ಬೆಂಗಳೂರು: ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಸ್ವ ಅಧ್ಯಯನ ಸೇರಿದಂತೆ ಸಕಲ ಸದ್ಗುಣಗಳ ತಳಹದಿ ಮೇಲೆ ನಿಂತಿರುವುದು ಜೈನ ಧರ್ಮದ ವಿಶೇಷತೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು.
ಕರ್ನಾಟಕ ಜೀವನ್ ವಿಜ್ಞಾನ ಅಕಾಡೆಮಿಯಿಂದ ಮಂಗಳವಾರ ನಗರದ ತೇರಾಪಂಥ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆಚಾರ್ಯ ತುಳಸಿಯವರ ಜೀವನ್ ವಿಜ್ಞಾನ್ ದಿವಸ್ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಈ ದೇಶದಲ್ಲಿ ಮತಾಂತರ ನಡೆಯುತ್ತಲೇ ಬಂದಿದೆ. ಸಾವಿರಾರು ಹಿಂದುಗಳನ್ನು ಮುಸ್ಲಿಂ ಮತ್ತು ಕ್ರೈಸ್ತ ಮತಾಂತರ ಮಾಡಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಆಚಾರ್ಯ ತುಳಿಸಿಯವರ ಜೀವನ ವಿಜ್ಞಾನ ಸಂದೇಶವನ್ನು ಕೇಳಿದರೆ ಸಾಲದು, ಅದನ್ನು ಜೀವನದಲ್ಲಿ ಅಚರಣೆಗೆ ತರಬೇಕು. ಕಾಯಕದ ಮೂಲಕ ಸಮಾಜ ಕಟ್ಟುವ ಸಂದೇಶ ಅವರು ನೀಡಿದ್ದಾರೆ. ಜೀವನದ ಮುಕ್ತಿಗೆ ಜ್ಞಾನದ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ಆಧ್ಯಾತ್ಮಿಕ ಜ್ಞಾನ ತುಂಬುವ ಕಾರ್ಯ ಆಗಬೇಕು ಎಂದರು.
ಶ್ರೇಷ್ಠ ಚಿಂತನೆಯ ಸರಳ ಜೀವನ ನಮ್ಮದಾಗಬೇಕು. ಹಣದಿಂದಲೇ ಎಲ್ಲವನ್ನು ಪಡೆಯಲು ಸಾಧ್ಯ ಎಂಬ ದುರಾಸೆ ಮತ್ತು ವ್ಯಾಮೋಹ ಮುಕ್ತ ನಿಲುವು ಮನಃಶಾಂತಿ ನೀಡುತ್ತದೆ. ಸತ್ಯದ ಹಾದಿಯಲ್ಲಿ, ಧರ್ಮದಂತೆ ನಡೆದುಕೊಳ್ಳವ ಮನೋವೃತ್ತಿ ನಮ್ಮದಾಗಲಿ ಎಂದು ಹೇಳಿದರು.
ಆಚಾರ್ಯ ಮಹಾಶ್ರಮಣಜೀರವರ ಶಿಷ್ಯೆ ಸಾಧ್ವಿ ವಿದ್ಯಾಲತಾಜೀ ಸಾನ್ನಿಧ್ಯ ವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷ ಮೂಲ್‌ಚಂದ್ ನಹರ್ ಸೇರಿ ಕನ್ಯಾಲಾಲ್ ಗಿರಿಯಾ, ಹೀರಾಲಾಲ್ ಮಾಲು, ಗೌತಮ್‌ಚಂದ್‌ಜೀ ಸೇಟಿಯಾ, ದೇವರಾಜ್ ನಹರ್, ವಿಮಲ್ ಕಟಾರಿಯಾ ಮೊದಲಾದವರು ಉಪಸ್ಥಿತರಿದ್ದರು.