ಅಕ್ಕಿಆಲೂರು: ಯುಗಾದಿ ಪ್ರಯುಕ್ತ ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾಸಂಘ ಮತ್ತು ಪೇಟೆ ಓಣಿ ಗಜಾನನೋತ್ಸವ ಸಮಿತಿ ವತಿಯಿಂದ ಸಮೀಪದ ಹಾವಣಗಿ ಗ್ರಾಮದಲ್ಲಿ ಏರ್ಪಡಿಸಿದ್ದ ಹರಟೆ ಸಾರ್ವಜನಿಕರಿಗೆ ಅರ್ಥಪೂರ್ಣ ಮಾತಿನ ಮಂಥನ ಅರ್ಪಿಸಿತು.
ಸಮೀಪದ ಹಾವಣಗಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ “ಸುಂದರ ಜೀವನ ಹಳ್ಳಿಯದೋ?, ಪ್ಯಾಟಿಯದೋ?’ ಎಂಬ ವಿಷಯ ಕುರಿತಾದ ಹರಟೆಯಲ್ಲಿ ಚಿಂತಕರಿಂದ ಮೌಲ್ಯಯುತವಾದ ವಾದ ಪ್ರತಿವಾದಗಳ ಮಂಡನೆಯಾಯಿತು. ಹಳ್ಳಿಯ ಜೀವನವೇ ಸುಂದರ ಎಂದು ವಾದ ಮಂಡಿಸಿದ ಉದ್ಯಮಿ ಷಣ್ಮುಖಪ್ಪ ಮುಚ್ಚಂಡಿ, ಪ್ರಗತಿಪರ ಕೃಷಿಕ ಬಸವರಾಜ ಸಾಲಿಮಠ ಮತ್ತು ಮಹಾದೇವಿ ಕಣವಿ, ಮನುಷ್ಯನಲ್ಲಿ ಮಾನವೀಯತೆ ಮತ್ತು ನೈತಿಕ ಶಿಕ್ಷಣ ದೊರೆಯುವುದು ನಮ್ಮ ಹಳ್ಳಿಯ ಜೀವನದಿಂದ. ಭಾರತದ ಸಂಸ್ಕೃತಿಯ ಪ್ರತೀಕವಾಗಿರುವ ಹಳ್ಳಿಗಳಲ್ಲಿ ಕೇಳಿ ಬರುವ ನಮ್ಮವರು ಎಂಬ ಮಾತುಗಳು, ಆತ್ಮೀಯತೆಯ ಭಾವನೆ ಪ್ಯಾಟಿಯಲ್ಲಿ ದೊರೆಯಲು ಸಾಧ್ಯವಿಲ್ಲ.
ಇಂದು ದೇಶದ ಅರ್ಥ ವ್ಯವಸ್ಥೆ ನಿಂತಿರುವುದು ಗ್ರಾಮೀಣ ಪ್ರದೇಶದ ಜನರ ಮೇಲೆ, ಹಳ್ಳಿಗಳಿಂದ ಬೆಳೆದ ಉತ್ಪನ್ನಗಳು ಇಂದು ಪ್ಯಾಟಿಗೆ ಹೋಗದಿದ್ದರೆ, ಧಾರವಾಡ ಪೇಡಾ, ಬೆಳಗಾವಿಯ ಕುಂದಾ, ಮೈಸೂರಿನ ಮೈಸೂರು ಪಾಕ್ ಎಲ್ಲಿಂದ ಬರುತ್ತಿತ್ತು? ಹಳ್ಳಿಗರ ಸುಂದರ ಬದುಕು ಯಾರಿಗೂ ಕೆಟ್ಟದ್ದನ್ನು ಬಯಸದ ಮನಸ್ಥಿತಿ ನಿರ್ಮಿಸುತ್ತದೆ ಎಂದು ಹೇಳಿದರು.
ಪ್ಯಾಟಿಯ ಜೀವನವೇ ಸುಂದರ ಎಂದು ಶಿಕ್ಷಕರಾದ ನಾಗರಾಜ ನಡುವಿನಮಠ, ಸದ್ಗುರು ಭಟ್ ಮತ್ತು ಅಂಚೆ ಇಲಾಖೆಯ ದೀಪಾ ಗೋನಾಳ ಮಾತನಾಡಿ, ಹಳ್ಳಿಯಲ್ಲಿ ಏನೇ ಬೆಳೆದರೂ ಅದಕ್ಕೆ ಬೆಲೆ ಮತ್ತು ಸಾರ್ವಜನಿಕರಿಗೆ ತಲುಪಬೇಕು ಎಂದರೆ ಅದು ಪ್ಯಾಟಿಯಿಂದ ಮಾತ್ರ ಸಾಧ್ಯ. ಇಂದು ಹಳ್ಳಿಗಳಲ್ಲಿ ಜಾತಿ, ಪಕ್ಷ, ಭೇದಗಳು ರಾರಾಜಿಸುತ್ತಿದೆ. ಹಳ್ಳಿಗಳಲ್ಲಿ ಕಲಿತ ಯುವಕ-ಯುವತಿಯರು ಪ್ಯಾಟಿಯತ್ತ ಸಾಗಿ ಸುಂದರ ಬದುಕು ರೂಪಿಸುಕೊಳ್ಳುತ್ತಿದ್ದಾರೆ.
