ಇಷ್ಟಪಟ್ಟ ಹುಡುಗ ಮಹೇಶನನ್ನು ಮನೆಯವರ ವಿರೋದ ಲೆಕ್ಕಿಸದೆ ಮದುವೆಯಾದ ಹುಡುಗಿ ಗೌರಿ, ಅಲ್ಪ ಸಮಯದಲ್ಲೇ ಆತನನ್ನು ಕಳೆದುಕೊಳ್ಳುತ್ತಾಳೆ. ಮಹೇಶ ಕಣ್ಣೆದುರಿನಿಂದ ಮರೆಯಾದರೂ, ಗೌರಿಯ ಮನದಲ್ಲಿ ಅಚ್ಚಳಿಯದೇ ಮನೆ ಮಾಡಿಕೊಂಡಿರುತ್ತಾನೆ. ಇನ್ನು ಗೌರಿ ಕೂಡ ಮಹೇಶನ ನೆನಪನ್ನು ಮನೆ-ಮನದಲ್ಲಿ ಹಸಿರಾಗಿರುವಂತೆಯೇ ನೋಡಿಕೊಂಡಿರುತ್ತಾಳೆ. ಕೈತುಂಬ ಸಂಬಳ ತರುವ ಕೆಲಸ, ಇರಲು ಒಳ್ಳೆಯ ಮನೆ, ಜೊತೆಗೆ ಮಹೇಶನೆಂಬ ಮನದ ಇನಿಯನ ನೆನಪು ಎಲ್ಲಾ ಇದ್ದರೂ, ಆಕೆಗೆ ಏನೋ ಕೊರಗು.
ಇನ್ನು ಏನೋ ಬೇಕೆಂಬ ಅಂತರಾಳದ ಹಂಬಲ. ಹಾಗಂತ ಜೊತೆಗಾರನೊಬ್ಬನಿರಬೇಕು ಎಂದು ಜೊತೆಗಿದ್ದವರು ಒತ್ತಾಯಿಸಿದರೂ, ಮತ್ತೂಂದು ಮದುವೆಗೆ ಗೌರಿ ತಯಾರಿಲ್ಲ. ಹಾಗಾದರೆ ಗೌರಿಯ ಮನದಾಳದ ಬಯಕೆ ಏನು? ಆಕೆ ಬಯಸುತ್ತಿರುವುದಾದರೂ ಏನು? ಆಕೆ ತನ್ನ ಅಂತರಾಳದ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾಳೆ? ಅದಕ್ಕೆ ಸಮಾಜದ ಪ್ರತಿಕ್ರಿಯೆ, ನಿಲುವುಗಳು ಹೇಗಿರುತ್ತದೆ? ಇವೆಲ್ಲದರ ಚಿತ್ರಣವೇ “ನಾತಿಚರಾಮಿ’ ಚಿತ್ರ.
ವಿಧವೆಯೊಬ್ಬಳ ಆಂತರ್ಯ, ಪ್ರತಿನಿತ್ಯ ಆಕೆ ಎದುರಿಸುವ ಸವಾಲುಗಳು, ಸಮಾಜದ ನಿಲುವುಗಳು, ಒಂದು ಹೆಣ್ಣಿಗೆ ಗಂಡು ಸಾಂಗತ್ಯಕ್ಕೆ ಬೇಕೋ ಅಥವಾ ಸುಖಕ್ಕೆ ಬೇಕೋ, ಹೀಗೆ ಹತ್ತಾರು ವಿಷಯಗಳನ್ನು ಚರ್ಚಿಸುತ್ತ “ನಾತಿಚರಾಮಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಮಂಸೋರೆ. ಇಂದಿಗೂ ಸಮಾಜ ಮುಕ್ತವಾಗಿ ಚರ್ಚಿಸಲು ಹಿಂಜರಿಯುವ ಸೂಕ್ಷ್ಮ ವಿಷಯವೊಂದನ್ನು ತೆರೆಮೇಲೆ ನಿರೂಪಿಸುವ ನಿರ್ದೇಶಕರ ಧೈರ್ಯ ಮೆಚ್ಚಬೇಕು.
