ಕಾಲೇಜು ಲೈಫ್ ಅಂದರೆ ರಂಗು ರಂಗಿನ ಲೈಫ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಲೇಜಿನಲ್ಲಿ ಕಳೆದ ಕ್ಷಣಗಳು, ನೆನಪುಗಳು ಇನ್ನೆಂದೂ ಬದುಕಿನಲ್ಲಿ ವಾಪಸ್ ಬರುವುದಿಲ್ಲ ಎನ್ನುವುದು ಕಹಿ ಸತ್ಯ. ಅಲ್ಲಿ ನಡೆದ ಘಟನೆಗಳು, ಜಗಳಗಳು, ಮಾಡಿಕೊಂಡ ಕಿರಿಕ್ಕುಗಳು, ಟ್ರ್ಯಾಜಿಡಿಗಳು, ಪ್ರೇಮಕತೆಗಳು… ಈ ಎಲ್ಲವೂ ಯಾವ ಕಾಲಕ್ಕೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಹೋಗುವಂಥವು. ಒಂದು ವಿಷಯವಂತೂ ನಿಜ. ಕಾಲೇಜಲ್ಲಿ ಎಷ್ಟೊಂದು ಮಜಭರಿತವಾದ ರಸನಿಮಿಷಗಳನ್ನು ಕಳೆಯುತ್ತೇವೋ ಅದೇ ರೀತಿ ಜೀವನಕ್ಕೆ ದಾರಿದೀಪವಾದ ಪಾಠಗಳನ್ನೂ ಅಲ್ಲಿಯೇ ಕಲಿಯುತ್ತೇವೆ. ಅಂಥದ್ದೊಂದು ಪಾಠವನ್ನು ನಾನು ಇಡ್ಲಿಯಿಂದ ಕಲಿತ ಘಟನೆಯ ವಿವರಣೆ ಇಲ್ಲಿದೆ.
ನಮ್ಮ ಕಾಲೇಜು ಕ್ಯಾಂಪಸ್‌ನಲ್ಲಿ “ನಮ್ ಕ್ಯಾಂಟೀನ್’ ಅಂತ ಒಂದು ಕ್ಯಾಂಟೀನ್ ಇದೆ. ಅದು ನಮ್ಮ ರೆಗ್ಯುಲರ್ ಅಡ್ಡಾ. ಚರ್ಚೆ, ಸಮಾಲೋಚನೆ, ಸ್ಕೆಚ್ಚು… ಹೀಗೆ- ಏನೇ ಮುಖ್ಯ ನಿರ್ಧಾರ ಕೈಗೊಳ್ಳುವುದಿದ್ದರೂ ಅಲ್ಲೇ ಆಗುವುದು. ಪ್ರತಿದಿನ ತರಗತಿಗೆ ಹೋಗುವ ಮುನ್ನ ಹಾಜರಿ ಹಾಕುವುದು ಕ್ಯಾಂಟೀನ್‌ಗೆ. ಅಲ್ಲದೆ, ಯಾವುದೇ ಕ್ಲಾಸ್‌ಗೆ ಚಕ್ಕರ್ ಹಾಕಿದರೂ ಕ್ಯಾಂಟೀನ್‌ನಲ್ಲಿ ಸೇರುವುದು ಮಾತ್ರ ತಪ್ಪುತ್ತಿರಲಿಲ್ಲ. ಕ್ಯಾಂಟೀನ್ ನಿಜವಾದ ಅರ್ಥದಲ್ಲಿ ನಮಗೆ ಸ್ಟಾರ್ ಹೋಟೆಲ್ ಆಗಿತ್ತು. ಏಕೆಂದರೆ, ನಮ್ಮ ಜೇಬಿಗೆ ತಕ್ಕಂಥ ರೇಟಿಗೇ ಎಲ್ಲಾ ತಿನಿಸುಗಳು, ಕಾಫಿ- ತಿಂಡಿ ಅಲ್ಲಿ ಸಿಗುತ್ತಿತ್ತು. ಹೀಗಾಗಿ ಬರ್ತ್‌ಡೇ ಪಾರ್ಟಿ, ಲವ್ ಸಂಭ್ರಮಾಚರಣೆ ಎಲ್ಲವೂ ಅಲ್ಲೇ ಸಾಂಗವಾಗಿ ಹೆಚ್ಚಿನ ಖರ್ಚಿಲ್ಲದೆ ನೆರವೇರುತ್ತಿತ್ತು.
