Advertisement

ಸ್ವಚ್ಛ ಗ್ರಾಮದತ್ತ ಹಳ್ಳಿಗರ ಮಾದರಿ ಹೆಜ್ಜೆ

09:39 AM Jul 28, 2019 | Suhan S |

ಹುಬ್ಬಳ್ಳಿ: ಪ್ಲಾಸ್ಟಿಕ್‌ ಮುಕ್ತ ಗ್ರಾಮವಾಗಿಸಲು ಮಹತ್ವದ ಹೆಜ್ಜೆ ಇರಿಸಿದ್ದ ತಾಲೂಕಿನ ಅಂಚಟಗೇರಿ ಗ್ರಾಪಂ, ಇದೀಗ ಸ್ವಚ್ಛತೆ ದೃಷ್ಟಿಯಿಂದ ನಗರಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಎರಡು ಗ್ರಾಮಗಳ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ಮುಂದಾಗಿದೆ.

Advertisement

ಮನೆಯಲ್ಲಿಯೇ ತ್ಯಾಜ್ಯ ವಿಂಗಡಣೆ ಮಾಡಿ, ಸಂಗ್ರಹಿಸಿ ಕಾಂಪೋಸ್ಟ್‌ ಇನ್ನಿತರ ಉತ್ಪನ್ನಗಳ ಮೂಲಕ ಮರುಬಳಕೆ ಯತ್ನಕ್ಕೆ ಗ್ರಾಪಂ ಮುಂದಾಗಿದೆ. ಗ್ರಾಮವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್‌ ಸಂಗ್ರಹ ಯೋಜನೆ ಕೈಗೊಂಡಿರುವ ಗ್ರಾಪಂ ಅಧ್ಯಕ್ಷ ಬಸವರಾಜ ಬಿಡ್ನಾಳ ಇದೀಗ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಹಲವರ ಸಹಕಾರ: ಅಂಚಟಗೇರಿ ಹಾಗೂ ಅಗ್ರಹಾರ ತಿಮ್ಮಸಾಗರದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯೆಯರು ಹಾಗೂ ಗ್ರಾಪಂ ಸದಸ್ಯರ ನೇತೃತ್ವದ ತಂಡಗಳನ್ನು ರಚಿಸಲಾಗಿದೆ. ತನ್ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಗ್ರಾಪಂ ಮುಂದಾಗಿದೆ. ಪೂರ್ವಭಾವಿ ಸಭೆಗಳನ್ನೂ ನಡೆಸಿ ಯೋಜನಾನುಷ್ಠಾನಕ್ಕೆ ಸಿದ್ಧತೆ ಭರದಿಂದ ಸಾಗಿದೆ.

ಸ್ವಾತಂತ್ರ್ಯ ದಿನದ ಮುಹೂರ್ತ ಆ. 15ರಿಂದ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ, ಅಗ್ರಹಾರ ತಿಮ್ಮಸಾಗರ ಗ್ರಾಮಗಳಲ್ಲಿ ಮನೆಗಳಿಂದ ಹಸಿ ಕಸ ಹಾಗೂ ಒಣ ಕಸ ಸಂಗ್ರಹಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಗ್ರಾಪಂ ಮಾಡುತ್ತಿದೆ. ಡಪ್ಪಿಂಗ್‌ ಯಾರ್ಡ್‌ ನಿರ್ಮಾಣ, ಮನೆ ಮನೆಗೆ ಡಸ್ಟ್‌ ಬಿನ್‌ ವಿತರಣೆ, ಗ್ರಾಮದ ಎಲ್ಲೆಡೆ ಕಸ ವಿಲೇವಾರಿಗೆ ಡಸ್ಟ್‌ ಬಿನ್‌ ಅಳವಡಿಕೆ, ಮನೆಗಳಿಂದ ಕಸ ಸಂಗ್ರಹಣೆಗೆ ವಾಹನ ವ್ಯವಸ್ಥೆ ಸೇರಿದಂತೆ ಎಲ್ಲ ತಯಾರಿ ಮಾಡಲಾಗುತ್ತಿದೆ.

