Advertisement

ಅದಮಾರು ಮಠದ ಭಿತ್ತಿಗಳಿಗೆ ಸುಣ್ಣ, ಮಣ್ಣಿನ ಗಾರೆ

12:43 AM Sep 18, 2019 | mahesh |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಪರ್ಯಾಯೋತ್ಸವಕ್ಕೆ ಪೀಠವೇರುವ ಯತಿಗಳ ಮಠವನ್ನು ನವೀಕರಿಸಿ ಅಲಂಕರಿಸುವ ಕ್ರಮವಿದೆ. ಮುಂದಿನ ಜ. 18ರಂದು ಅದಮಾರು ಮಠದ ಪರ್ಯಾಯ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅದಮಾರು ಮಠದಲ್ಲಿ ಇದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದ್ದು, ಇದರಲ್ಲಿ ಮಠಕ್ಕೆ ಸುಣ್ಣ ಬಣ್ಣ ಬಳಿಯುವುದೂ ಒಂದು. ಈ ಬಾರಿ ಹಳೆಯ ಸಂಪ್ರದಾಯವಾದ ಸುಣ್ಣ- ಮಣ್ಣಿನ ಗಾರೆಯನ್ನು ನಿರ್ಮಿಸಲಾಗುತ್ತಿದೆ.

Advertisement

ಮಠದ ಒಳಸುತ್ತಿನ ಹೊರಗೆ ಇರುವ ನಾಲ್ಕೂ ಸುತ್ತಿನ ಗೋಡೆಯ (ತಲಾ 40×8 ಅಡಿ ವಿಸ್ತೀರ್ಣ) ಗಾರೆ ಅಲ್ಲಲ್ಲಿ ಹಾಳಾಗಿತ್ತು. ಇದನ್ನು ತೆಗೆದು ಈಗ ಸುಣ್ಣ, ಮಣ್ಣಿನ ಗಾರೆ ಹಾಕಲಾಗುತ್ತಿದೆ. ಮೂರು ಬದಿಯ ಕೆಲಸ ಪೂರ್ಣವಾಗಿದೆ, ಒಂದು ಬದಿ ಮಾತ್ರ ಬಾಕಿ ಇದೆ.

ಗಾರೆ ಮಾಡುವುದು ಹೀಗೆ
ಮಣ್ಣು, ಸುಣ್ಣದ ಗಾರೆ ಕ್ರಮ ತೀರ ಸರಳ. ಮಣ್ಣು, ಸುಣ್ಣ, ಹೊಯಿಗೆಯನ್ನು ಮಿಶ್ರ ಮಾಡಿ ಒಂದು ದಿನ ಕೊಳೆಯಲಿಡಬೇಕು. ಬಳಿಕ ಇದನ್ನು ಬಳಸಿ ಗಾರೆ. ಎರಡನೆಯ ಹಂತದಲ್ಲಿ ಸುಣ್ಣ, ಕೆಂಪು ಕಾವಿ, ಕೊಳೆತ ಬೆಲ್ಲ, ಕೆಸರು ಮಣ್ಣು ಮಿಶ್ರ ಮಾಡಿ ತೆಳುವಾದ ಗಾರೆ ಮಾಡುವುದು. ಗಾರೆಯ ಒಟ್ಟು ದಪ್ಪ ಮುಕ್ಕಾಲು ಇಂಚು ಇರುತ್ತದೆ. ಈ ಗಾರೆಗೆ ಸಿಮೆಂಟ್‌ ಗಾರೆಯಂತೆ ಹೆಚ್ಚಿನ ನೀರು ಬೇಕೆಂದಿಲ್ಲ. ಮಠದ ಒಳಭಾಗವಾದ ಕಾರಣ ಮಳೆ ನೀರು ಬಿದ್ದು ಹಾಳಾಗುವ ಪ್ರಶ್ನೆ ಇಲ್ಲ. ಇಲ್ಲಿ ಬಳಸುವ ಎಲ್ಲ ಕಚ್ಚಾ ಸಾಮಗ್ರಿಗಳು ಅಪ್ಪಟ ದೇಸೀ ಎಂಬುದೇ ಹೆಚ್ಚುಗಾರಿಕೆ.

