Advertisement

ವೈರಲ್‌ ಆದ ಕಾನ್‌ಸ್ಟೇಬಲ್‌ಗ‌ಳ ಕೋವಿಡ್ ಹಾಡು…!

12:19 PM Jul 31, 2020 | mahesh |

ಬೆಂಗಳೂರು: ಕೋವಿಡ್ ವೈರಸ್‌ ವಿರುದ್ಧ ಜನ ಜಾಗೃತಿಗಾಗಿ ಬೀದಿ ನಾಟಕ, ವೈರಸ್‌ ವೇಷ ಹಾಕುವುದು, ರಾಯಭಾರಿಗಳಿಂದ ಮನವಿ ಹೀಗೆ ನಾನಾ ರೀತಿಯ ಕಸರತ್ತುಗಳು
ನಡೆಯುತ್ತಿವೆ. ಇದೆಲ್ಲದರ ಮಧ್ಯೆ ನಗರದ ಇಬ್ಬರು ಕಾನ್‌ಸ್ಟೇಬಲ್‌ಗ‌ಳು ಸ್ವತಃ ಗೀತೆಗಳನ್ನು ರಚಿಸಿ, ಅದಕ್ಕೆ ರಾಗ ಸಂಯೋಜನೆಯನ್ನೂ ಮಾಡಿ, ಧ್ವನಿ ನೀಡಿರುವ ಹಾಡುಗಳು ಇದೀಗ ಎಲ್ಲೆಡೆ ವೈರಲ್‌ ಆಗಿವೆ. ಜತೆಗೆ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿವೆ.

Advertisement

ಕಾನ್‌ಸ್ಟೇಬಲ್‌‌ಗ‌ಳಾದ ಸುಬ್ರಹ್ಮಣ್ಯ ಮತ್ತು ಮೌಲಾಲಿ ಕೆ. ಅಲಗೂರ ತಮ್ಮ “ಕೋವಿಡ್ ಹಾಡು’ಗಳ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಈ ಪೈಕಿ ಬೈಯಪ್ಪನಹಳ್ಳಿ ಕಾನೂನು ಸುವ್ಯವಸ್ಥೆ ಠಾಣೆಯ ಕಾನ್‌ ಸ್ಟೇಬಲ್‌ ಸುಬ್ರಹ್ಮಣ್ಯ, “ಕೈಯ ಮುಗಿದು ನಿಮ್ಮ ಬೇಡಿಕೊಳ್ಳುತ್ತೀವಿ ಹೊರಗಡೆ ಬರಬೇಡಿ…. ಇರೋದೊಂದು ಜೀವ ಕಳಕೊಂಡ ಮ್ಯಾಲೆ ಮತ್ತೆ
ಸಿಗುವುದೇನೋ ತಮ್ಮ, ಮರಳಿ ಬರುವುದೇನೋ…’, “ಮನೆಯ ಒಳಗೆ ಕುಳಿತು ನೀ ಮಾಡಬೇಕು ಒಳಿತು… ಹೊರಗೆ ಬರಲೇ ಬೇಡ ಸ್ವಲ್ಪ ಬುದ್ದಿ ಮಾತು ಕೇಳಾ…’ ಸೇರಿದಂತೆ ಒಟ್ಟಾರೆ ಮೂರು ಹಾಡುಗಳನ್ನು ರಚಿಸಿದ್ದಾರೆ. ಆ ಮೂಲಕ ಕೊರೊನಾದಿಂದ ಭಯಗೊಂಡು ಸಾವು-ನೋವು ಅನುಭವಿಸುತ್ತಿರುವ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ
ಮಾಡುತ್ತಿದ್ದಾರೆ.

