ಶಿರಸಿ: ನಗರಕ್ಕೆ ಹೊಂದಿಕೊಂಡಿದ್ದರೂ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಗ್ರಾಮ ಸಭೆಗೆ ಗೈರಾಗಿದ್ದನ್ನು ಆಕ್ಷೇಪಿಸಿದ ನಾಗರಿಕರು ಇನ್ನೊಂದು ದಿನ ಅಧಿಕಾರಿಗಳ ಉಪಸ್ಥಿತಿಯಲ್ಲೇ ಸಭೆ ನಡೆಸುವಂತೆ ಹಕ್ಕೊತ್ತಾಯ ಮಂಡಿಸಿದರು.
ಯಡಹಳ್ಳಿ ಗ್ರಾಪಂ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಳೀಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ, ಗ್ರಾಮ ಸಭೆ ಎಂದರೆ ಸಮರ್ಪಕ ಮಾಹಿತಿ ಬೇಕಿತ್ತು. ಸೊಸೈಟಿ ರೈತ ಸದಸ್ಯರ ಹಿತದೃಷ್ಟಿಯಲ್ಲಿ ಲಿಖೀತವಾಗಿ ಹತ್ತು ದಿನ ಮೊದಲೇ ಅಗತ್ಯ ಮಾಹಿತಿ ಕೇಳಿದರೂ ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಬಂದಿಲ್ಲ, ಬಂದವರ ಬಳಿ ಯಾವುದೇ ಸಮರ್ಪಕ ಮಾಹಿತಿ ಇಲ್ಲ. ಇಂಥ ಗ್ರಾಮ ಸಭೆ ನಡೆಸಿ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.
ಅಡಕೆ ಕೊಳೆ ಪರಿಹಾರ ಹಣ ಯಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ. ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಕೇವಲ 999 ರೂ. ಮಾತ್ರ ವೆಬ್‌ಸೈಟ್‌ನಲ್ಲಿ ಹಾಕಿದ್ದು ಕಾಣುತ್ತದೆ. ಎಕರೆವಾರು ಎಷ್ಟು ಹಣ ಮಂಜೂರಿ ಆಗಬೇಕಿತ್ತು ಎಂದು ಲಿಖೀತವಾಗಿ ಕೇಳಿದರೂ ಉತ್ತರ ಬಂದಿಲ್ಲ ಎಂದೂ ಬೆಳ್ಳೇಕೇರಿ ಪ್ರಶ್ನೆಗೆ ಜಿಪಂ ಸದಸ್ಯೆ ಉಷಾ ಹೆಗಡೆ, ತಾಪಂ ಸದಸ್ಯ ನಾಗರಾಜ್ ಶೆಟ್ಟಿ ಧ್ವನಿಗೂಡಿಸಿದರು.
ಹಲವು ಗ್ರಾಪಂಗಳಲ್ಲಿ ಪಹಣಿ ಪತ್ರಿಕೆ ನೀಡಿದರೂ ಇಲ್ಲಿನ ಪಂಚಾಯ್ತಿಯಲ್ಲಿ ಮಾತ್ರ ಸಿಗುತ್ತಿಲ್ಲ ಯಾಕೆ? ವೆಬ್‌ಸೆಂಟರ್‌ಗಳಲ್ಲಿ ರೇಶನ್ ಕಾರ್ಡ್ ಸಿಕ್ಕರೂ ಗ್ರಾ.ಪಂಗಳಲ್ಲಿ ಸಿಗೋದಿಲ್ಲ. ಈ ಭಾಗದ ನಾಗರಿಕರಿಗೆ ಅನ್ಯಾಯ ಆಗುತ್ತಿದೆ. ಆಧಾರ ಕಾರ್ಡ್ ಸಮಸ್ಯೆ ಬಗೆ ಹರಿದಿಲ್ಲ ಎಂದೂ ಪ್ರಶ್ನಿಸಿದರು. ಗ್ರಾಮಸ್ಥ ರಾಘವೇಂದ್ರ ಹೆಗಡೆ ಬೆಳೆ ಪಹಣಿಯಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಒಂದು ಎಕರೆ ಅಡಕೆಯಲ್ಲಿ ಇದ್ದಲ್ಲಿ ಕಾಳು ಮೆಣಸು ಅಂತ ದಾಖಲಿಸಲು ಸಮಸ್ಯೆ ಏನು? ಇದು ಆಗದೇ ಇರುವುದರಿಂದ ಬೆಳೆ ಸಾಲ, ತೋಟಗಾರಿಕಾ ಸೌಲಭ್ಯ ಸಿಗಲೂ ವ್ಯತ್ಯಾಸ ಆಗುತ್ತಿದೆ ಎಂದೂ ದೂರಿದರು.
