Advertisement

ಮತದಾನೋತ್ತರ ಲೆಕ್ಕಾಚಾರ ಬಲು ಜೋರು

03:24 PM May 21, 2019 | pallavi |

ಹುಬ್ಬಳ್ಳಿ: ರಾಜ್ಯ ರಾಜಕಾರಣದ ತಿರುವಿನ ವಿಚಾರದಲ್ಲಿ ಮಹತ್ವ ಪಡೆದಿರುವ ಕುಂದಗೋಳ ಕ್ಷೇತ್ರದ ಉಪ ಕದನ ಮುಗಿದಿದ್ದು, ಮತದಾರ ಪ್ರಭು ನೀಡಿದ ಆದೇಶ ಸ್ಟ್ರಾಂಗ್‌ ರೂಂ ಸೇರಿದೆ. ಆದರೆ ಕ್ಷೇತ್ರದಲ್ಲೀಗ ಚುನಾವಣೋತ್ತರ ಮತಗಳ ಲೆಕ್ಕಾಚಾರ ಬಲು ಜೋರಾಗಿ ನಡೆಯುತ್ತಿದೆ.

Advertisement

ಮಳೆ ನಿಂತರೂ ಹನಿ ನಿಲ್ಲುವುದಿಲ್ಲ ಎನ್ನುವಂತೆ ಚುನಾವಣೆ ಮುಗಿದರೂ, ಕ್ಷೇತ್ರದಲ್ಲಿ ಚುನಾವಣೆ ಗುಂಗು ಮಾತ್ರ ಇನ್ನೂ ಇಳಿದಿಲ್ಲ. ಕುಂತರೂ ನಿಂತರೂ ಮತಗಳ ಹಂಚಿಕೆಯೇ ಸದ್ಯದ ಬಿಸಿ ಬಿಸಿ ಚರ್ಚೆಯಾಗಿದೆ. ಯಾರಿಗೆ ಎಷ್ಟು ಮತ ಬರಲಿವೆ. ಯಾವ ಬೂತ್‌ನಲ್ಲಿ ಯಾರಿಗೆ ಲೀಡ್‌ ಸಿಗಲಿದೆ. ಯಾವ ಭಾಗದ ಯಾವ ಅಭ್ಯರ್ಥಿಗಳಿಗೆ ಕೈ ಹಿಡಿಯಲಿದೆ. ಯಾರಿಗೆ ಎಷ್ಟು ಮತಗಳು ಯಾವ ಬೂತ್‌ನಿಂದ ಬಂದಿರಬಹುದು ಎಂಬ ಕೂಡು-ಕಳೆವ ಲೆಕ್ಕಾಚಾರ ಸಾಮಾನ್ಯ ಜನರದ್ದಾಗಿದೆ. ತಮ್ಮ ಸಂಬಂಧಿಗಳಿಗೆ ಫೋನಾಯಿಸಿ ನಿಮ್ಮಲ್ಲಿ ಯಾರ ಪರವಾಗಿ ಮತದಾನ ಆಗಿದೆ, ಅವರ ಹವಾ ಹೇಗಿದೆ. ಇವರ ಹವಾ ಹೇಗಿದೆ ಎನ್ನುವ ಮಾತುಗಳೇ ಜೋರಾಗಿದ್ದು, ಎಲ್ಲರ ದೃಷ್ಟಿ ಮೇ 23ರತ್ತ ನೆಟ್ಟಿದೆ.

ರಂಗೇರಿದ ಪಕ್ಷದ ಪಡಸಾಲೆ: ಗೆಲ್ಲುವ ಕನಸು ಕಾಣುತ್ತಿರುವ ಅಭ್ಯರ್ಥಿಗಳು ಮತಗಳ ಅಂತರ ಎಷ್ಟಾಗಬಹುದು ಎನ್ನುವ ಚರ್ಚೆ ಜೋರಾಗಿದೆ. ಚುನಾವಣೆ ಪೂರ್ವ ಮತದಾರರನ್ನು ಓಲೈಸುವ, ಒಲಿಸಿಕೊಳ್ಳುವ ನಾನಾ ಕಸರತ್ತುಗಳಲ್ಲಿ ಅಭ್ಯರ್ಥಿಗಳು ತಲ್ಲೀನರಾಗಿದ್ದು, ಚುನಾವಣೋತ್ತರ ತಮ್ಮ ಗೆಲುವಿನ ಅಂತರ ತಿಳಿದುಕೊಳ್ಳುವ ಕುತೂಹಲಕ್ಕೆ ಜಾರಿದ್ದರು. ಕಳೆದ 20-25 ದಿನಗಳಿಂದ ಕ್ಷೇತ್ರ ಸುತ್ತಿದ ಕಾರ್ಯಕರ್ತರು ಅಭ್ಯರ್ಥಿಗಳನ್ನು ಭೇಟಿಯಾಗಿ ನಮ್ಮ ಬೂತ್‌ಗಳಲ್ಲಿ ಇಂತಿಷ್ಟು ಲೀಡ್‌ ನಿಮಗೆ ದೊರೆಯಲಿದೆ ಎಂದು ಹುರಿದುಂಬಿಸುತ್ತಿರುವುದು ಕಂಡು ಬಂದಿತು.

