Advertisement

ಅರಂಬೂರು ಸೇತುವೆ ಕಾಮಗಾರಿ ಅಪೂರ್ಣ: ಶೀಘ್ರ ಪೂರ್ಣಗೊಳಿಸಲು ಗ್ರಾಮಸ್ಥರ ಆಗ್ರಹ

12:45 AM Jun 19, 2020 | Sriram |

ಸುಳ್ಯ: ಕಳೆದ ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿರುವ ಅರಂಬೂರು ಸೇತುವೆ ಕಾಮಗಾರಿ ತತ್‌ಕ್ಷಣ ಪೂರ್ಣಗೊಳಿಸಿ ಸಂಚಾರ ಮುಕ್ತ ಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಆಲೆಟ್ಟಿ ಗ್ರಾಮದ ಪಯಸ್ವಿನಿ ನದಿಗೆ ಅರಂಬೂರು ಬಳಿ 4.90 ಕೋ. ರೂ. ವೆಚ್ಚ ದಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿದೆ. 2015-16ನೇ ಸಾಲಿನ ಆಯವ್ಯಯದಲ್ಲಿ 4.90 ಕೋಟಿ ರೂ. ಅನುದಾನ ಬಿಡುಗಡೆ ಗೊಂಡು ಕಾಮಗಾರಿ ಆರಂಭಗೊಂಡಿತ್ತು. ಸೇತುವೆಯ 5 ಅಂಕಣಗಳ ಕಾಮಗಾರಿ ಪೂರ್ತಿಗೊಂಡಿದ್ದು, ಅಂತಿಮ ಕೆಲಸ ಪ್ರಗತಿಯಲ್ಲಿದೆ. 82.54 ಮೀ. ಉದ್ದ, 7.5 ಮೀ. ಮೇಲ್ಭಾಗದ ಅಗಲ ಮತ್ತು 9 ಮೀ. ಎತ್ತರವಿದೆ. ನೀರು ಹರಿಯಲು 15 ಮೀ. ಅಗಲದ ಐದು ಕಿಂಡಿಗಳಿವೆ. 4 ಪಿಲ್ಲರ್‌ ಮತ್ತು 2 ಅಬೆಟ್‌ಮೆಂಟ್‌ ಒಳಗೊಂಡಂತೆ ಆರ್‌ಸಿಸಿ ಟಿ ಬೀಮ್‌ ಬ್ರಿಡ್ಜ್ ಇದಾಗಿದೆ.

