Advertisement

ವಿವಿಧೆಡೆ ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮ

06:17 PM Apr 18, 2022 | Nagendra Trasi |

ಇಂಡಿ: ರೈತರ ಜಮೀನುಗಳಿಗೆ ಹೋಗಲು ಗ್ರಾಪಂ ನಕ್ಷೆಯಲ್ಲಿ ಕಾಲು ದಾರಿ ಅಥವಾ ಬಂಡಿದಾರಿ ಮತ್ತು ಅದು ಸರಕಾರಿ ದಾರಿ ಎಂದಿದ್ದರೆ ಆ ಸಮಸ್ಯೆಯನ್ನು ಕೂಡಲೇ ಇತ್ಯರ್ಥ ಪಡಿಸಲಾಗುವದು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.

Advertisement

ತಾಲೂಕಿನ ನಿಂಬಾಳ ಕೆ.ಡಿ ಗ್ರಾಮದ ನಮ್ಮೂರ ಸರಕಾರಿ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಂದು ವೇಳೆ ಸರಕಾರಿ ಜಮೀನು ಖಾಸಗಿಯವರು ಉಪಯೋಗಿಸುತ್ತಿದ್ದರೂ ಅದನ್ನು ದಾರಿಯಾಗಿ ಮಾಡಿಕೊಡಲಾಗುವದು. ಆದರೆ ಹೊಲದ ಮಾಲೀಕರ ಹೆಸರಲ್ಲಿ ಜಮೀನಿದ್ದರೆ ಮಾತುಕತೆಯ ಮೂಲಕ ನಿಮ್ಮ ಹಂತದಲ್ಲಿಯೇ ಬಗೆಹರಿಸಿಕೊಳ್ಳಬೇಕು, ಇಲ್ಲದಿದ್ದರೆ ಸಿವಿಲ್‌ ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದರು.

ಕುಡಿಯುವ ನೀರು: ಹಳಗುಣಕಿ, ಚವಡಿಹಾಳ, ಬಬಲಾದ ಸೇರಿದಂತೆ ಕೆಲವು ಅಡವಿ ವಸ್ತಿಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಕೇಳಿದ್ದಾರೆ. ಗ್ರಾಮಸ್ಥರು ಕೇಳುವ ಮುಂಚೆ ಕುಡಿವ ನೀರಿನ ವ್ಯವಸ್ಥೆ ಮಾಡಿ. ಗ್ರಾಪಂನಿಂದ ತೆರಿಗೆ ಸಂಗ್ರಹದಲ್ಲಿ 1 ಅಥವಾ 2 ಲಕ್ಷ ಇಡಿ, 15ನೇ ಹಣಕಾಸಿನಲ್ಲಿ ಕುಡಿವ ನೀರಿಗೆ ಶೇ.30 ಹಣ ಖರ್ಚು ಮಾಡಲು ತಿಳಿಸಿದರು.

ಇಂಡಿ ಪ್ರದೇಶ ಬರಗಾಲ ಪ್ರದೇಶವೆಂದು ಘೋಷಣೆಯಾದರೆ ಮಾತ್ರ ಜಿಲ್ಲಾ ಧಿಕಾರಿಗಳಿಂದ ಅನುದಾನ ಬರುತ್ತದೆ. ಘೋಷಣೆಯಾಗದಿದ್ದರೆ ಗ್ರಾಪಂ ಅನುದಾನ ದಲ್ಲಿಯೇ ಹಣ ಖರ್ಚು ಮಾಡಬೇಕಾಗುತ್ತದೆ ಎಂದರು.

ಗ್ರಾಮ ನಕ್ಷೆ ಇಲ್ಲ: ಕೆಲವು ಗ್ರಾಮಸ್ಥರು ನಾವು ಕಳೆದ ಎರಡು ವರ್ಷಗಳಿಂದ ಪಿ.ಟಿ. ಸೀಟು ಬೇಡುತ್ತಿದ್ದೇವೆ ಕೊಡುತ್ತಿಲ್ಲ ಎಂದರು. ಅದಕ್ಕೆ ಪಿಡಿಒ ನಮ್ಮ ಹತ್ತಿರ ಗ್ರಾಮ ನಕ್ಷೆ ಇಲ್ಲ ಎಂದರು. ಅದಕ್ಕೆ ಜಿಲ್ಲಾ ಧಿಕಾರಿ ಮತ್ತೂಂದು ಎಲ್ಲಿ ಸಿಗುತ್ತದೆ ನೋಡಿ ಕೊಳ್ಳಬೇಕು. ಇಲ್ಲವೆ ಬೆಂಗಳೂರಿಗೆ ಹೋಗಿ ಇನ್ನೊಂದು ಸೀಟು ತರುವ ವ್ಯವಸ್ಥೆಯಾಗಬೇಕು ಎಂದರು.

