ಮಾನ್ವಿ: ಈ ತಿಂಗಳು ಅಂತ್ಯದವರೆಗೆ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಕುಡಿಯಲು ನೀರು ಬಿಡಬೇಕು ಎಂದು ಮಾಜಿ ಶಾಸಕ ಹಾಗು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈತಿಂಗಳು 28ರವರಗೆ ರಾಯಚೂರು ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ 2500 ಕ್ಯೂಸೆಕ್ ನೀರು ಬಿಡಲು ನಿರ್ಧರಿಸಲಾಗಿತ್ತು. ಆದರೆ ಈಗ ನಿರ್ಧರಿಸಿದ್ದಕ್ಕಿಂತ ಕಡಿಮೆ ನೀರು ಪೂರೈಸಲಾಗುತ್ತಿದೆ. ಇದರಿಂದಾಗಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗುತ್ತಿದೆ. ಕೊನೆ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ ಎಂದರು.
114 ಸೆಕ್ಷನ್ ಜಾರಿ ಮಾಡಿ ಕೇವಲ ರಾಯಚೂರು ಪಟ್ಟಣಕ್ಕೆ ಮಾತ್ರ ಕುಡಿಯಲು ಕಾಲುವೆಗೆ ನೀರು ಬಿಡಲಾಗಿದೆ. ಆದರೆ ಕಾಲುವೆ ಕೊನೆ ಭಾಗದ ತಾಲೂಕಿನಲ್ಲೂ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಆದ್ದರಿಂದ ಈ ತಿಂಗಳ ಅಂತ್ಯದವರೆಗೆ 2500 ಕ್ಯೂಸೆಕ್ ನೀರು ಹರಿಸಬೇಕು. ಸಾಧ್ಯವಾದರೆ ಮುಂದಿನ ಐದು ದಿನಗಳವರೆಗೆ ನೀರು ಹರಿಸಬೇಕು. ಇದರಿಂದ ಗ್ರಾಮೀಣ ಭಾಗದ ಕೆರೆಗಳನ್ನು ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾಡಾ ಅಧ್ಯಕ್ಷರಾಗಿರುವ ಶಾಸಕ ಹಂಪಯ್ಯ ನಾಯಕ ಅವರಿಗೆ ನೀರಾವರಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎನ್.ಎಸ್.ಬೋಸರಾಜು ಹೇಳಿದಂತೆ ಕೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರಸ್ತೆಗಳು ಸುಧಾರಣೆಯಾಗಿಲ್ಲ. ಪಟ್ಟಣದಲ್ಲಿ ಮೂರು ತಿಂಗಳಲ್ಲಿ ಕೆರೆ ನಿರ್ಮಿಸುವುದಾಗಿ ಹೇಳಿ ನಾಲ್ಕೂವರೆ ವರ್ಷಗಳೇ ಕಳೆದರೂ ಕೆರೆ ಕಾಮಗಾರಿ ಪೂರ್ಣವಾಗಿಲ್ಲ ಎಂದು ಆರೋಪಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಮಾಜಿ ತಾಲೂಕು ಅಧ್ಯಕ್ಷ ತಿಮ್ಮಾರೆಡ್ಡಿ ಭೀಗಾವತಿ, ಮುಖಂಡರಾದ ಉಮೇಶ ಸಜ್ಜನ, ಎ.ಬಾಲಸ್ವಾಮಿ ಕೊಡ್ಲಿ, ನಾಗನಗೌಡ ಸಾಹುಕಾರ, ಬಸನಗೌಡ ಕೊಕ್ಲೃಕಲ್, ವಿ.ಜನಾರ್ದನ, ವೆಂಕಟೇಶ ಕೋನಾಪುರಪೇಟೆ, ನಾಗರಾಜ ಕಬ್ಬೇರ ಸೇರಿದಂತೆ ಅನೇಕರಿದ್ದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಕಾಲುವೆ ನೀರಿನ ಸಮಸ್ಯೆಯನ್ನು ತಮ್ಮ ರಾಜಕೀಯ ಕುತಂತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಣೆಕಟ್ಟಿನಲ್ಲಿ 13.5 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದರೂ ನೀರು ಹರಿಸುತ್ತಿಲ್ಲ. ರೈತರನ್ನು
ಕಡೆಗಣಿಸಲಾಗುತ್ತಿದೆ.
ಬಸನಗೌಡ ಬ್ಯಾಗವಾಟ್ ಮಾಜಿ ಶಾಸಕರು