ಮತ್ತೂಂದೆಡೆ ಸಶಸ್ತ್ರ ಮೀಸಲು ಪಡೆಯ ದಕ್ಷಿಣ ಘಟಕದ ಮೌಲಾಲಿ ಕೆ. ಅಲಗೂರ ಸಹ ವೃತ್ತಿಯಲ್ಲಿ ಕಾನ್‌ಸ್ಟೇಬಲ್‌‌ ಆಗಿದ್ದಾರೆ. ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿ ಹಾಗೂ ಗೀತ
ರಚನೆಕಾರ. ಅವರು ಸಹ ಮೂರು ಆಲ್ಬಂಗಳನ್ನು ಸೃಷ್ಟಿಸಿದ್ದಾರೆ. ಅರೆಸ್ಟ್ ಎನ್ನುವುದು ಪೊಲೀಸ್‌ ವ್ಯವಸ್ಥೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಪದ. ಇದೇ ಪದವನ್ನು ಬಳಸಿ “ಅರೆಸ್ಟ್ ಕೊರೊನಾ…’ ಎನ್ನುವ ಹಾಡು ರಚಿಸಿ ಮೌಲಾಲಿ ಹಾಡಿದ್ದಾರೆ. “ಕೊರೊನಾ ಕೆಮ್ಮಿದರೆ ಹೈರಾಣ…’ ಭಯಪಡದಿರಿ.. ಭಯಪಡದಿರಿ.. ಕೊರೊನಾಕೆ ನೆಗಡಿ, ಕೆಮ್ಮು, ದಮ್ಮು
ಜ್ವರ ಬಂದ್ರ ಇರಲಿ ಸ್ವಲ್ಪ ಎಚ್ಚರಿಕೆ…’ ಎಂಬ ಸಾಲು ಗಮನ ಸೆಳೆದಿದೆ. ಈ ಹಾಡುಗಳ ಕುರಿತು ಸುಬ್ರಹ್ಮಣ್ಯ ಹಾಗೂ ಮೌಲಾಲಿ ಪ್ರತಿಕ್ರಿಯಿಸಿದ್ದು,”ಈ ಸಾಲುಗಳ ರಚನೆಗೆ
ಸಾರ್ವಜನಿಕರೇ ಸ್ಫೂರ್ತಿ. ಅವರಿಂದಲೇ, ಅವರಿಗಾಗಿಯೇ ಈ ಗೀತೆಗಳನ್ನು ರಚಿಸಲಾಗಿದೆ. ಜನರಲ್ಲಿನ ಭಯ ಹೋಗಲಾಡಿಸಲು ಈ ಜಾಗೃತಿ ಸಾಲುಗಳು’ ಎನ್ನುತ್ತಾರೆ.

“ಕೊರೊನಾ ಬಗ್ಗೆ ಜನರಿಗೆ ಭಯ ಹುಟ್ಟಿತ್ತು. ಹೀಗಾಗಿ ಪೊಲೀಸರ ಕರ್ತವ್ಯದ ಜತೆಗೆ ಜಾಗೃತಿ ಮೂಡಿಸಲು ಈ ಹಾಡುಗಳನ್ನು ರಚಿಸಲಾಗಿದೆ. ಸಂಗೀತ ರಚಿಸಿ ಸಂಚಾರ ವಿಭಾಗದ ಮಹಿಳಾ ಕಾನ್‌ ಸ್ಟೇಬಲ್‌ ನೇತ್ರಾವತಿ ಕೂಡ ಧ್ವನಿ ನೀಡಿದ್ದಾರೆ ಎಂದು ಮೌಲಾಲಿ ಕೆ. ಅಲಗೂರು ತಿಳಿಸಿದರು. ಆಗಲೇ ಸಾಕಷ್ಟು ಮಂದಿ ಕೊರೊನಾ ಜಾಗೃತಿ ಹಾಡುಗಳನ್ನು ಹಾಡಿದ್ದರು. ಆದರೆ, ಪೊಲೀಸರಿಂದಲೇ ರಚಿಸಿದರೆ ಜನರಿಗೆ ಇನ್ನಷ್ಟು ಹತ್ತಿರವಾಗುತ್ತದೆ ಎಂದು ಮೂರು ಹಾಡುಗಳನ್ನು ರಚಿಸಲಾಗಿದೆ ಎಂದು ಸುಬ್ರಹ್ಮಣ್ಯ ಹೇಳಿದರು.

ಮೋಹನ್‌ ಭದ್ರಾವತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next