ಬೆಂಗಳೂರು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಿ ಮುಂದಿನ ಆರು ತಿಂಗಳವರೆಗೆ ಆಡಳಿತ ನಿರ್ವಹಣೆ ಅಬಾಧಿತವಾಗಿರುವ ಬೆನ್ನಲ್ಲೇ ಸಂಪುಟ ರಚನೆ ಕಸರತ್ತು ಶುರುವಾಗಿದೆ. ಆ ಹಿನ್ನೆಲೆಯಲ್ಲಿ ಗುರುವಾರ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಸಂಪುಟ ರಚನೆ ಕುರಿತು ವರಿಷ್ಠರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.
ಸದ್ಯದ ಪರಿಸ್ಥಿತಿಯಲ್ಲಿ ಮೊದಲ ಹಂತದಲ್ಲಿ 20ರಿಂದ 22 ಸಚಿವ ಸ್ಥಾನವನ್ನು ಒಂದು ಇಲ್ಲವೇ ಎರಡು ಹಂತದಲ್ಲಿ ಹಂಚಿಕೆ ಮಾಡುವುದು, ಉಳಿದ 10- 12 ಖಾತೆಗಳನ್ನು ಅನರ್ಹಗೊಂಡಿರುವ ಶಾಸಕರ ಪೈಕಿ ಕೆಲವರಿಗೆಂದು ಕಾಯ್ದಿರಿಸಿ ಅವರ ಕಾನೂನು ಹೋರಾಟದ ಫಲಿತಾಂಶ ಆಧರಿಸಿ ಹಂಚಿಕೆ ಇಲ್ಲವೇ, ಮುಂದಿನ ತೀರ್ಮಾನ ಕೈಗೊಳ್ಳಲು ಪಕ್ಷದ ನಾಯಕರು ಚಿಂತಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಆರು ವರ್ಷದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲೂ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹಿರಿತನ, ಅನುಭವ, ಜಾತಿ, ಪ್ರಾದೇಶಿಕ ಸ್ಥಾನಮಾನ, ಸಾಮಾಜಿಕ ನ್ಯಾಯ ಪಾಲನೆಗೆ ಒತ್ತು ನೀಡಬೇಕಿದೆ. ಜತೆಗೆ ಕಾಂಗ್ರೆಸ್, ಜೆಡಿಎಸ್‌ನ ಅತೃಪ್ತ ಶಾಸಕರನ್ನು ಸೆಳೆದು, ವಿಶ್ವಾಸ ಗಳಿಸಿ, ಅವರ ನಿರೀಕ್ಷೆಗಳಿಗೆ ಸ್ಪಂದಿಸಿದವರು. ಅತೃಪ್ತ ಶಾಸಕರ ರಾಜೀನಾಮೆ ಸಲ್ಲಿಕೆ, ನಂತರ ಅವರು ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವಂತೆ ನೋಡಿಕೊಳ್ಳುವ ಮೂಲಕ ಮೂರು ವಾರ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದವರ ನಿರ್ವಹಣೆಗೆ ನಿಯೋಜನೆಗೊಂಡಿದ್ದವರು, ಕಾರ್ಯತಂತ್ರವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಶ್ರಮಿಸಿದವರಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕೆಂಬ ಆಗ್ರಹ ದಟ್ಟವಾಗಿದೆ.
ಹಾಗಾಗಿ ಯಡಿಯೂರಪ್ಪ ಅವರು ಸಂಭಾವ್ಯರ ಪಟ್ಟಿ ಸಿದ್ಧಪಡಿಸಿಕೊಂಡು ದೆಹಲಿ ನಾಯಕರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ. ಒಮ್ಮೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಸಚಿವ ಸ್ಥಾನ ಸಿಗದಿದ್ದವರೂ ವರಿಷ್ಠರ ನಿರ್ಧಾರವನ್ನು ಗೌರವಿಸಿ ಒಪ್ಪಿಕೊಳ್ಳಬೇಕಾಗುತ್ತದೆ. ಇದರಿಂದ ಪಕ್ಷದಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಪರಿಸ್ಥಿತಿ ನಿಭಾಯಿಸಬಹುದು ಎಂಬುದು ಹಿರಿಯ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.
ವರಿಷ್ಠರಿಗೆ ಮಾಹಿತಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ವಿಶ್ವಾಸ ಮತ ಸಾಬೀತುಪಡಿಸಿದ ನಂತರ ಮೊಗಸಾಲೆಯ ಆವರಣದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಿಂದಲೇ ವರಿಷ್ಠರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ರವಾನಿಸಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಲಾಯಿತು ಎಂದು ಮೂಲಗಳು ಹೇಳಿವೆ.