ಕಸ ಎಂದರೆ ಎಲ್ಲರಿಗೂ ತಾತ್ಸಾರ ಭಾವನೆ ಇದೆ. ಆದರೆ, ಅದು ಸಂಪನ್ಮೂಲವಾಗಿದ್ದು ಸದ್ಬಳಕೆ ಅವಶ್ಯ. ಗ್ರಾಮಸ್ಥರು ಗ್ರಾಪಂ ಜತೆ ಸಹಕರಿಸಿ ಕಸ ಸಂಗ್ರಹಣೆಗೆ ಆದ್ಯತೆ ನೀಡಬೇಕು. ಗ್ರಾಮದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿರುವ ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಅವರಿಗೆ ಗ್ರಾಪಂ ಹಾಗೂ ಗ್ರಾಮದ ಜನರ ಪರವಾಗಿ ಅಭಿನಂದನೆ.•ಬಸವರಾಜ ಬಿಡ್ನಾಳ, ಗ್ರಾಪಂ ಅಧ್ಯಕ್ಷ

Advertisement

ಮನೆ ಮನೆಯಿಂದ ಕಸ ಸಂಗ್ರಹಣೆಗೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಡಂಪಿಂಗ್‌ ಯಾರ್ಡ್‌ ನಿರ್ಮಾಣ ಕಾರ್ಯ ನಡೆದಿದೆ. ಆರಂಭದಲ್ಲಿ ತೊಂದರೆಯಾದರೂ ಪ್ಲಾಸ್ಟಿಕ್‌ ನಿರ್ಮೂಲನೆಯಂತೆ ಮನೆ ಮನೆ ಕಸ ಸಂಗ್ರಹದಲ್ಲಿಯೂ ಯಶಸ್ಸು ಸಾಧಿಸುತ್ತೇವೆ.•ಎಚ್.ಎಫ್‌. ಕಲಹಾಳ, ಪಿಡಿಒ

ಈ ವರ್ಷ 25 ಗ್ರಾಪಂ ಗುರಿ:ಸರಕಾರದ ನಿರ್ದೇಶನದಂತೆ ಈ ವರ್ಷ 25 ಗ್ರಾಪಂಗಳಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹ ಗುರಿ ನೀಡಲಾಗಿದೆ. ಅದರಂತೆ ಈಗಾಗಲೇ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದ್ದು, ಅಂಚಟಗೇರಿ ಗ್ರಾಪಂ ಕೂಡಾ ಒಂದು. ಮುಂದಿನ ವರ್ಷ 50 ಗ್ರಾಪಂಗಳಾಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಆದೇಶ ನೀಡಿದೆ ಎಂದು ಜಿಪಂ ಸಿಇಒ ಡಾ| ಬಿ.ಸಿ. ಸತೀಶ ‘ಉದಯವಾಣಿ’ಗೆ ತಿಳಿಸಿದರು. ಮಲೆನಾಡು ಜಿಲ್ಲೆಗಳಿಗೆ ಹೋಲಿಸಿದರೆ ನಾವು ಸ್ವಲ್ಪ ಹಿಂದೆ ಇದ್ದು, ಈಗಾಗಲೇ ಮಲೆನಾಡು ಗ್ರಾಪಂಗಳಲ್ಲಿ ಚಾಲನೆ ನೀಡಿ ಕಾರ್ಯಾರಂಭ ಮಾಡಲಾಗಿದೆ. ಈ ವರ್ಷದ ಗುರಿ 25 ಇಟ್ಟುಕೊಳ್ಳಲಾಗಿದೆ. ಸರಕಾರಕ್ಕೆ 7 ಗ್ರಾಪಂಗಳ ವರದಿ ಸಲ್ಲಿಸಿದ್ದು, ಅದರಲ್ಲಿ ಸದ್ಯ 3 ಗ್ರಾಪಂಗಳಿಗೆ ಅನುಮೋದನೆ ಸಿಕ್ಕಿದೆ. ಅಂಚಟಗೇರಿ ಗ್ರಾಪಂನಲ್ಲಿ ಆ. 15ರಿಂದ ಮನೆ ಮನೆ ಕಸ ಸಂಗ್ರಹಕ್ಕೆ ಚಾಲನೆ ನೀಡಲಿದ್ದಾರೆ ಮಾಹಿತಿ ನೀಡಿದರು.

 

•ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next