Advertisement

ದರ್ಶನವೇ ಎಲ್ಲ ಧರ್ಮಗಳ ಹೃದಯ ಭಾಗ

05:18 PM Apr 07, 2018 | |

ಚಿತ್ರದುರ್ಗ: ಮಾನವನ ಬದುಕಿನಲ್ಲಿ ನಮ್ಮಗಳ ಸಂಗತಿ ದೇವರು. ವಿದೇಶಿಯರಲ್ಲಿ ದುಡಿಮೆ ಮುಖ್ಯ ಸಂಗತಿ. ವಿದೇಶದಲ್ಲಿ ಧರ್ಮ ಮತ್ತು ದುಡಿಮೆ ಜೊತೆ ಜೊತೆಯಾಗಿ ಸಾಗುತ್ತವೆ. ಎಲ್ಲ ಧರ್ಮಗಳ ಹೃದಯ ಭಾಗ ಎಂದರೆ ದರ್ಶನ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ಬಸವಕೇಂದ್ರ ಶ್ರೀಮುರುಘಾಮಠ, ರೋಟರಿ ಕ್ಲಬ್‌ ಚಿನ್ಮೂಲಾದ್ರಿ, ಎಸ್‌ಜೆಎಂ ಮಹಿಳಾ ಮಹಾವಿದ್ಯಾಲಯ ಹಾಗೂ ಎಸ್‌ಜೆಎಂ ನರ್ಸಿಂಗ್‌ ಕಾಲೇಜು ಚಿತ್ರದುರ್ಗ ಸಹಯೋಗದಲ್ಲಿ ನಡೆದ ಶರಣ ಸಂಗಮ, ಪೂಜ್ಯಶ್ರೀಗಳವರಿಗೆ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಗೌರವ ಸದಸ್ಯತ್ವ ಪದಕ ಪ್ರದಾನ ಹಾಗೂ ಭಾರತೀಯ ಭಕ್ತಿ ಚಳವಳಿಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ
ಮತ್ತು ಪ್ರದರ್ಶನ ವಿಷಯ ಕುರಿತು ಮಾತನಾಡಿದರು.

ದರ್ಶನವೆಂದರೆ ಪರಿಚಯ. ಪ್ರತಿಯೊಂದು ಧರ್ಮ ಅದರ ಅನುಯಾಯಿಗಳಿಗೆ ದರ್ಶನ ಮಾಡಿಸುತ್ತದೆ. ಧರ್ಮದ ಮುಖಾಂತರ ದರ್ಶನ ಆಗದೇ ಹೋದರೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ನಮಗೆ ಬಹಿರಂಗ ದರ್ಶನ ಬೇಕಿಲ್ಲ ಅಂತರಂಗದ ದರ್ಶನ ಬೇಕಿದೆ ಎಂದರು.

 ಪ್ರತಿಯೊಂದು ಧರ್ಮವು ದರ್ಶನ ಉಂಟು ಮಾಡಿದರೆ ಅನೇಕ ವೈರುಧ್ಯಗಳಿಗೆ ಕಡಿವಾಣ ಹಾಕಬಹುದು. ಇಂದು ಜನರಿಗೆ ದರ್ಶನ ಬೇಕಿಲ್ಲ ಅವರಿಗೆ ಪ್ರದರ್ಶನ ಬೇಕಿದೆ. ದರ್ಶನ ನಿರಾಕಾರವಾದುದು, ಪ್ರದರ್ಶನ  ಕಾರಯುಕ್ತವಾದುದು. ಇದರಾಚೆಗೆ ನಾವು ಸಾಗಬೇಕು. ಅಂತಹ ದರ್ಶನ ನಮಗೆ ಆಗಬೇಕಿದೆ ಎಂದರು.  

ಕನ್ನಡಿಗೆ ರೂಪ ತೋರಿಸುವ ಶಕ್ತಿ ಇದೆ. ಮಾನವ ನಿರ್ಮಿಸಿದ ದರ್ಪಣಕ್ಕೆ ಆ ಶಕ್ತಿ ಇದೆ ಎನ್ನುವುದಾದರೆ ಮಾನವನ ಅಂತರಂಗಕ್ಕೆ ಆ ಶಕ್ತಿ ಇರಲಾರದು. ಮಾನವನ ಒಳಗಿರುವ ಅಂತರಂಗದ ದರ್ಪಣವೇ ಅಂತಸಾಕ್ಷಿ. ತಮ್ಮ ದರ್ಶನ ಆಗಬೇಕು, ಸ್ವರೂಪ ದರ್ಶನ ಆಗಬೇಕು ಎಂದು ಹೇಳಿದರು.

Advertisement

 ಸ್ವರೂಪದರ್ಶನವಾದರೆ ವಿಶ್ವರೂಪ ದರ್ಶನವಾಗುತ್ತದೆ. ವಿಶ್ವರೂಪದರ್ಶನ ನಿರಾಕಾರ. ಎಲ್ಲ ಧರ್ಮಗಳು ನಮಗೆ ದರ್ಶನ ಉಂಟು ಮಾಡಬೇಕು. ನಮಗೆ ಸಮಷ್ಟಿ ದರ್ಶನ, ಸಮಗ್ರ ದರ್ಶನ ಆಗಬೇಕು. ದರ್ಶನ ಅದು ನಿದರ್ಶನ ಎಂದರು. 

