Advertisement

ಭವಿಷ್ಯದಲ್ಲಿ ನೀರಿನ ಪರಿಸ್ಥಿತಿ ಇನ್ನೂ ಭೀಕರ

01:06 PM May 06, 2017 | Team Udayavani |

ದಾವಣಗೆರೆ: ಜಿಲ್ಲೆಯ ಜನರು ನೀರಿನ ಮಹತ್ವ ಅರಿಯದೇ ಇದ್ದರೆ ಮುಂದೆ ಇನ್ನೂ ಭೀಕರ ದಿನಗಳನ್ನು ಎದುರಿಸಬೇಕಾದ ಸ್ಥಿತಿ ಎದುರಾಗುವುದು ಖಚಿತ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಎಚ್ಚರಿಸಿದ್ದಾರೆ. ಶುಕ್ರವಾರ ಜಿಲ್ಲಾಡಳಿತ, ಕೂಲಿ ಕಾರ್ಮಿಕರ ಸಂಘಟನೆ, ಸುಗ್ರಾಮ ಸಂಘಟನೆ, ಭೂ ಹಕ್ಕುದಾರರ ವೇದಿಕೆ, ಸ್ಫೂರ್ತಿ ಸಂಸ್ಥೆಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನೀರು ಉಳಿಸಿ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.

Advertisement

ಜಿಲ್ಲೆಯ ಪ್ರಮುಖ ನೀರಿನ ಆಸರೆಯಾಗಿದ್ದ ತುಂಗಭದ್ರಾ ನದಿ ಸಂಪೂರ್ಣ ಬತ್ತಿಹೋಗಿದೆ. ಸದ್ಯ ಬೋರ್‌ವೆಲ್‌ಗ‌ಳಲ್ಲಿನ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆ ಬಾರದೇ ಇದ್ದರೆ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂದರು. ಪಾಲಿಕೆಯ 200 ಟ್ಯಾಂಕರ್‌ ಸೇರಿ ಒಟ್ಟು 600 ಟ್ಯಾಂಕರ್‌ಗಳಿಂದ ನಗರದ ಜನತೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಮನೂರು ಇತರೆ ಭಾಗಗಳಲ್ಲಿರುವ ಬೋರ್‌ವೆಲ್‌ಗ‌ಳಲ್ಲಿ ನೀರು ಇರುವ ತನಕ ಪೂರೈಕೆ ಮಾಡಬಹುದು.

ಅಷ್ಟರ ಒಳಗೆ ಮಳೆ ಬಾರದೇ ಇದ್ದರೆ ನೀರಿನ ಪೂರೈಕೆ ಸವಾಲಾಗಲಿದೆ. ಸಾರ್ವಜನಿಕರು ಸಮಸ್ಯೆ ಅರಿಯಬೇಕು. ಯಾವುದೇ ಕಾರಣಕ್ಕೂ ನೀರನ್ನು ಪೋಲು ಮಾಡದರೆ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.  ಸದ್ಯ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲೂ ನೀರಿನ ಸಮಸ್ಯೆ ಇದೆ. ಮೊದಲಿನ ರೀತಿ ಹಳ್ಳಿಗಳಲ್ಲಿನ ಕೆರೆ ಕಟ್ಟೆ ತುಂಬಿಕೊಂಡು ನಗರದಲ್ಲಿ ಇರುವಷ್ಟು ನೀರಿನ ಸಮಸ್ಯೆ ಎದುರಾಗದು ಎಂಬುದಾಗಿ ಹೇಳಲಾಗದ ಸ್ಥಿತಿ ಇಂದಿದೆ.

