ಆಲಮಟ್ಟಿ: ಬೇಸಿಗೆಯ ಪ್ರಖರ ಬಿಸಿಲಿನ ತಾಪ ತಾಳದೇ ಜನಜಾನುವಾರುಗಳು ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ಕೆರೆ ತುಂಬಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಇದು ಅಖಂಡ ಕರ್ನಾಟಕ ರೈತ ಸಂಘ ನಡೆಸಿದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಶನಿವಾರ ಆಲಮಟ್ಟಿ ಎಡದಂಡೆ ಶಾಖಾ ಕಾಲುವೆ ಮೂಲಕ ಕೆರೆ ತುಂಬಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಚಾಲನೆ ನೀಡಿದ ನಂತರ ಮುಖ್ಯ ಸ್ಥಾವರದಲ್ಲಿ ವಿವಿಧ ರೈತ ಮುಖಂಡರುಗಳೊಂದಿಗೆ ಆಗಮಿಸಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸದಂತೆ ಕಾಲುವೆಗಳ ಮೂಲಕ ಕೆರೆ ತುಂಬಿಸುವಂತೆ ಆಗ್ರಹಿಸಿ 5 ದಿನಗಳವರೆಗೆ ಅಹೋರಾತ್ರಿ ಧರಣಿ ಮತ್ತು 3 ದಿನಗಳ ಕಾಲ ಆಮರಣ ಉಪವಾಸ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಕಾಲುವೆಗಳ ಮೂಲಕ ಕೆರೆಗೆ ನೀರು ಹರಿಸಿರುವುದು ಅಖಂಡ ಕರ್ನಾಟಕ ರೈತ ಸಂಘಕ್ಕೆ ಸಂದ ಜಯ ಎಂದರು.
ಆಮರಣ ಉಪಾವಸ ಕೈಗೊಂಡಿದ್ದ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮತ್ತು ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಅವರು ಧರಣಿ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ಪರವಾಗಿ ಭರವಸೆ ನೀಡಿ ಸೋಮವಾರದೊಳಗೆ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲು ನೀರು ಬಿಡದಿದ್ದರೆ ತಾವೂ ಕೂಡ ಹೋರಾಟ ಮಾಡುವುದಾಗಿ ಭರವಸೆ ನೀಡಿದ್ದರು. ಭರವಸೆಯಂತೆ ಕೆಬಿಜೆನ್ನೆಲ್ ಮುಖ್ಯ ಅಭಿಯಂತರ, ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ಜನತೆಯ ನೀರಿನ ದಾಹ ನೀಗಿಸಲು ರೈತರ ಪ್ರತಿನಿಧಿಯಾಗಿ ಹೋರಾಟ ಮಾಡಿದ ನಮ್ಮ ಸಂಘಟನೆಯ ಹೋರಾಟಕ್ಕೆ ಆದ್ಯತೆ ನೀಡಿ ಸಕಾಲಕ್ಕೆ ನೀರು ಹರಿಸಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳನ್ನು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಜನತೆಯ ಧ್ವನಿಯನ್ನು ಅರ್ಥೈಸಿಕೊಂಡ ಸರ್ಕಾರ ಬೇಸಿಗೆಯಲ್ಲಿ ಖಾಲಿಯಾಗುತ್ತಿರುವ ಕೆರೆಗಳನ್ನು ತುಂಬಿಸಲು ಆರಂಭ ಮಾಡಿದ್ದು ಸಂತಸದಾಯಕವಾಗಿದೆ ಎಂದರು.
ಸಂತೋಷ ಬಿರಾದಾರ, ಬಾಲಪ್ಪಗೌಡ ಲಿಂಗದಳ್ಳಿ, ಸಂಗನಗೌಡ ಕೊಳೂರ, ಬಸನಗೌಡ ಬಿರಾದಾರ, ಸಂತೋಷ ಕೊಣ್ಣೂರ, ಯಲ್ಲಾಲಿಂಗ ಹೂಗಾರ, ದೇವಪ್ಪ ವಾಲಿಕಾರ ಇದ್ದರು.