ಹಾಸನ ಎವಿಕೆ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಡಾ| ಸೀ.ಚ. ಯತೀಶ್ವರ ಮಾತನಾಡಿ, 12ನೇ ಶತಮಾನ ಇಡೀ ಬದುಕಿನಲ್ಲಿ ವಿಶ್ವಕ್ಕೆ ಮಾದರಿ. ಜಡವಾದದ್ದನ್ನು ಸರಳಗೊಳಿಸುವ ಯತ್ನ 12ನೇ ಶತಮಾನದಲ್ಲಿ ನಡೆಯಿತು. ಬೀದರ್‌ ನಿಂದ ಮೈಸೂರಿನವರೆಗೆ ಇರುವ ಮಠಗಳು ಬಸವಾದಿ ಶರಣರು ಹೇಳಿದ ಪ್ರಯೋಗವನ್ನು ಯಥಾವತ್ತಾಗಿ ಮುಂದುವರಿಸಿದ್ದಾರೆ. ಶೋಷಿತ ಸಮುದಾಯದವರಿಗೆ ಹೊಸಬದುಕನ್ನು ಕಟ್ಟಿಕೊಟ್ಟದ್ದು ವಚನ ಸಾಹಿತ್ಯ. ಪ್ರದರ್ಶನವೆಂದರೆ ಆಡಂಬರದ ಪ್ರತೀಕ. ದರ್ಶನ ಅಂತರಂಗದ್ದು. ದೇಹವೇ ದೇಗುಲ ಎಂಬ ಪರಿಕಲ್ಪನೆ ಎಂದರು. 

ಲೋಕಾರ್ಪಣೆಗೊಂಡ ಭಾರತೀಯ ಭಕ್ತಿ ಚಳವಳಿಗಳು ಕೃತಿ ಕುರಿತು ಮಾತನಾಡಿದ ಡಾ| ಹಂಪನಹಳ್ಳಿ ತಿಮ್ಮೇಗೌಡ, ಇದೊಂದು ಅತ್ಯಂತ ಶ್ರೇಷ್ಠ ಕೃತಿ. ಜಿಎಸ್‌ ಎಸ್‌ ಅವರ ಸೌಂದರ್ಯ ಸಮೀಕ್ಷೆ, ಚಿದಾನಂದಮೂರ್ತಿಯವರ ಶಾಸನ ಸಾಹಿತ್ಯ, ತಿಪ್ಪೇರುದ್ರಸ್ವಾಮಿಯವರ ಸಂಸ್ಕೃತಿ ಸಮೀಕ್ಷೆ ಇವುಗಳ ಸಾಲಿನಲ್ಲಿ ಈ ಕೃತಿ ನಿಲ್ಲುತ್ತದೆ ಎಂದರು.

 ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್‌ ನಿಂದ ಈಶಾನ್ಯಭಾಗದವರೆಗೆ ಕಂಡುಬಂದಿರುವ ಭಕ್ತಿ ಚಳವಳಿ ಇದರಲ್ಲಿದೆ. ನಮ್ಮ ದೇಶದಲ್ಲಿ ಬಹುಭಾಷೆ, ಬಹುಸಂಸ್ಕೃತಿ ಇದ್ದು, ಸಮಸಮಾಜದ ಸೃಷ್ಟಿಗೆ ಶ್ರಮಿಸಿದ್ದು ಭಕ್ತಿ ಚಳವಳಿ. ಇದು ತಮಿಳುನಾಡಿನಲ್ಲಿ 6-7ನೇ ಶತಮಾನದಲ್ಲಿ ಆರಂಭವಾಗಿ ರಾಷ್ಟ್ರಾದ್ಯಂತ ಪಸರಿಸಿತು ಮಾತ್ರವಲ್ಲ ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಬಸವಾದಿ ಶರಣರು, ದಾಸಶ್ರೇಷ್ಠರು ಮೊದಲಾದವರಿಂದ ಕೂಡಿದ ಸಾಹಿತ್ಯ ಇಲ್ಲಿದೆ ಎಂದು ತಿಳಿಸಿದರು.

ಎಲ್ಲ ಧರ್ಮಗಳ ವಿಚಾರ ಕುರಿತು ಹೇಳಿದ್ದಾರೆ. ಶೈವ, ವೈಷ್ಣವ, ಪಾಶುಪಥ ಮೊದಲಾದವನ್ನು ಪರಿಚಯಿಸಿದ್ದಾರೆ. ಇಲ್ಲಿ ಶಿಸ್ತುಬದ್ಧ ನಿರೂಪಣೆಯ ಕೌಶಲ್ಯ ಇಲ್ಲಿದೆ. ಬಹುಸಂಸ್ಕೃತಿಗೆ ಉತ್ತಮ ಕೊಡುಗೆ ಎಂದರು. ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಕೊಡಮಾಡುವ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಗೌರವ ಸದಸ್ಯತ್ವ ಪದಕವನ್ನು ಡಾ| ಶಿವಮೂರ್ತಿ ಮುರುಘಾ ಶರಣರಿಗೆ ಎಂ.ಕೆ. ರವೀಂದ್ರ ಪ್ರದಾನ ಮಾಡಿದರು. ರೋಟರಿ ಕ್ಲಬ್‌ ಚಿನ್ಮೂಲಾದ್ರಿ ಅಧ್ಯಕ್ಷೆ ಗಾಯತ್ರಿ ಶಿವರಾಂ ಇದ್ದರು. ಪ್ರೊ| ಸಿ. ಬಸವರಾಜಪ್ಪ ಸ್ವಾಗತಿಸಿದರು. ಬಸವರಾಜು ಎನ್‌. ನಿರೂಪಿಸಿದರು. ಡಾ| ಸವಿತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next