ಬೆಂಗಳೂರು: ಎರಡು ಲಕ್ಷ ಕೋಟಿ ರೂ. ಬೆಲೆಬಾಳುವ ಅಲ್ಪಸಂಖ್ಯಾತ ಸಮುದಾಯದ ಆಸ್ತಿ ವಿಚಾರದಲ್ಲಿ ಅವ್ಯವಹಾರ ಮಾಡಿದವರನ್ನು ರಕ್ಷಿಸಲು ಮುಂದಾದರೆ ಅಲ್ಲಾಹುವಿನ ಶಾಪದಿಂದಲೇ ಸಮ್ಮಿಶ್ರ ಸರ್ಕಾರ ಕುಸಿದು ಬೀಳುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಕ್ಫ್ ಆಸ್ತಿ ಹಗರಣ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಬೇಕು ಹಾಗೂ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ವಿಧಾನಸೌಧ-ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇವರ ಆಸ್ತಿ ಕಾಪಾಡಲು ಸರ್ಕಾರ ಹಿಂದೆ ಮುಂದೆ ನೋಡಬಾರದು.
ಸದನದಲ್ಲಿ ವರದಿ ಮಂಡಿಸಲು ಈ ಹಿಂದೆ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಒಪ್ಪಿದ್ದರು. ನ್ಯಾಯಾಲಯ ಸಹ ಈ ವರದಿ ಒಪ್ಪಿದೆ. ಆದರೂ ಸರ್ಕಾರ ಮಂಡಿಸಿಲ್ಲ. ಕೂಡಲೇ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸರ್ಕಾರ ಬೀಳುತ್ತದೆ ಎಂಬ ಭಯ ಕಾಡುತ್ತಿದೆ. ಅದಕ್ಕಾಗಿಯೇ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಮ್ಮಿಶ್ರ ಸರ್ಕಾರವನ್ನು ಯಾರೂ ಬೀಳಿಸಬೇಕಿಲ್ಲ, ಅದಷ್ಟಕ್ಕೆ ಅದೇ ಬಿದ್ದು ಹೋಗುತ್ತದೆ. ಆ ಭಯ ಇರುವುದರಿಂದಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಶಾಸಕ ಸಿ.ಟಿ. ರವಿ ಮಾತನಾಡಿ, ಅಲ್ಪಸಂಖ್ಯಾತರ ಹಿತ ಕಾಯಬೇಕು ಎಂಬ ಕಾಳಜಿ ಸರ್ಕಾರಕ್ಕೆ ನಿಜವಾಗಿಯೂ ಇದ್ದರೆ ವರದಿ ಮಂಡಿಸಬೇಕು. ಮಂಡಿಸಿದರೆ ಇವರ ನಿಜ ಬಣ್ಣ ಬಯಲಾಗುತ್ತದೆ ಎಂಬ ಭಯವೇ? ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.