ಆದರೆ ಇದನ್ನು ಮನರಂಜನೆಯಾಗಿ ನೋಡಬೇಕೋ, ಪ್ರಸ್ತುತ ಸಮಾಜದ ಗಂಭೀರ ಚರ್ಚೆಯ ವಿಷಯವಾಗಿ ನೋಡಬೇಕೋ ಎಂಬುದು ಮಾತ್ರ ಪ್ರೇಕ್ಷಕರಿಗೆ ಕೊನೆಯವರೆಗೂ ಗೊತ್ತಾಗುವುದಿಲ್ಲ. ಹಾಗೆಯೇ ಚಿತ್ರದ ಕಥೆ ಕೂಡ. ಇತ್ತೀಚೆಗೆ ಬರುತ್ತಿರುವ ಚಿತ್ರಗಳಿಗೆ ಹೋಲಿಸಿದರೆ “ನಾತಿಚರಾಮಿ’ ಹೊಸಬಗೆಯ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಮನರಂಜನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಚಿತ್ರಮಂದಿರಕ್ಕೆ ಕಾಲಿಡುವ ಪ್ರೇಕ್ಷಕನಿಗೆ “ನಾತಿಚರಾಮಿ’ ತಕ್ಷಣಕ್ಕೆ ಇಷ್ಟವಾಗೋದು ಕಷ್ಟ. ಅದನ್ನು ಹೊರತುಪಡಿಸಿದರೆ, ಹೊಸಥರದ ಚಿತ್ರಗಳನ್ನು ನೋಡಿ, ಬೆಂಬಲಿಸಬೇಕು ಎನ್ನುವವರು “ನಾತಿಚರಾಮಿ’ಯನ್ನು ಒಮ್ಮೆ ನೋಡಿ ಬರಬಹುದು. ಚಿತ್ರದಲ್ಲಿ ಮಧ್ಯಮ ಕುಟುಂಬದ ಗಂಡನಾಗಿ ಸಂಚಾರಿ ವಿಜಯ್ ಅವರದ್ದು ಪ್ರಬುದ್ಧ ಅಭಿನಯ.
ವಿಧವೆ ಗೌರಿಯ ಪಾತ್ರದಲ್ಲಿ ಶ್ರುತಿ ಹರಿಹರನ್ ಅಭಿನಯ ಪರವಾಗಿಲ್ಲ. ಮಧ್ಯಮ ಕುಟುಂಬದ ಗೃಹಿಣಿಯಾಗಿ ಶರಣ್ಯ ಅಭಿನಯ ಗಮನ ಸೆಳೆಯುತ್ತದೆ. ಇನ್ನುಳಿದ ಕಲಾವಿದರ ಅಭಿನಯ ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಇನ್ನು ಚಿತ್ರದ ಕಥೆ, ಸಂಗೀತ ಎಲ್ಲದರ ಹಿಂದೆಯೂ ಮಹಿಳೆಯರೇ ಇರುವುದರಿಂದ ಕೊಂಚ ಹೆಚ್ಚಾಗಿಯೇ “ಫಿಮೇಲ್ ಶ್ಯಾಡೋ’ ಚಿತ್ರದಲ್ಲಿ ಕಾಣುತ್ತದೆ. ಚಿತ್ರದ ಕೆಲವೊಂದು ದೃಶ್ಯಗಳು ವಾಸ್ತವಕ್ಕೆ ಬಲುದೂರವಿದ್ದರೂ, ಸಿನಿಮಾವಾಗಿದ್ದರಿಂದ ಅದನ್ನು ಒಪ್ಪಿಕೊಳ್ಳಲು ಅಡ್ಡಿಯಿಲ್ಲ.
ಚಿತ್ರ: ನಾತಿಚರಾಮಿ
ನಿರ್ದೇಶನ: ಮಂಸೋರೆ
ನಿರ್ಮಾಣ: ಜಗನ್ಮೋಹನ್ ರೆಡ್ಡಿ, ಶಿವಕುಮಾರ್ ರೆಡ್ಡಿ
ತಾರಾಗಣ: ಸಂಚಾರಿ ವಿಜಯ್, ಶ್ರುತಿ ಹರಿಹರನ್, ಶರಣ್ಯ, ಪೂರ್ಣಚಂದ್ರ, ಗೋಪಾಲಕೃಷ್ಣ, ಬಾಲಾಜಿ ಮನೋಹರ್, ಸೀತಾಕೋಟೆ ಮತ್ತಿತರರು
* ಜಿ.ಎಸ್ ಕಾರ್ತಿಕ ಸುಧನ್