರಸಕ್ತ ವರ್ಷ 27.4ರಷ್ಟು ಮಳೆಯಾಗಿದೆ. ಉಳಿದಂತೆ ಮೇ ತಿಂಗಳಲ್ಲಿ 81 ಮೀ.ಮೀ ಮಳೆಯಾಗಬೇಕು. 2018ರಲ್ಲಿ 102 ಮೀ.ಮೀ ಮಳೆಯಾಗಿರುವುದು ದಾಖಲೆಯಾಗಿದೆ. ಈ ಬಾರಿ 0.4ರಷ್ಟು ಮಾತ್ರ ಮಳೆಯಾಗಿರುವುದು ಚಿಂತೆಗೀಡು ಮಾಡುವಂತಾಗಿದೆ. ಜೂನ್ ತಿಂಗಳಲ್ಲಿ 337 ಮೀ.ಮೀ ವಾಡಿಕೆ ಮಳೆಯಾಗಬೇಕಿದ್ದು, 2018ರಲ್ಲಿ 302ಮೀ.ಮೀ ಮಳೆಯಾಗಿದೆ. ಈ ಬಾರಿ ಜೂ. 7ರವರೆಗೆ ಮಳೆಯ ಕೊರತೆ ಮುಂದುವರಿದಿದೆ ಎಂಬುದು ಕೃಷಿ ಇಲಾಖೆಯ ಮಳೆ ಪ್ರಮಾಣದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಒಟ್ಟಾರೆ ತಾಲೂಕಿನಲ್ಲಿ ಪೂರ್ವ ಮುಂಗಾರು ಸಂಪೂರ್ಣವಾಗಿ ಕೈ ಕೊಟ್ಟಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಬೆಳೆಯಾಗಲಿ, ಬರಿದಾಗಿರುವ ಜಲ ಮೂಲಗಳು ಭರ್ತಿಯಾಗಲಿ. ಈ ನಿಟ್ಟಿನಲ್ಲಿ ವರಣ ದೇವ ಕೃಪೆ ತೋರಬೇಕಿದೆ.
•ಎಚ್.ಕೆ.ಬಿ. ಸ್ವಾಮಿ