ಗೆಳೆಯರ ಸಂಗಡ ಕ್ಯಾಂಟೀನ್‌ನಲ್ಲಿ ಕುಳಿತರೆ ಸಾಕು, ನಮ್ಮದೇ ಗಲಾಟೆ. ಎಷ್ಟೋ ಸಾರಿ ಮಾಲೀಕರು ನಮ್ಮ ಗಲಾಟೆಗೆ ಸಿಟ್ಟಾಗಿದ್ದೂ ಉಂಟು. ಕ್ಯಾಂಟೀನ್‌ನಲ್ಲಿ ರಾಮು ಎಂಬೊಬ್ಬ ಸಪ್ಲೆ„ಯರ್ ಇದ್ದ. ಅವನನ್ನು ನಾವ್ಯಾರೂ ಸಪ್ಲೆ„ಯರಂತೆ ಕಾಣುತ್ತಿರಲಿಲ್ಲ . ನಮಗೂ- ಅವನಿಗೂ ಕೊಂಚ ಜಾಸ್ತಿನೇ ದೋಸ್ತಿ. ನಮಗೂ ಅವನಿಗೂ ಮನಸ್ತಾಪ ಬರುತ್ತಿದ್ದಿದ್ದು ಒಂದೇ ಕಾರಣಕ್ಕೆ. ಅವನಿಗೆ ತಟ್ಟೆಯಲ್ಲಿ ಯಾರಾದರೂ ಆಹಾರವನ್ನು ಹಾಗೇ ಉಳಿಸಿದ್ದರೆ ವಿಪರೀತ ಸಿಟ್ಟು ಬರುತ್ತಿತ್ತು. ನಮ್ಮ ತಂಡದಲ್ಲಿ ಆ ರೀತಿ ತಟ್ಟೆಯಲ್ಲಿ ಆಹಾರ ಬಿಡುವವರು ಕೆಲವರಿದ್ದರು. ಅದನ್ನು ನೋಡಿದಾಗಲೆಲ್ಲಾ ಅವನು ಸಿಡುಕುತ್ತಾ ಅದೇನನ್ನೋ ಗೊಣಗುತ್ತಿದ್ದ.
ಕೆಲವು ಸರಿ ನಮ್ಮನ್ನು ಬೈದೂ ಇದ್ದ. ನಮಗೆ ಮಾತ್ರ, ಅಷ್ಟಕ್ಕೆ ಅವನ್ಯಾಕೆ ನಮ್ಮ ಮೇಲೆ ರೇಗಾಡುತ್ತಾನೆ ಎಂದು ಸಿಡಿಮಿಡಿ. ಒಂದು ದಿನ ನನಗೆ ತುಂಬಾ ಹಸಿವಾಗಿತ್ತು. ಕ್ಯಾಂಟೀನ್‌ನಲ್ಲಿ ತಿನ್ನೋಣವೆಂದೇ ಹೊರಗಡೆ ಬೇರೆಲ್ಲೂ ತಿಂದಿರಲಿಲ್ಲ. ಆದರೆ ಅವತ್ತು ಅದ್ಯಾಕೋ ಕ್ಯಾಂಟೀನಿನಲ್ಲಿ ಮದ್ಯಾಹ್ನದ ವೇಳೆಗೆ ತಿಂಡಿ ಬಹಳ ಬೇಗನೆ ಖಾಲಿಯಾಗಿತ್ತು. “ಸರಿ ಬಿಡು’ ಅಂತ ಹೇಳಿ ಹೊರಗಡೆ ಬಂದೆ. ಬಾಗಿಲ ಬಳಿ ಡಸ್ಟ್ ಬಿನ್ ಇತ್ತು. ಅದರೊಳಗೆ ಒಂದಷ್ಟು ಇಡ್ಲಿಗಳು ಹಾಗೆ ಬಿದ್ದಿದ್ದವು. ಅದನ್ನು ನೋಡಿದಾಗ ಮನಸ್ಸಿಗೆ ಏನೋ ತಳಮಳ. ಆ ಇಡ್ಲಿಗಳು ನನಗೆ ಸಿಕ್ಕಿದ್ದರೆ ನನ್ನ ಹೊಟ್ಟೆ ತುಂಬುತ್ತಾ ಇತ್ತಲ್ಲ ಎಂದುಕೊಂಡೆ.
ಆವಾಗ ನನಗೆ ರಾಮು ಯಾಕೆ ತಟ್ಟೆಯಲ್ಲಿ ಆಹಾರ ಬಿಟ್ಟಾಗ ಸಿಟ್ಟಾಗುತ್ತಾನೆ ಎಂಬುದು ಅರ್ಥವಾಯಿತು. ತಟ್ಟೆಯಲ್ಲಿ ಬಿಟ್ಟ ಆಹಾರದಿಂದ ಯಾರೋ ಒಬ್ಬ ಹಸಿವಿನಿಂದ ನರಳಬೇಕಾಗುತ್ತದೆ. ರಾಮುವಿಗೆ ಹಸಿವಿನ ಮೌಲ್ಯ ಗೊತ್ತಿದ್ದಿದ್ದರಿಂದಲೇ ಅವನು ಗೊಣಗುತ್ತಿದ್ದಿದ್ದು. ಅಂದಿನಿಂದ ನಾನು ಕೂಡ ಪ್ಲೇಟಲ್ಲಿ ಇನ್ಯಾವತ್ತೂ ತಿಂಡಿ ಬಿಡಬಾರದು ಅಂತ ಡಿಸೈಡ್ ಮಾಡಿದೆ. ತರಗತಿಯಲ್ಲಿ ಮೇಷ್ಟ್ರು ಕಲಿಸದ ಪಾಠವನ್ನು ಸಪ್ಲೆ„ಯರ್ ರಾಮು ಕಲಿಸಿದ್ದ.
* ಬಾಬುಪ್ರಸಾದ್ ಎ., ಬಳ್ಳಾರಿ