ವಿಸ್ತರಿತ ಅವಧಿ ಮುಗಿದಿದೆ
2017ರ ಮಾರ್ಚ್‌ನಲ್ಲಿ ಸೇತುವೆ ಕೆಲಸ ಆರಂಭಗೊಂಡಿತ್ತು. ಕಾಮಗಾರಿ ಮುಗಿಸಲು 11 ತಿಂಗಳ ಅವಧಿ ನೀಡಲಾಗಿದ್ದು, 2018ರ ಮಾರ್ಚ್‌ಗೆ ಮುಗಿದಿದೆ. ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆ ದಾರರು 2019ರ ಮಾರ್ಚ್‌ ತನಕ ಅವಧಿ ವಿಸ್ತರಿಸುವಂತೆ ಕೋರಿಕೆ ಸಲ್ಲಿಸಿದ್ದರು. ಈ ಅವಧಿ ಮುಗಿದು ಮತ್ತೆ ಒಂದು ವರ್ಷ ಸಂದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಬಹುಕಾಲದ ಬೇಡಿಕೆ
ಆಲೆಟ್ಟಿ ಗ್ರಾಮದ ಅರಂಬೂರು, ನೆಡಿcಲ್‌ ಕೂಟೇಲು ಸಹಿತ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ನಗರದ ಸಮೀಪವೇ ಇದ್ದರೂ ಸೇತುವೆ ಇಲ್ಲದ ಕಾರಣ ಸುಳ್ಯಕ್ಕೆ ಬರಬೇಕಾದರೆ ಆಲೆಟ್ಟಿಗೆ ತೆರಳಿ ಸುತ್ತು ಬಳಸಿ ಸುಮಾರು 16 ಕಿ. ಮೀ. ಪ್ರಯಾಣಿಸಬೇಕಿತ್ತು. ಇಲ್ಲದಿದ್ದರೆ ದೋಣಿ ಬಳಸಿ ನದಿ ದಾಟಬೇಕಿತ್ತು. ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ 1989ರಲ್ಲಿ ತೂಗು ಸೇತುವೆ ನಿರ್ಮಿಸಿ ಪಾದಚಾರಿ ನಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ದೋಣಿಯಲ್ಲಿ ದಾಟುವ ಪ್ರಮೇಯ ತಪ್ಪಿತ್ತು. ಆದರೆ ವಾಹನ ಓಡಾಟಕ್ಕೆ ಸಾಧ್ಯವಾಗದ ಕಾರಣ ಜನರು ಎಲ್ಲ ವಸ್ತುಗಳನ್ನು ತಲೆಯಲ್ಲಿ ಹೊತ್ತು ತೂಗು ಸೇತುವೆ ದಾಟುವ ಸ್ಥಿತಿ ಮುಂದುವರಿದಿದೆ. ಅರಂಬೂರು ಸೇತುವೆ ಪೂರ್ಣಗೊಂಡರೆ ಈ ಬವಣೆಗೆ ಮುಕ್ತಿ ಸಿಗಲಿದೆ. ಆಲೆಟ್ಟಿ, ಪೆರಾಜೆ ಗ್ರಾಮಕ್ಕೆ, ಆಲೆಟ್ಟಿ ಮೂಲಕ ಬಡ್ಡಡ್ಕ-ಕಲ್ಲಪ್ಪಳ್ಳಿ, ಆಲೆಟ್ಟಿ-ಕೋಲ್ಚಾರ್‌ – ಬಂದಡ್ಕ, ಬಡ್ಡಡ್ಕ-ಕೂರ್ನಡ್ಕ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

ಗ್ರಾಮಸ್ಥರ ಅಸಮಾಧಾನ
ಅರಂಬೂರು ಸೇತುವೆ ಕಾಮಗಾರಿಯ ಗುತ್ತಿಗೆದಾರ ಕುಂದಾಪುರ ರಾಜೇಶ್‌ ಕಾರಂತ್‌ ಹಾಗೂ ಎಂಜಿನಿಯರ್‌ ಸಣ್ಣೇಗೌಡ ಕಾಮಗಾರಿ ಸ್ಥಳಕ್ಕೆ ಬುಧವಾರ ಸಂಜೆ ಭೇಟಿ ನೀಡಿದ್ದು, ಈ ಸಂದರ್ಭ ಸೇತುವೆ ನಿರ್ಮಾಣ ಸಮಿತಿ ಅಧ್ಯಕ್ಷ ಉದಯ ಕುಮಾರ್‌ ಅರಂಬೂರು, ಕಾರ್ಯದರ್ಶಿ ತೀರ್ಥರಾಮ ನೆಡಿcಲು, ಸ್ಥಳದಾನಿಗಳು ಹಾಗೂ ಊರವರು ಸೇತುವೆ ನಿರ್ಮಾಣ ಆರಂಭಿಸಿ 4 ವರ್ಷ ಆದರೂ ಪೂರ್ತಿ ಆಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಂಜಿನಿಯರ್‌ ಸಣ್ಣಯ್ಯ ಗೌಡ, ಊರಿನ ಜನರಿಗೆ ಅನುಕೂಲವಾಗುವಂತೆ ತುರ್ತು ಕಾಮಗಾರಿ ಪೂರ್ಣಗೊಳಿಸಿ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next