Advertisement

ಗ್ರಾಪಂ ಅಧ್ಯಕ್ಷ ಶಿವಾನಂದ ಬಿರಾದಾರ ಮಾತನಾಡಿ, ನಿಂಬಾಳ ಕೆ.ಡಿ ಗ್ರಾಮಕ್ಕೆ ಈ ಹಿಂದೆ ಕುಡಿಯುವ ನೀರಿನ ತೊಂದರೆ ಇದ್ದಾಗ ಅತಿ ಹೆಚ್ಚು ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಿದ್ದಾರೆ. ಕಾರಣ ಕೃಷ್ಣಾ ಕಾಲುವೆ ಕೇವಲ 600 ಮೀ. ದೂರದಲ್ಲಿ ನಿಂಬಾಳ ಕೆರೆ ಇದ್ದು ಆ ಕೆರೆ ತುಂಬುವ ಯೋಜನೆ ಮಾಡಲು ವಿನಂತಿಸಿದರು. ಅದಲ್ಲದೆ ಗ್ರಾಮಕ್ಕೆ ಹೈಟೆಕ್‌ ಗ್ರಂಥಾಲಯದ ಅವಶ್ಯಕತೆ ಇದ್ದು ಅದಕ್ಕೆ ಜಾಗ ನೀಡುವ ಅಧಿ ಕಾರ ಗ್ರಾಪಂಗೆ ಇಲ್ಲ ಎಂದಾಗ ಜಿಪಂ
ಸಿಇಒ ರಾಹುಲ್‌ ಶಿಂಧೆಯವರು ಜಿಪಂ ಅನುದಾನದಲ್ಲಿ ಮಾಡಿಕೊಡುವುದಾಗಿ ತಿಳಿಸಿದರು.

ಜಮೀನು ರಸ್ತೆ, ದಾರಿ ಕುರಿತು, ವಾಟನಿ ಅರ್ಜಿ, ಪಿಟಿ ಸಿಟ್‌, ಕೃಷಿ ಹೊಂಡ ಅರ್ಜಿ, ನಿಂಬೆಗಿಡದ ಪುನಶ್ಚೇತನ ಮಾಹಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಬೇಡಿಕೆ, ಲಿಂಗದಳ್ಳಿ ಬಸನಾಳ ರಸ್ತೆ ನಿರ್ಮಾಣ ಕುರಿತು, ಗುರುದೇವ ರಾನಡೆ ಮಹಾರಾಜರ ತಪೋವನಕ್ಕೆ ಹೋಗಲು ದೇಗಿನಾಳ ರಸ್ತೆ ಮಾಡುವ ಕುರಿತು, ಶಿಕ್ಷಕರ ತೊಂದರೆ, ಮತದಾನ ಕೇಂದ್ರ ಮಂಜುರಾತಿ, ಕಿಲಾರಿ ಹಟ್ಟಿಯಲ್ಲಿ ಅಂಗನವಾಡಿ ಕೇಂದ್ರ, ಆಯುಷ್ಮಾನ್‌ ಭಾರತ ಕಾರ್ಡ್‌ ವಿತರಿಸುವ, ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡದೇ ಕಾಲಹರಣ ಮಾಡಲಾತ್ತಿದೆ ಎಂಬ ಕುರಿತು ಅರ್ಜಿಗಳ ಚರ್ಚೆ ನಡೆಸಿದರು.

ಎಸಿ ರಾಮಚಂದ್ರ ಗಡಾದೆ, ತಹಶೀಲ್ದಾರ್‌ ಚಿದಂಬರ ಕುಲಕರ್ಣಿ, ತಾಪಂ ಇಒ ಸುನೀಲ ಮದ್ದಿನ, ಪಂಡಿತ ಕೊಡಹೊನ್ನ, ಬಿ.ಎ. ರಾವೂರ, ರಾಜಕುಮಾರ ತೊರವಿ, ದಯಾನಂದ ಮಠ, ಆರ್‌.ಟಿ. ಹಿರೇಮಠ, ಎಸ್‌.ಎ. ಇನಾಮದಾರ, ಅರ್ಜನ ಕುಲಕರ್ಣಿ, ಸುಭಾಷ್‌ ರುದ್ರವಾಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next