ಪಕ್ಕಾ ಮಾಹಿತಿ ತಿಳಿಯಬೇಕು ಎನ್ನುವ ಕಾರಣಕ್ಕೆ ಅಭ್ಯರ್ಥಿಗಳು ತಮ್ಮ ಪಕ್ಷದ ಬೂತ್‌ ಏಜೆಂಟರು, ಗ್ರಾಪಂ ಸದಸ್ಯರು, ತಾಪಂ ಸದಸ್ಯರು, ಜಿಪಂ ಸದಸ್ಯರು ಸೇರಿದಂತೆ ತಮ್ಮ ಪರವಾಗಿ ಚುನಾವಣೆಯಲ್ಲಿ ಓಡಾಡಿದವರಿಂದ ತಮಗೆ ಎಷ್ಟು ಮತಗಳು ಬರಬಹುದು, ತಮ್ಮ ವಿರೋಧಿಗೆ ಎಷ್ಟು ಮತಗಳು ಹೋಗಬಹುದು ಎನ್ನುವ ಗಣಿತ ಭರ್ಜರಿಯಾಗಿದೆ.

ಮೋದಿ ಹವಾ-ಅನುಕಂಪ: ಲೋಕಸಭೆ ಚುನಾವಣೆಯ ಬಿಸಿಯಲ್ಲೇ ಈ ಚುನಾವಣೆ ನಡೆದಿದ್ದು, ತಮ್ಮ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ ಎನ್ನುವ ಅಭಿಪ್ರಾಯ ಎರಡು ಪಕ್ಷದ ನಾಯಕರಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಹವಾ ಇರುವಾಗಲೇ ಉಪ ಸಮರ ನಡೆದಿದ್ದು ಬಿಜೆಪಿಗೆ ವರವಾಗಿದೆ. ಕಳೆದ ಚುನಾವಣೆಯಲ್ಲಿ ಅಲ್ಪ ಮತದಿಂದ ಸೋತಿತ್ತದ್ದ ಚಿಕ್ಕನಗೌಡರಿಗೆ ಕ್ಷೇತ್ರದಲ್ಲಿ ಅನುಕಂಪ ವ್ಯಕ್ತವಾಗಿದೆ. ಗೌಡರನ್ನು ಗೆಲ್ಲಿಸಿಕೊಟ್ಟರೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ತಪ್ಪದೇ ಮತ ಮಾಡಿ ತಮ್ಮವರ ಮತ ಹಾಕಿಸಿದ್ದಾರೆ. ಹೀಗಾಗಿ ನಮ್ಮ ಗೆಲವು ನಿಶ್ಚಿತ. 10-15 ಸಾವಿರ ಮತಗಳ ಅಂತರದಿಂದ ಚಿಕ್ಕನಗೌಡರ ಗೆಲುವು ಸಾಧಿಸುತ್ತಾರೆನ್ನುವ ಲೆಕ್ಕಾಚಾರ ಬಿಜೆಪಿ ನಾಯಕರಾದ್ದಾಗಿದ್ದರೂ, ಅಂತರ ನಾಲ್ಕಂಕಿ ದಾಟುವುದಿಲ್ಲ ಎನ್ನುವ ಚರ್ಚೆ ಪಕ್ಷದ ಪಡಸಾಲೆಯಲ್ಲಿ ಜೋರಾಗಿದೆ.

