Advertisement

ಪಶು-ಪಕ್ಷಿಗಳ ದಾಹ ತಣಿಸಲು ನೀರಿನ ಗುಂಡಿ

03:09 PM Apr 13, 2019 | pallavi |
ಹಾನಗಲ್ಲ: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪ, ಕೈ ಕುಡುತ್ತಿರುವ ಮಳೆಯಿಂದಾಗಿ ಬೇಸಿಗೆಯಲ್ಲಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗುವುದು ಸಹಜ. ಅದು ಪ್ರಾಣಿಗಳಿಗೂ ತಪ್ಪಿದ್ದಲ್ಲ. ಮನುಷ್ಯ ತನ್ನ ಬೇಕು ಬೇಡಗಳನ್ನು ಪೂರೈಸಿಕೊಳ್ಳುವಷ್ಟು ಜಾಣ. ಆದರೆ, ಮೂಕಪ್ರಾಣಿಗಳ ವೇದನೆ ನೀಜಕ್ಕೂ ಶೋಚನೀಯ. ಇದನ್ನರಿತ ಅರಣ್ಯ ಇಲಾಖೆ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣಕ್ಕೆ ಮುಂದಾಗಿದೆ.
ಹಾನಗಲ್ಲ ಮೂಲತಃ ಮಲೆನಾಡು ಪ್ರದೇಶ. ಒಂದು ಕಾಲದಲ್ಲಿ ದಟ್ಟ ಕಾಡು, ವಿವಿಧ ಪ್ರಾಣಿಗಳು ಸ್ವತ್ಛಂದವಾಗಿ
ಜೀವಿಸುತ್ತಿದ್ದ ಭೂಮಿ ಮೇಲಿನ ಸ್ವರ್ಗದಂತಿತ್ತು. ಕಳೆದ ಕೆಲವು ವರ್ಷಗಳಿಂದ ನಿಧಾನವಾಗಿ ಅರಣ್ಯ ಪ್ರದೇಶ ಕ್ಷೀಣಿಸುತ್ತ ಅಷ್ಟೋ ಇಷ್ಟೊ ಉಳಿದಿದೆ. ಇನ್ನಾದರೂ ಜಾಗೃತರಾಗಿ ಉಳಿದ ಅರಣ್ಯವನ್ನಾದರೂ ಕಾಪಾಡಿಕೊಳ್ಳುವ
ಉದ್ದೇಶದಿಂದ ಸರ್ಕಾರ, ಸಾರ್ವಜನಿಕರು ಅರಣ್ಯ ಹಾಗೂ ಕಾಡುಪ್ರಾಣಿಗಳ ರಕ್ಷಣೆಗೆ ಹಲವು ಕ್ರಮ ತೆಗೆದುಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ.
ನೂರಾರು ಜಾತಿಯ ಗಿಡ-ಮರ: 8940 ಹೆಕ್ಟೇರ್‌ ಕಾಯ್ದಿಟ್ಟ ಅರಣ್ಯ ಪ್ರದೇಶ ಹಾಗೂ 400 ಹೆಕ್ಟೇರ್‌ ರಕ್ಷಿತ ಅರಣ್ಯ ಪ್ರದೇಶ ಸೇರಿ ಒಟ್ಟು 9340 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಮಳೆ ಅಭಾವ ಹಾಗೂ ಬೀಸಿಲಿನ ಝಳಕ್ಕೆ ಮರಗಿಡಗಳು ಒಣಗುತ್ತಿರುತ್ತವೆ. ಪರ್ಯಾಯವಾಗಿ ಅರಣ್ಯ ಇಲಾಖೆ ಹಲವು ಸಸಿ ನೆಟ್ಟರು ಬಹಳಷ್ಟು ಉಳಿಯುವುದೇ ಕಷ್ಟ ಎಂದು ಸಿಬ್ಬಂದಿ ಹೇಳುತ್ತಾರೆ. ತೇವಾಂಶದ ಕೊರತೆಯಿಂದಾಗಿ ಪ್ರಸ್ತುತ ಕೇವಲ ಶೇ. 60ರಷ್ಟು ಮರಗಿಡಗಳಿದ್ದು, ಸಾಗವಾನಿ, ಹೊನ್ನಿ, ನೇರಲೆ, ಮತ್ತಿ, ಹುನಾಲ ಸೇರಿದಂತೆ ನೂರಾರು ಜಾತಿಯ ಗಿಡಗಳೇ ಹೆಚ್ಚಿವೆ.