ಗಾರೆಯನ್ನು ಕೊಡುವ ಮೊದಲು ಮೇಲ್ಪದರವನ್ನು ತೆಗೆಯುತ್ತಾರೆ. ಆಗ ಹಿಂದಿನ ಕಾಲದಲ್ಲಿ ರಚಿಸಿದ ಗೋಡೆಯ ಲಕ್ಷಣ ತೋರುತ್ತದೆ. ಅದರಲ್ಲಿ ಮಣ್ಣು, ಕೊಳೆತ ಬೆಲ್ಲ, ಹೊಯಿಗೆಯ ಜತೆ ಸಣ್ಣದಾಗಿ ಕತ್ತರಿಸಿದ ಮುಳಿಹುಲ್ಲೂ ಕಂಡುಬರುತ್ತಿದೆ.

ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಈಗ ನೆನಪಿನಲ್ಲಿ ಉಳಿದಿರುವ ಸಂಸ್ಕೃತಿ ಸಂರಕ್ಷಕ ವಿಜಯನಾಥ ಶೆಣೈಯವರು ಮಣಿಪಾಲದಲ್ಲಿ ನಿರ್ಮಿಸಿದ ಹೆರಿಟೇಜ್‌ ವಿಲೇಜ್‌, ಕಲಾವಿದ ಪುರುಷೋತ್ತಮ ಅಡ್ವೆಯವರು ತೋರಿಸಿದ ರಚನೆಗಳನ್ನು ನೋಡಿ ಸುಣ್ಣ, ಮಣ್ಣಿನ ಗಾರೆಯನ್ನು ಮಾಡಲು ಮುಂದಾಗಿದ್ದಾರೆ.

Advertisement

ಸುಣ್ಣ, ಮಣ್ಣಿನ ಗಾರೆ ಉತ್ತಮ ಬಾಳಿಕೆ ಬರುತ್ತದೆಂದು ಹೇಳುತ್ತಾರೆ. ನಾವು ಪ್ರಾಯೋಗಿಕವಾಗಿ ಮಾಡಿ ನೋಡಬೇಕು. ಇದು ನಮ್ಮ ಪ್ರಾಚೀನರ ತಂತ್ರಜ್ಞಾನವನ್ನು ಉಳಿಸುವ ಪ್ರಯತ್ನವೂ ಹೌದು, ದೇಸೀ ತಂತ್ರಜ್ಞಾನಕ್ಕೆ ತೋರುವ ಗೌರವವೂ ಹೌದು. ಗೋಡೆಯ ಮೇಲೆ ಚಿತ್ರವನ್ನು ಬಿಡಿಸಬೇಕೋ ಎಂದು ನಿರ್ಧರಿಸಿಲ್ಲ. ಇದನ್ನು ಪರ್ಯಾಯಕ್ಕೆಂದೇ ಮಾಡಿರುವುದಲ್ಲ. ಮುಂದೆ ಎಲ್ಲೆಲ್ಲಿ ಹಾಳಾಗುತ್ತದೋ ಅಲ್ಲಲ್ಲಿ ಪ್ರತಿವರ್ಷ ದುರಸ್ತಿ ಮಾಡಬೇಕು. ಇದಕ್ಕೆ ವರ್ಷದಲ್ಲಿ ಒಂದು ತಿಂಗಳನ್ನು ನಿರ್ವಹಣೆಗಾಗಿ ನಿಗದಿಪಡಿಸಬೇಕು. ಹಾಗಾದಾಗ ಪರ್ಯಾಯಕ್ಕೆಂದು ಮಾಡುವ ಸಿದ್ಧತೆ ಕಡಿಮೆಯಾಗುತ್ತದೆ. ಈಗಲೂ ಹಾಳಾದ ಹೆಂಚುಗಳನ್ನು ಮಾತ್ರ ಹೊಸದಾಗಿ ಹಾಕಲಾಗುತ್ತದೆ.
– ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಕಿರಿಯ ಯತಿ,  ಶ್ರೀ ಅದಮಾರು ಮಠ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next