ಮುದ್ದೇಬಿಹಾಳ: ತಾಲೂಕಿನ ಯರಝರಿ ಗ್ರಾಮದಲ್ಲಿ ರಸ್ತೆ ದುರಸ್ತಿ ಸೇರಿದಂತೆ ಕೆಲ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಮತ್ತು ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ಶನಿವಾರ ಅಲ್ಲಿನ ಗ್ರಾಪಂ ಕಚೇರಿಗೆ ಬೀಗ ಜಡಿದು, ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ ನಡೆಸಿದರು. ಪಂಚಾಯತ್ ಕಚೇರಿ ಎದುರು ಟೈರ್ ಸುಟ್ಟು ನ್ಯಾಯಕ್ಕೆ ಆಗ್ರಹಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳು ಸಂಚರಿಸುವ ರಸ್ತೆ ದುರಸ್ತಿಗೆ ಮುಂದಾಗದ ಪಿಡಿಒ ಮತ್ತು ಅಧ್ಯಕ್ಷರ ವರ್ತನೆ ಬೇಸರ ಮೂಡಿಸಿದೆ. ಗ್ರಾಮದಲ್ಲಿ ಶೌಚಾಲಯ ಕಟ್ಟಿಸಿದ್ದು ಎಲ್ಲವೂ ಬೇಕಾಬಿಟ್ಟಿಯಾಗಿ ಕಟ್ಟಿದಂತಿವೆ. ಕಳಪೆ ಕಾಮಗಾರಿಗೆ ಉದಾಹರಣೆಯಾಗಿವೆ. ಅಲ್ಲದೆ ಪಂಚಾಯತ್‌ಗೆ ಮಂಜೂರಾದ ವಸತಿ ಯೋಜನೆ ಅಡಿ ಮನೆಗಳನ್ನು ಹಾಕಲು ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿದೆ. ಇವೆಲ್ಲ ಅವ್ಯವಸ್ಥೆ ವಿರೋಧಿಸಿ ಪಂಚಾಯಿತಿಗೆ ಬೀಗ ಜಡಿಯಬೇಕಾಯಿತು ಎಂದು ತಿಳಿಸಿದರು.
8 ತಿಂಗಳ ಹಿಂದೆ 14ನೇ ಹಣಕಾಸಿನಲ್ಲಿ ಕನ್ನಡ ಶಾಲೆಗೆ ಹೋಗುವ ರಸ್ತೆಗೆ 1.5 ಲಕ್ಷ ರೂ.ದಲ್ಲಿ ದುರಸ್ತಿಪಡಿಸಲು ಕ್ರಿಯಾಯೋಜನೆ ಸಿದ್ದಪಡಿಸಿದ್ದರೂ ಇದುವರೆಗೂ ದುರಸ್ತಿ ಆಗಿಲ್ಲ. ಇದರಿಂದ ಇಲ್ಲಿ ಸಂಚರಿಸುವ ಮಕ್ಕಳು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗಿದೆ. 8 ತಿಂಗಳಿಂದ ಈ ಪಂಚಾಯತ್‌ನಲ್ಲಿ ಒಂದೂ ಸಾಮಾನ್ಯ ಸಭೆ ನಡೆದಿಲ್ಲ. ಅಧ್ಯಕ್ಷೆ ಶಾಂತಮ್ಮ ಬಿರಾದಾರ ಪಂಚಾಯತ್ ಕಡೆ ಸುಳಿಯುವುದೇ ಇಲ್ಲ. ಪಿಡಿಒ ನಿರ್ಮಲಾ ತೋಟದ ಅಭಿವೃದ್ಧಿ ಕೆಲಸ ಮಾಡಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಹೀಗಾಗಿ ಊರಲ್ಲಿ ಅಭಿವೃದ್ಧಿಪರ ಕೆಲಸಗಳು ನಿಂತೆ ಹೋಗಿವೆ. ಇದಲ್ಲದೆ ಸ್ವತಃ ಪಂಚಾಯತ್ ಉಪಾಧ್ಯಕ್ಷರೇ ಇಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸುವಂತೆ ಕೋರಿ ಜಿಪಂ ಸಿಇಒಗೆ ದಾಖಲೆ ಸಮೇತ ಮನವಿ ಸಲ್ಲಿಸಿರುವುದು ಇಲ್ಲಿ ಆಡಳಿತ ಎಷ್ಟೊಂದು ಹದಗೆಟ್ಟಿದೆ ಎನ್ನುವುದಕ್ಕೆ ಉದಾಹರಣೆಯಂತಿದೆ ಎಂದು ಗ್ರಾಮಸ್ಥರು ಆಪಾದಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಪಂ ಪ್ರಭಾರ ಇಒ ಪಿ.ಕೆ. ದೇಸಾಯಿ ಅವರು ಅಹವಾಲು ಆಲಿಸಿ ಸಮಸ್ಯೆಗಳ
ಪರಿಹಾರಕ್ಕೆ ಕ್ರಮ ಜರುಗಿಸುವಂತೆ ಪಿಡಿಒ ನಿರ್ಮಲಾ ತೋಟದ ಅವರಿಗೆ ಸೂಚಿಸಿದರು. ಇದಕ್ಕೂ ಮುನ್ನ ಪಂಚಾಯತ್ ಕಚೇರಿ ಎದುರು ಪಿಡಿಒ ತೋಟದ ಅವರನ್ನು ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಬಿರಾದಾರ ಅವರೂ ಸ್ಥಳಕ್ಕೆ ಆಗಮಿಸಿ ಧರಣಿ ನಡೆಸುತ್ತಿದ್ದವರನ್ನು ಸಮಾಧಾನಪಡಿಸಲು ಯತ್ನಿಸಿದರು.
ಪ್ರತಿಭಟನೆ, ಇಒ ಸೂಚನೆಗೆ ಮಣಿದ ಪಿಡಿಒ ಅವರು ರವಿವಾರದಿಂದಲೇ ರಸ್ತೆ ದುರಸ್ತಿ ಮಾಡಿಸಿ ಮಕ್ಕಳಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.
ಬಸವರಾಜ ಬಾಗೇವಾಡಿ, ಮಲ್ಲಪ್ಪ ಈಳಗೇರ, ಮಂಜುನಾಥ ಗುರಿಕಾರ, ಬೀರಪ್ಪ ಗುರಿಕಾರ, ಹನುಮಂತ ಅಪರಾ , ಹನುಮಂತ ಮೇಟಿ, ಶಿವಪ್ಪ ಗಣ್ಣೂರ, ಸುರೇಶ ನರಸಲಗಿ, ಪ್ರಕಾಶ ಉಕ್ಕಲಿ, ಯಲ್ಲಾಲಿಂಗ ಈಳಗೇರ, ಬಸಪ್ಪ ಈಳಗೇರ, ಅಂಬರೀಷ ಗಣ್ಣೂರ, ಮುತ್ತಣ್ಣ ಯಾಳಗಿ, ಶಿವು ಗುರಿಕಾರ, ಸುರೇಶ ನಾಗಾವಿ, ಭೀಮರಾಯ ಹುಲ್ಲೂರು, ನಿಂಗಪ್ಪ ಹುಲ್ಲೂರ, ರೈತ ಸಂಘದ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.