ಮುದುಡುತ್ತಿದ್ದ ಎಷ್ಟೋ ಹಳ್ಳಿಯ ಪ್ರತಿಭೆಗಳಿಗೆ ನಗರದಲ್ಲಿ ಸುವರ್ಣ ವೇದಿಕೆ ಸಿಗುತ್ತಿದೆ. ಹಳ್ಳಿಗಳ ನೈರ್ಮಲ್ಯ ದೇಶದ ಸ್ವತ್ಛತೆ ಬಹುದೊಡ್ಡ ಸಮಸ್ಯೆಯಾಗಿದೆ. ಯಾವ ಗ್ರಾಮೀಣ ಪ್ರದೇಶದ ರೈತ, ಜನಸಾಮಾನ್ಯ ತನ್ನ ಮಗ ಹಳ್ಳಿಗಳಲ್ಲಿ
ಜೀವನ ಮಾಡಬೇಕು ಎಂದು ಬಯಸುತ್ತಾನೆ ಹೇಳಿ? ಎಂದು ಪ್ರತಿವಾದ ಮಂಡಿಸಿದರು.
ಮಾತಿನ ಮಂಥದನದಲ್ಲಿ ಎರಡೂ ಕಡೆಯಿಂದ ಬರುತ್ತಿದ್ದ ವಾದ-ಪ್ರತಿವಾದಗಳನ್ನು ತಮ್ಮ ಸಾಹಿತ್ಯ ಭರಿತ ಮಾತಿನಿಂದಲೆ ಸಮನ್ವಯಗೊಳಿಸುತ್ತಿದ್ದ ಸಾಹಿತಿ ಪ್ರಸನ್ನಕುಮಾರ ಎಂ. ಅವರ ಮಾತು ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿತು.
ದೇಶದ ಒಟ್ಟಾರೆ ಪ್ರಗತಿಗೆ ಹಳ್ಳಿ ಮತ್ತು ಪ್ಯಾಟಿಯ ಬದುಕು ಎರಡು ಸುಂದರ ಎಂಬ ತೀರ್ಮಾನಕ್ಕೆ ಬರಲಾಯಿತು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ವಿಶ್ವದಾಖಲೆ ಪುರಸ್ಕೃತ ಪೊಲೀಸ್ ಪೇದೆ ಕರಬಸಪ್ಪ ಗೊಂದಿ ಉದ್ಘಾಟಿಸಿದರು. ಶ್ರೀ ದುಂಡಿ ಬಸವೇಶ್ವರ ಜನಪದ ಕಲಾಸಂಘದ ಅಧ್ಯಕ್ಷ ಬಸವರಾಜ ಕೋರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ನಾಗಪ್ಪ ಜವಳಿ, ಸುರೇಶಗೌಡ ಪಾಟೀಲ ಉಪಸ್ಥಿತರಿದ್ದರು.
ಸಾರ್ವಜನಿಕರು ವಿವಾದವಾಗಿ ಕಾಣುವ ವಿಷಯಗಳ ಕುರಿತು, ಚರ್ಚೆಗಳನ್ನು ಏರ್ಪಡಿಸಿ ಆರೋಗ್ಯಕರ ಸಮಾಜಕ್ಕೆ ನಾಂದಿ ಹಾಡುತ್ತಿರುವ ಅಕ್ಕಿಆಲೂರಿನ ಶ್ರೀ ದುಂಡಿಬಸವೇಶ್ವರ ಜನಪದ ಕಲಾಸಂಘದ ಕಾರ್ಯ ಶ್ಲಾಘನೀಯ. ಭಾರತೀಯ ಸನಾತನ ಸಂಸ್ಕೃತಿ ಹಳ್ಳಿಯ ಶ್ರೇಷ್ಠತೆಯಾದರೆ, ವಿಜ್ಞಾನ ತಂತ್ರಜ್ಞಾನದಿಂದ ಭಾರತದ ಪ್ರಗತಿಗೆ ಮುನ್ನುಡಿ ಬರೆಯುತ್ತಿರುವ ಪ್ಯಾಟಿಯ ಬದುಕು ಸುಂದರವಾಗಿದೆ. ಆದರೆ, ನಮ್ಮತನ ಮಾತ್ರ ಎಲ್ಲಿಯೂ ಬಿಟ್ಟು ಕೊಡಬಾರದು. ಶಿವಬಸವ ಶ್ರೀಗಳು, ವಿರಕ್ತಮಠ ಆಕ್ಕಿಆಲೂರ