Advertisement

ವಾರ್ಡ್‌ಗಳ ಸಮಸ್ಯೆ ಪರಿಹರಿಸಲು ಕಮ

08:10 AM Feb 17, 2019 | |

ಕಲಬುರಗಿ: ಮಹಾನಗರ ಪಾಲಿಕೆ ಸದಸ್ಯರೆಲ್ಲ ತಮ್ಮ ವಾರ್ಡುಗಳ ಕನಿಷ್ಠ ಐದು ಪ್ರಮುಖ ಸಮಸ್ಯೆಗಳನ್ನು ತಿಳಿಸಿದಲ್ಲಿ ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. ಇಂದಿರಾ ಸ್ಮಾರಕ ಭವನದಲ್ಲಿ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಅನೌಪಚಾರಿಕವಾಗಿ ಚರ್ಚಿಸಿ, ಸದಸ್ಯರು ಸೂಚಿಸಿರುವ ಪ್ರಮುಖ ಸಮಸ್ಯೆಗಳ ಪೈಕಿ ಯಾವ್ಯಾವ ಇಲಾಖೆಯಿಂದ ಎಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವುದನ್ನು ತಿಳಿಸಲಾಗುವುದು ಎಂದರು.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವ ಮೂಲಕ ಮಹಾನಗರ ಪಾಲಿಕೆಯನ್ನು ರಾಜ್ಯದಲ್ಲಿಯೇ ಮಾದರಿಯಾಗಿಸಬೇಕು. ಈಗಾಗಲೇ ಜಿಲ್ಲಾಡಳಿತ ವತಿಯಿಂದ ಪ್ಲಾಸ್ಟಿಕ್‌ ನಿಷೇಧ ಅಭಿಯಾನ ಹಮ್ಮಿಕೊಂಡಿದ್ದು, ಪ್ಲಾಸ್ಟಿಕ್‌ ಮಾರಾಟ ಮಾಡುವವರ ಹಾಗೂ ಉತ್ಪಾದಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಮುಂಬರುವ ಮಾರ್ಚ್‌ 15ರ ನಂತರ ನಗರದಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ಬಳಸದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಮಾರಾಟಗಾರರೊಂದಿಗೆ ಚರ್ಚಿಸಬೇಕು.  ಅನಿರೀಕ್ಷಿತವಾಗಿ ದಾಳಿ ನಡೆಸುವ ಮೂಲಕ ಜಿಲ್ಲೆಯಲ್ಲಿರುವ ಪ್ಲಾಸ್ಟಿಕ್‌ ಜಪ್ತಿ ಮಾಡಿಕೊಂಡು ನಾಶ ಪಡಿಸಬೇಕು ಎಂದರು.

ಪಾಲಿಕೆಯಿಂದ ನೂತನವಾಗಿ ಜಾಹೀರಾತು ನೀತಿ ರೂಪಿಸುವ ಮೂಲಕ ನಗರದಾದ್ಯಂತ ಜಾಹೀರಾತಿಗಾಗಿ ಬಳಸುವ ಸ್ಥಳಗಳನ್ನು ಗುರುತಿಸಿ. ಜಾಹೀರಾತಿಗೆ ಅನುಮತಿ ನೀಡಿ ಪಾಲಿಕೆಗೆ ಆದಾಯ ಹೆಚ್ಚಿಸಿ. ಈ ಹಣವನ್ನು ನಗರದಲ್ಲಿ ಕೈಗೊಳ್ಳಬೇಕಾಗಿರುವ ಸಣ್ಣಪುಟ್ಟ ಕಾಮಗಾರಿಗಳಿಗಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಫೆ. 28ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್‌ ಜನಸ್ಪಂದನ ಸಭೆ ಕೈಗೊಳ್ಳಲಾಗುತ್ತಿದೆ.

ಇಲ್ಲಿ ಇಲಾಖಾವಾರು ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುವುದು. ಅಲ್ಲದೇ ನೀರು ಒಳಚರಂಡಿ ಮಂಡಳಿ ಅಧಿಕಾರಿಗಳು ಪಾಲಿಕೆ ಸದಸ್ಯರ ಕರೆಗಳನ್ನು ಸ್ವೀಕರಿಸುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಾರಂಭಿಸಲಾಗಿರುವ ಪ್ರಗತಿ ಕಾಲೋನಿ ಯೋಜನೆಯನ್ನು ಹೀರಾಪುರದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮಹಾಪೌರರಾದ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಉಪ ಮಹಾಪೌರರಾದ ಅಲಿಯಾ ಶಿರೀನ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜು ಕಪನೂರ, ರಮೇಶ ಟಿ. ಕಮಕನೂರ, ಶೇಕ ಅಫ್ಜಲ್‌ ಅಹ್ಮದ ಗೋಲಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ, ಮಹಾನಗರ ಪಾಲಿಕೆ ಆಯುಕ್ತ ಬಿ. ಫೌಜಿಯಾ ತರನ್ನುಮ್‌ ಹಾಗೂ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.

Advertisement

ನಗರದಲ್ಲಿ ಹಿಂದೆ ಬಾಕಿ ಇದ್ದ 50 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರು ಸರ್ಕಾರದ ಮಟ್ಟದಲ್ಲಿ ಬಾಕಿಯಿರುವ ಕಾಮಗಾರಿಗಳ ಪಟ್ಟಿ ನೀಡಿದರೆ ಪರಿಶೀಲಿಸಲಾಗುವುದು. ಪರಿಶಿಷ್ಟ ಜಾತಿ, ಪಂಗಡದ ವಾರ್ಡುಗಳ ಅಭಿವೃದ್ಧಿಯೊಂದಿಗೆ, ಬೇರೆ ವಾರ್ಡುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಚರಂಡಿ ಕಾಮಗಾರಿಗಳ ವಿವರವನ್ನು ಸಲ್ಲಿಸಿದಲ್ಲಿ ಎಸ್‌.ಸಿ.ಪಿ. ಟಿ.ಎಸ್‌.ಪಿ. ಅನುದಾನದಡಿ ಮಂಜೂರಾತಿ ನೀಡಲಾಗುವುದು.
 ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next