Advertisement
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿದ 209 ಕೆರೆಗಳಲ್ಲಿ ಕೇವಲ 52 ಕೆರೆಗಳಲ್ಲಷ್ಟೇ ನೀರು ಪೂರ್ಣ ಪ್ರಮಾಣದಲ್ಲಿದ್ದು, 116 ಕೆರೆಗಳಲ್ಲಿ ಅರ್ಧದಷ್ಟು ನೀರು ತುಂಬಿದ್ದರೆ, 22 ಕೆರೆಗಳಲ್ಲಿ ಶೇ.25ರಿಂದ 50ರಷ್ಟು ನೀರಿದೆ. 15 ಕೆರೆಗಳಲ್ಲಿ ಕಾಲುಭಾಗಕ್ಕಿಂತಲೂ ಕಡಿಮೆ ನೀರಿದ್ದು 4 ಕೆರೆಗಳು ಮಾತ್ರ ಖಾಲಿ ಉಳಿದಿದೆ.
Related Articles
Advertisement
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ 48 ಕೆರೆಗಳಿವೆ. ಜಿಲ್ಲಾಧಿಕಾರಿ ಹಾಗೂ ಜಿಪಂ ವ್ಯಾಪ್ತಿಗೆ ಸೇರಿದ ಬಹಳಷ್ಟು ಕೆರೆಗಳಿವೆ. ಅವುಗಳೆಲ್ಲವೂ ನೀರಿಲ್ಲದೆ ಭಣಗುಡುತ್ತಿವೆ. ಬೇಸಿಗೆ ಎದುರಾಗುವ ಮುನ್ನವೇ ನಾಗಮಂಗಲ ತಾಲೂಕಿನ 17 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಸೃಷ್ಟಿಯಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 18 ಟ್ಯಾಂಕರ್‌ಗಳಲ್ಲಿ ನಿತ್ಯ 38 ಬಾರಿ ಗ್ರಾಮಗಳಿಗೆ ನೀರೊದಗಿಸಲಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನ 4 ಹಾಗೂ ನಾಗಮಂಗಲ ತಾಲೂಕಿನ 7 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರೊದಗಿಸಲಾಗುತ್ತಿದೆ.
ಹಾಹಾಕಾರ ಎಲ್ಲೆಲ್ಲಿ: ನಾಗಮಂಗಲ ತಾಲೂಕಿನ ಅಣೆ ಚನ್ನಾಪುರ, ಬಲ್ಲಾವಳ್ಳಿ, ಚನ್ನೇಗೌಡನಕೊಪ್ಪಲು, ಗಾಣಿಗರ ಕೊಪ್ಪಲು, ಹೆಚ್.ಕ್ಯಾತನಹಳ್ಳಿ, ಕಂಬದಹಳ್ಳಿ, ಶಿಖರನಹಳ್ಳಿ, ಹೂವಿನಹಳ್ಳಿ, ಬಿದರಕೆರೆ, ಮಾಟನಕೊಪ್ಪಲು, ಮಸಗೋನಹಳ್ಳಿ, ಪಿ.ಚಿಟ್ಟನಹಳ್ಳಿ, ಕೆಂಚಗೋನಹಳ್ಳಿ, ವಡ್ಡರಹಳ್ಳಿ, ಶಿವನಹಳ್ಳಿ, ಮಲ್ಲನಕೊಪ್ಪಲು, ಹೆತ್ತಗೋನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಇದರಲ್ಲಿ ಹಲವು ಗ್ರಾಮಗಳಿಗೆ ಕನಿಷ್ಠ 2 ರಿಂದ 4 ಬಾರಿ ನಿತ್ಯ ನೀರು ಪೂರೈಸಲಾಗುತ್ತಿದೆ.
ಕೆ.ಆರ್.ಪೇಟೆ ತಾಲೂಕಿನ ಹಡವನಹಳ್ಳಿ ಕೊಪ್ಪಲು, ಗಂಗನಹಳ್ಳಿ, ಕೂಟಗಹಳ್ಳಿ, ಬಳ್ಳೇಕೆರೆ, ಮದ್ದೂರು ತಾಲೂಕಿನ ಹೊಸಕೆರೆ, ನಾಗಮಂಗಲ ತಾಲೂಕಿನ ತೊರೆ ಮಾವಿನಕೆರೆ, ಜೋಡಿ ಅಲ್ಪಹಳ್ಳಿ, ಮುದಿಗೆರೆ, ಅಳೀಸಂದ್ರ, ಗಾಣಸಂದ್ರ, ಪಿ.ಮಲ್ಲೇನಹಳ್ಳಿ, ಹಾಳಪ್ಪನಕೊಪ್ಪಲು ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸಲಾಗುತ್ತಿದೆ.
