ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ನಿನ್ನೆ ರಾತ್ರಿ “ದಿ ವಿಲನ್’ ಚಿತ್ರತಂಡವು ಲಂಡನ್‌ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಫ್ಲೈಟ್ ಹತ್ತಬೇಕಿತ್ತು. ಆದರೆ, ಪ್ಲಾನ್ ಉಲ್ಟಾ ಆಗಿದೆ. ಲಂಡನ್ ಗೆ ಹೋಗಬೇಕಿದ್ದ ಚಿತ್ರತಂಡದವರು, ಇದೀಗ ಬ್ಯಾಂಕಾಕ್‌ಗೆ ಹೊರಟಿದ್ದಾರೆ. ಅದಕ್ಕೆ ಕಾರಣ ಭಯೋತ್ಪಾದಕರ ಹಾವಳಿ.
ಮೊನ್ನೆಯಷ್ಟೇ ಲಂಡನ್ ನಗರದಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಏಳು ಜನ ಸತ್ತಿದ್ದಾರೆ. 40 ಮಂದಿಗೆ ಗಾಯವಾಗಿದೆ. ಒಟ್ಟು ಮೂರು ಕಡೆ ಲಂಡನ್‌ನಲ್ಲಿ ಭಯೋತ್ಪಾದಕರ ದಾಳಿಯಾಗಿದೆ. ಆ ಮೂರು ಕಡೆಗಳ ಪೈಕಿ ಎರಡು ಕಡೆ “ದಿ ವಿಲನ್’ ಚಿತ್ರೀಕರಣ ನಡೆಯಬೇಕಿತ್ತಂತೆ.
ಅಷ್ಟರಲ್ಲಿ ಹೀಗಾಗಿದ್ದರಿಂದ, ಅಲ್ಲಿನ ಮ್ಯಾನೇಜರ್ ಫೋನ್ ಮಾಡಿ, ಒಂದು ವಾರ ಚಿತ್ರೀಕರಣ ಮುಂದೂಡಬಹುದಾ ಎಂದು ಕೇಳಿದ್ದಾರೆ. “ಎಲ್ಲಾ ತಯಾರಿ ಆಗಿತ್ತು. ಶಿವಣ್ಣ, ಸುದೀಪ್, ಆ್ಯಮಿ ಎಲ್ಲರೂ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು. ಅಷ್ಟರಲ್ಲಿ ಪೋಸ್ಟ್‌ಪೋನ್ ಮಾಡ್ತೀರಾ ಅಂದರೆ ಹೇಗಾಗಬೇಡ.
ಕೊನೆಗೆ ಯೋಚನೆ ಮಾಡಿ, ಲಂಡನ್ ಬದಲು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿದ್ದೇವೆ. ಮುಂಚೆ ಲಂಡನ್, ಬ್ಯಾಂಕಾಕ್ ಮತ್ತು ಚೀನಾದಲ್ಲಿ ಚಿತ್ರೀಕರಣ ಮಾಡೋ ಪ್ಲಾನ್ ಇತ್ತು. ಈಗ ಬ್ಯಾಂಕಾಕ್, ಚೀನಾ ಮುಗಿಸಿ ಲಂಡನ್‌ನಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಹಾಕಿಕೊಂಡಿದ್ದೇವೆ.
ಮಂಗಳವಾರ ಅಲ್ಲಿಗೆ ಹೋಗಿ ಲೊಕೇಶನ್ ಹುಡುಕಿ, ಅಲ್ಲೇ ಚಿತ್ರೀಕರಣ ಮುಂದುವರೆಸುತ್ತೇವೆ. ಶಿವಣ್ಣ, ಸುದೀಪ್, ಆ್ಯಮಿ, ತಿಲಕ್ ಮುಂತಾದವರು ಈ 14 ದಿನಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ಪ್ರೇಮ್. ಅಲ್ಲಿಂದ ಬಂದ ನಂತರ ಚೀನಾ, ಲಂಡನ್, ಕೇರಳ, ಲೇಹ್, ಲಡಾಕ್ ಮುಂತಾದ ಕಡೆ ಚಿತ್ರೀಕರಣ ಮುಂದುವರೆಯಲಿದೆ.
“ದಿ ವಿಲನ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಸಿ.ಆರ್. ಮನೋಹರ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್, ಸುದೀಪ್, ಶ್ರುತಿ ಹರಿಹರನ್, ಆ್ಯಮಿ ಜಾಕ್ಸನ್, ಶ್ರೀಕಾಂತ್, ಮಿಥುನ್ ಚಕ್ರವರ್ತಿ ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.