ಗುಂಡಿಗೆ ಹಾಕಿದ್ದ ಪ್ಲಾಸ್ಟಿಕನ್ನೂ ಬಿಡದ
 ದುಷ್ಟರು: ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಪ್ರಾಣಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ
ಎದುರಾಗದಿರಲಿ ಎಂದು ಇಲಾಖೆ ಗುಂಡಿಗಳನ್ನು ತೋಡಿ, ಅದಕ್ಕೆ ಪ್ಲಾಸ್ಟಿಕ್‌ ಹಾಕಿ, ದೂರದ ಊರುಗಳಿಂದ ನೀರು
ತಂದು ಈ ಗುಂಡಿಗಳಿಗೆ ಹಾಕಿ ಕಾಡು ಪ್ರಾಣಿಗಳಿಗೆ ಅನುಕೂಲ ಕಲ್ಪಿಸುತ್ತಿದ್ದರು. ಆದರೆ, ಕೆಲ ದುಷ್ಟರು ರಾತ್ರಿ ವೇಳೆ ಈ ಪ್ಲಾಸ್ಟಿಕ್‌ಗಳನ್ನೂ ಕದ್ದೊಯ್ಯುತ್ತಿದ್ದರು. ಇದರಿಂದ ಬೇಸತ್ತು ಈ ಬಾರಿ ಅಧಿಕಾರಿಗಳು ಸಿಮೆಂಟ್‌ ಹಾಗೂ ಕಬ್ಬಿಣ ಬಳಸಿ ಕಾಯಂ ಉಳಿಯುವಂತೆ ನೀರಿನ ತೊಟ್ಟಿಗಳನ್ನು ನಿರ್ಮಿಸುತ್ತಿರುವುದು ಪ್ರಾಣಿ ಪ್ರಿಯರ ಮೆಚ್ಚುಗೆ ವ್ಯಕ್ತವಾಗಿದೆ.
ನೀರು ಅರಸಿ ಬರುತ್ತಿದ್ದ ಆನೆಗಳ ದಂಡು: ಈ ಭಾಗದಲ್ಲಿ ನೀರು ಅರಸಿ ಹೆಚ್ಚಾಗಿ ಆನೆಗಳು ಬರುತ್ತಿದ್ದವು. ಅವುಗಳ
ನಿಯಂತ್ರಣಕ್ಕೆ ಹರಸಾಹಸಪಡಬೇಕಿತ್ತು. ಬೆಳೆ, ಜನ-ಜಾನುವಾರುಗಳಿಗೆ ಅದರಿಂದ ಹಾನಿಯೂ ಆಗಿದೆ. ಪ್ರಾಣಾಪಾಯವೂ ಆಗಿದೆ. ಆದರೆ, ಈಗ ನೀರಿನ ಅಭಾವದಿಂದಾಗಿ ಆನೆಗಳು ಬರುವುದೇ ಅಪರೂಪವಾಗಿದೆ. ಅರಣ್ಯ ಇಲಾಖೆಯ ಈ ಕಾಳಜಿ ಸಾರ್ವಜನಿಕರಲ್ಲೂ ಬಂದರೆ ಕಾಡಿನ ಜತೆಗೆ ಕಾಡು ಪ್ರಾಣಿಗಳೂ ಉಳಿಯುತ್ತವೆ.
ಭೂಮಿ ಮೇಲೆ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಮನುಷ್ಯ ಮಾಡುವ ತಪ್ಪಿನಿಂದಾಗಿ ಮೂಕ ಪ್ರಾಣಿಗಳು ನೀರಿಗಾಗಿ
ಪರದಾಡುವಂತಾಗಿದೆ. ಇನ್ನಾದರೂ ಮಾನವ ಅರಿತು ಗಿಡ ನೆಟ್ಟು ಕಾಡು ಉಳಿಸಲು ಶ್ರಮಿಸಬೇಕಿದೆ ಎನ್ನುವುದು
ಪ್ರಜ್ಞಾವಂತರ ಮನವಿ.
Advertisement

Udayavani is now on Telegram. Click here to join our channel and stay updated with the latest news.

Next