Advertisement

ಅನುಕಂಪ-ಸರಕಾರದ ಸಾಧನೆ: ಕಾಂಗ್ರೆಸ್‌ ಸರಕಾರ ಹಾಗೂ ಮೈತ್ರಿ ಸರಕಾರದ ಸಾಧನೆ, ಜೆಡಿಎಸ್‌ ಕಳೆದ ಚುನಾವಣೆಯಲ್ಲಿ ಪಡೆದಿದ್ದ ಮತಗಳು ಮೈತ್ರಿ ಅಭ್ಯರ್ಥಿ ಪಾಲಾಗಲಿವೆ. ದಿ| ಸಿ.ಎಸ್‌.ಶಿವಳ್ಳಿ ಅವರ ಅಗಲಿಕೆ ಅನುಕಂಪ ಸಾಕಷ್ಟು ಕೆಲಸ ಮಾಡಿದೆ. ಮೇಲಾಗಿ ಮೈತ್ರಿ ಸರಕಾರದ ಘಟಾನುಘಟಿಗಳು ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಉಳಿದು ವ್ಯವಸ್ಥಿತವಾಗಿ ಚುನಾವಣೆ ಮಾಡಿದ್ದು, ಅಲ್ಪಸಂಖ್ಯಾತ ಮತದಾರರು ದೂರ ಉಳಿಯದಂತೆ ನೋಡಿಕೊಂಡಿದ್ದು, ಕಾಂಗ್ರೆಸ್‌ ಗೆಲುವು ನಿಶ್ಚಿತ ಎನ್ನುವ ಆತ್ಮವಿಶ್ವಾಸ ಪಕ್ಷದ ನಾಯಕರಲ್ಲಿದೆ.

ಮತದಾನ ಏರಿಕೆ-ಹಂಚಿಕೆ ಕಸರತ್ತು: ಉಪಚುನಾವಣೆ ಮತದಾನ ಕಳೆದ ಬಾರಿ ಚುನಾವಣೆಗಿಂತ ಶೇ.3.75 ಹೆಚ್ಚಾಗಿದ್ದು, ಈ ಮತಗಳು ತಮ್ಮ ಪಕ್ಷದ ಪಾಲಾಗಲಿವೆ ಎನ್ನುವ ಅತಿಯಾದ ನಂಬಿಕೆ ಎರಡು ಪಕ್ಷದಲ್ಲಿವೆ. ಕ್ಷೇತ್ರದಿಂದ ಹೊರಗುಳಿದ ತಮ್ಮ ಮತದಾರರನ್ನು ಕರೆಯಿಸಿ ಮತ ಚಲಾಯಿಸುವ ಕೆಲಸ ಎರಡು ಪಕ್ಷದಿಂದ ನಡೆದಿದೆ. ಸುಮಾರು 900 ಹೊಸ ಮತದಾರರು ತಮ್ಮ ಕೈ ಹಿಡಿಯಲಿದ್ದಾರೆ ಎನ್ನುವ ಲೆಕ್ಕಚಾರ ಕಮಲ ಪಾಳಯದ್ದಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತದಾರರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದರಿಂದ ಮತದಾನ ಪ್ರಮಾಣ ಏರಿಕೆಯಾಗಿದ್ದು, ಇದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಪೂರಕ ಎನ್ನುವುದು ಮೈತ್ರಿ ನಾಯಕರ ಅಭಿಮತ.

ಎರಡೇ, ಮತ್ತೂಂದಿಲ್ಲ: ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಅಬ್ಬರದ ಪ್ರಚಾರ ಮುಂದೆ ಬಹುತೇಕ ಪಕ್ಷೇತರ ಅಭ್ಯರ್ಥಿಗಳು ಮಂಕಾದಂತೆ ಕಾಣುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕೆಲವರು ಪಕ್ಷದ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು. ನೀರಿಗಿಳಿದ ಮೇಲೆ ಈಜಬೇಕು ಎನ್ನುವ ಕಾರಣಕ್ಕೆ ಪ್ರಚಾರ ಇತ್ಯಾದಿ ಮಾಡಿದ್ದರು. ಎರಡು ಪಕ್ಷದ ಗದ್ದಲದಲ್ಲಿ ಪಕ್ಷೇತರರು ಕಳೆದುಹೋಗಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಜನರು. ಹೀಗಾಗಿ ಕ್ಷೇತ್ರದಲ್ಲಿ ಏನಿದ್ದರೂ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಸೋಲು-ಗೆಲುವಿನ ಮಾತುಗಳೇ ಕೇಳುತ್ತಿದೆ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next