ಹೂಳು-ಜೊಂಡಿನದ್ದೇ ಕಾರು-ಬಾರು: ಜಿಲ್ಲೆಯ ಬಹ ಳಷ್ಟು ಕೆರೆಗಳು ಹೂಳಿನಿಂದ ತುಂಬಿಹೋಗಿದ್ದರೆ, ಮತ್ತಷ್ಟು ಕೆರೆಗಳು ಜೊಂಡಿನಿಂದ ಆವೃತವಾಗಿ ಕೆರೆಯೇ ಕಾಣದಂತಾಗಿದೆ. ಇಂತಹ ಕೆರೆಗಳಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕೆರೆಗಳ ಹೂಳೆತ್ತಿ ಸುವ ಕೆಲಸವೂ ನಡೆದಿಲ್ಲ, ಜೊಂಡುಗಳನ್ನು ತೆರವು ಮಾಡುವ ಕಾರ್ಯಕ್ಕೂ ಯಾರೊಬ್ಬರೂ ಮುಂದಾಗಿಲ್ಲ.
ಬೆಂಗಳೂರು-ಮೈಸೂರು ಹತ್ತು ಪಥಗಳ ರಸ್ತೆ ನಿರ್ಮಾಣಕ್ಕೆ ಕೆರೆಗಳ ಮಣ್ಣನ್ನು ಬಳಸುವುದಕ್ಕೆ ಜಿಪಂ ಯೋಜನೆ ರೂಪಿಸಿದ್ದು, ಅದು ನಿಗದಿಯಂತೆ ಕಾರ್ಯರೂಪಕ್ಕೆ ಬಂದರೆ ಒಂದಷ್ಟು ಕೆರೆಗಳ ಹೂಳು ತೆರವಾಗಬಹುದೆಂಬ ನಿರೀಕ್ಷೆ ಇದೆ.
ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ: ಕುಡಿಯುವ ನೀರಿನ ಸಮಸ್ಯೆ ಅರಿಯುವ ಸಲುವಾಗಿಯೇ ತಾ.ಪಂ. ಇಇ ಮತ್ತು ಎಇಇ ನೇತೃತ್ವದಲ್ಲಿ ಜಿಲ್ಲೆಯಲ್ಲಿ 3 ತಂಡಗಳನ್ನು ರಚಿಸಲಾಗಿದೆ. ಹಿಂದೆ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತೋ ಅಲ್ಲಿ ಮತ್ತೆ ಸಮಸ್ಯೆ ಮುಂದುವರಿದಿದೆಯೇ, ಸಮಸ್ಯೆ ಸೃಷ್ಟಿಯಾಗಬಹುದಾದ ಹೊಸ ಗ್ರಾಮಗಳು ಯಾವುವು,
ಎಲ್ಲಿ ಸಮಸ್ಯ ತೀವ್ರ ಸ್ವರೂಪದಲ್ಲಿರಲಿದೆ ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ. ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸುವ ಬಗ್ಗೆಯೂ ಕ್ರಮ ವಹಿಸಲು ಸೂಚಿಸಲಾಗಿದೆ. ಹಣಕಾಸಿನ ಕೊರತೆಯಾಗದಂತೆ ಪ್ರತಿ ತಾಲೂಕಿಗೆ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ತಿಳಿಸಿದರು.
ನಾಲಾ ಸಂಪರ್ಕ ಜಾಲವಿಲ್ಲ – ಅಧಿಕ ನೀರು ಪೋಲು: ಜಿಲ್ಲೆಯಲ್ಲಿ ಸುಮಾರು 340ಕ್ಕೂ ಹೆಚ್ಚು ಕೆರೆಗಳಿವೆ. ಇದರಲ್ಲಿ ಶೇ.75ಕ್ಕೂ ಹೆಚ್ಚು ಕೆರೆಗಳಿಗೆ ನಾಲಾ ನೀರಿನ ಸಂಪರ್ಕ ಜಾಲದಿಂದ ವಂಚಿತವಾಗಿವೆ. ಇದರಿಂದ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿ ಕೆಆರ್‌ಎಸ್ ಭರ್ತಿಯಾದರೂ ಜಲಾಶಯದಿಂದ ಹೊರಬಿಡುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲದಿರುವುದು ದುರಂತ.
ಈ ಬಾರಿ ಜುಲೈ ತಿಂಗಳಲ್ಲೇ ಕೆಆರ್‌ಎಸ್ ಭರ್ತಿಯಾಗಿ 1.30 ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಯಿತು. ಅದರಲ್ಲಿ ಹನಿ ನೀರು ಕೆರೆಗೆ ಸೇರದೆ ತಮಿಳುನಾಡು ಪಾಲಾಯಿತು. ಜಿಲ್ಲಾ ವ್ಯಾಪ್ತಿಯ ಕೆರೆಗಳೆಲ್ಲವೂ ಖಾಲಿ ಉಳಿದವು.