ಜಿಲ್ಲೆಯ 51 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅದರಲ್ಲಿ ಜಗಳೂರು ತಾಲ್ಲೂಕಿನ 34 ಹಳ್ಳಿಗಳಿಗೆ ಟ್ಯಾಂಕರ್‌ ನೀರೇ ಆಧಾರ. ಇದಕ್ಕೆಲ್ಲಾ ಕಾರಣ ನಾವು ಪ್ರಕೃತಿ ಮೇಲೆ ಮಾಡುತ್ತಿರುವ ದೌರ್ಜನ್ಯ ಆಗಿದೆ. ದೌರ್ಜನ್ಯ ನಿಲ್ಲಿಸಬೇಕಿದೆ ಎಂದು ಅವರು ಕಿವಿಮಾತು ಹೇಳಿದರು. ಈ ಹಿಂದೆ ಹಲವು ವರ್ಷಗಳ ಕಾಲ ಮಳೆ ಹೋದರೂ ಮರ ಒಣಗುತ್ತಿರಲಿಲ್ಲ. ನೀರಿನ ಅಭಾವ ಈ ಮಟ್ಟದಲ್ಲಿ ಇರುತ್ತಿರಲಿಲ್ಲ.

ಒಂದಿಷ್ಟು ಸಣ್ಣ ಬಾವಿ ತೋಡಿದರೂ ನೀರು ಸಿಗುತ್ತಿತ್ತು. ಇಂದು ನೂರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇದಕ್ಕೆ ಕಾರಣ ನಾವು ಹೆಚ್ಚು ಹೆಚ್ಚು ಬೋರ್‌ವೆಲ್‌ ಕೊರೆದಿರುವುದು. ಬೋರ್‌ವೆಲ್‌ಗ‌ಳಿಂದ ಹೆಚ್ಚು ನೀರು ತೆಗೆದಿದ್ದರಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಮರ, ಗಿಡಗಳಿಗೂ ಸಹ ನೀರು ಸಿಗದಂತೆ ಆಗಿದೆ ಎಂದು ಅವರು ಹೇಳಿದರು. ಸ್ಫೂರ್ತಿ ಸೇವಾ ಸಂಸ್ಥೆಯ ಕೆ.ಬಿ. ರೂಪನಾಯ್ಕ ಮಾತನಾಡಿ, ಇಂದು ಹಾಲಿಗಿಂತ ನೀರಿನ ಬೆಲೆ ಏರಿಕೆಯಾಗುತ್ತಿದೆ.

Advertisement

ಈ ಹಿಂದೆ ನಮ್ಮ ಪೂರ್ವಜರು ಇಟ್ಟಿದ್ದ ನೀರಿನ ಠೇವಣಿ ಖಾಲಿ ಮಾಡಿದ್ದೇವೆ. ಇದರಿಂದ ಈಗ ನೀರಿನ ಸಮಸ್ಯೆ ಉಂಟಾಗಿದೆ. ಇನ್ನಾದರೂ ಮಳೆ ನೀರಿನ ಬಳಕೆ ಹೆಚ್ಚಿಸಿ, ಭೂಮಿಯ ಪದರಗಳಲ್ಲಿ ನೀರು ಶೇಖರಣೆ ಆಗುವಂತೆ ನೋಡಿಕೊಳ್ಳಬೇಕು ಎಂದರು. ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷೆ ವೀರಮ್ಮ ಅಧ್ಯಕ್ಷತೆ ವಹಿಸಿದ್ದರು. 

ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ. ಸದಾಶಿವ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವೇದಮೂರ್ತಿ, ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ್‌, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಜಿ.ಎಂ. ರವೀಂದ್ರ, ರವೀಂದ್ರ ಮಲ್ಲಾಪುರ, ಮಹಾನಗರ ಪಾಲಿಕೆ ಅಧೀಕ್ಷಕ ಇಂಜಿನಿಯರ್‌ ಸತೀಶ್‌, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಪ್ರಗತಿಪರ ರೈತ ದಂಪತಿ ಶಂಕರ್‌ ಗೌಡ, ಸವಿತಾ ಶಂಕರ್‌ಗೌಡರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next