ರಸ್ತೆ ಸಾರಿಗೆ ಸಮಸ್ಯೆ ಸಾಕಷ್ಟಿದೆ, ಯಡಹಳ್ಳಿ ಗಿಡಮಾವಿನಕಟ್ಟೆ, ಕಲ್ಲಕೈ ಕತ್ರಿ ಬಳಿ ಬಸ್ಸೇ ಸರಿಯಾಗಿ ನಿಲ್ಲಿಸುವುದಿಲ್ಲ, ಸಾಗರ ಡಿಪೋ ಬಸ್ ಮೊದಲಿನ ಚಾಳಿ ಮಾಡುತ್ತಿರುವುದರಿಂದ ಶಾಲಾ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಕೇಳ್ಳೋಣ ಎಂದರೆ ಸಾರಿಗೆ ಅಧಿಕಾರಿಗಳು ಸಭೆಗೆ ಬಂದಿಲ್ಲ. ಮುಖ್ಯ ರಸ್ತೆಯೇ ರಸ್ತೆ ಹೊಂಡಾಗುಂಡಿಯಾಗಿದೆ. ಯಾಕೆ ಸಾರ್ ಎಂದು ಕೇಳಲು ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ. ರೇಷ್ಮೆ ಇಲಾಖೆ ಸೌಲಭ್ಯಗಳು ಉಂಟೇ ಎಂದು ಕೇಳಲು ಅವರೂ ನಾಪತ್ತೆ. ಮಳೆಗಾಲ ಇದ್ದರೂ ಕೃಷಿ ಅಧಿಕಾರಿಗಳು ಬಂದೇ ಇಲ್ಲ ಎಂಬ ಮಾತುಗಳು ವ್ಯಕ್ತವಾದವು.
ನೋಡೆಲ್ ಅಧಿಕಾರಿ ಜಿ.ಟಿ.ಗೌಡ, ತಾಲೂಕು ಮಟ್ಟದ ಅಧಿಕಾರಿಗಳ ಗೈರಿದೆ, ಇನ್ನು ಕೆಲವು ಅಧಿಕಾರಿಗಳು ಕೆಳ ಹಂತದವರನ್ನೇ ಕಳಿಸಿದ್ದಾರೆ. ಈ ಕಾರಣದಿಂದ ನಾಗರಿಕರ ಆಗ್ರಹದ ಮೇರೆಗೆ ಇನ್ನೊಂದು ದಿನ ಮತ್ತೂಂದು ಗ್ರಾಮ ಸಭೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲು ತೀರ್ಮಾನಿಸಿ ದಿನ ಪ್ರಕಟಿಸುತ್ತೇವೆ ಎಂದರು.
ಉಪಾಧ್ಯಕ್ಷ ಗಣಪತಿ ಗೌಡ, ಸದಸ್ಯರಾದ ರಾಮನಾಥ ಹೆಗಡೆ, ಶ್ರೀಲಕ್ಷ್ಮೀ ಅನಂತ ಹೆಗಡೆ, ಗೀತಾ ರಾಮಚಂದ್ರ ಚನ್ನಯ್ಯ, ರವಿ ಪೂಜಾರಿ, ಮೋಹಿನಿ ನಾಯ್ಕ, ವಿನೋದ ದೇವಡಿಗ ಇತರರು ಇದ್ದರು. ಪಿಡಿಓ ಪ್ರೀತಿ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಆರ್.ಕಾರಂತ ವಂದಿಸಿದರು.