Advertisement

ಮದ್ಯಪಾನ ದೂರ ತಳ್ಳಿ, ಹಳಿ ಸೇರಿದ ಮೊರಬದ ಹಳ್ಳಿ

02:08 PM Nov 16, 2017 | |

ಮದ್ಯ ಬಿಟ್ಟು ಎಚ್ಚರ ಬದುಕನ್ನು ಅಪ್ಪಿಕೊಂಡ ಬಳಿಕ ಕೋಪಿಸಿ ತವರು ಮನೆ ಸೇರಿದ ಹೆಂಡತಿ ಗಂಡನ ಮನೆಗೆ ಬಂದಿದ್ದಾಳೆ. ಮೊದಲು ಗಂಡನನ್ನು ಊಟಕ್ಕೆ ಕಾಯುತ್ತಿರಲಿಲ್ಲ. ಈಗ ಕಾದುಕುಳಿತು ಜತೆಯಲ್ಲಿ ಉಣ್ಣುತ್ತಿದ್ದಾರೆ. ಊರಿನ ಜಾತ್ರೆಯಲ್ಲಿ ಒಟ್ಟಾಗಿ ದುಡಿಯುತ್ತಾರೆ. ಪರವೂರಿನಿಂದ ಬಂದ ಭಕ್ತರಿಗೆ ಆತಿಥ್ಯ ಒದಗಿಸುತ್ತಿದ್ದಾರೆ. ಮನೆಯಲ್ಲಿ, ಸಮಾಜದಲ್ಲಿ ಮರ್ಯಾದೆ ಸಿಗುತ್ತಿದೆ. 

Advertisement

“”ನಾನು ಹುಟ್ಟಿದ ಹಳ್ಳಿಯ ಮನೆಯಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ದೊಡ್ಡದು. ಮಹಿಳೆಯರೂ ಮದ್ಯ ಸೇವನೆ ಮಾಡುವುದನ್ನು ನೋಡಿ ಬೇಸತ್ತು ಯುವಕರ ತಂಡ ಕಟ್ಟಿಕೊಂಡೆ. ಕುಡಿತದ ವಿರುದ್ಧ ಹೋರಾಟ ಮಾಡಿದೆ. ಕುಡಿಯುವವರಿಗೆ ಎಚ್ಚರಿಕೆ ನೀಡಿದೆವು. ಹಳ್ಳಿಯಲ್ಲಿರುವ ಕುಡಿತದ ವ್ಯಸನವಿದ್ದ ಹಿರಿಯರು ಮೃತಪಟ್ಟ ಬಳಿಕ ಇನ್ನು ಕುಡಿತದ ಸಮಸ್ಯೆ ಇಲ್ಲ ಎಂದು ನಿಟ್ಟುಸಿರು ಬಿಟ್ಟರೆ, ಅವರಿಗಿಂತ ದೊಡ್ಡ ಕುಡುಕರನ್ನು ನೋಡುವ ಸ್ಥಿತಿ ಎದುರಾಯಿತು! ಮನೆಯಲ್ಲಿ ಸಾಕಷ್ಟು ಮಂದಿ ಕುಡಿಯುತ್ತಿದ್ದರೂ ನಾನು ಮಾತ್ರ ಯಾವತ್ತೂ ಚಟ ಅಂಟಿಸಿ ಕೊಳ್ಳಲಿಲ್ಲ. ಕುಡಿತಕ್ಕೆ ಬಲಿಯಾಗುತ್ತಿದ್ದರೆ ಹಳ್ಳಿಯಲ್ಲಿ ಕಸ ಹೊಡೆದು ಜೀವನ ಮಾಡಬೇಕಿತ್ತೇನೋ. ಕುಡಿತ ವ್ಯಸನದಿಂದ ದೂರ ಇರುವುದರಿಂದ ಇಂದು ಸಚಿವನಾಗಿದ್ದೇನೆ” ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮದ್ಯವರ್ಜನ ಶಿಬಿರವೊಂದರಲ್ಲಿ ಸಾಂದರ್ಭಿಕವಾಗಿ ಹೇಳಿದ ಸ್ವಗತ. 

ಕುಡಿತ ಒಂದು ವ್ಯಸನ. ಒಮ್ಮೆ ಅಂಟಿದರೆ ಬದುಕಿಗದು ಬಿಡಿಸಲಾಗದ ಅಂಟು. ಕುಡಿತದ ದಾಸ್ಯಕ್ಕೆ ಒಳಗಾದ ವ್ಯಕ್ತಿಯ ಕುಟುಂಬವು ಮೂರಾಬಟ್ಟೆಯಾದ ಉದಾಹರಣೆಗಳು ನೂರಾರು ಅಲ್ಲ, ಸಾವಿರಾರು. “”ಇಡೀ ಪ್ರಪಂಚದ ಮದ್ಯದ ಉತ್ಪಾದನೆಯಲ್ಲಿ ಐದನೇ ಒಂದು ಭಾಗ ಭಾರತದಲ್ಲಿ ಬಳಕೆಯಾಗುತ್ತಿದೆ. ಪ್ರತೀ ಐದು ವರುಷಕ್ಕೊಮ್ಮೆ ಕುಡಿಯುವವರ ಸಂಖ್ಯೆ ಹನ್ನೆರಡುವರೆ ಶೇಕಡಾದಷ್ಟು ಏರುತ್ತದೆ” ಎನ್ನುವ ಅಂಕಿಅಂಶವು ಮದ್ಯದ ಬಳಕೆಯ ಗಾಢತೆಯನ್ನು ತೋರಿಸುತ್ತದೆ. ಒಂದೆಡೆ ಸರಕಾರವು ಮದ್ಯ ವ್ಯಾಪಾರಕ್ಕೆ ರತ್ನಗಂಬಳಿ ಹಾಸಿದರೆ, “”ಮತ್ತೂಂದೆಡೆ ಕುಡಿಯ ಬೇಡಿ, ಆರೋಗ್ಯ ಹಾಳಾಗುತ್ತದೆ” ಎನ್ನುತ್ತದೆ!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವ್ಯಸನ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಕಾಲುಶತಮಾನ ಮೀರಿತು. ಕನ್ನಾಡಿನಾದ್ಯಂತ ಸಾವಿರಕ್ಕೂ ಮಿಕ್ಕಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಲಕ್ಷಕ್ಕೂ ಮಿಕ್ಕಿ ಮಂದಿ ಮದ್ಯ ವ್ಯಸನದಿಂದ ದೂರವಾಗಿದ್ದಾರೆ, ದೂರವಾಗುತ್ತಿದ್ದಾರೆ. ಬದುಕಿನಲ್ಲಿ ನಿಜಾರ್ಥದ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಹಳಿ ತಪ್ಪಿದ ಹಳ್ಳಿಯೀಗ ಹಳಿ ಸೇರುತ್ತಿದೆ. ಯಾವುದೇ ಆಮಿಷ‌ಗಳಿಲ್ಲದೆ ಸ್ವ-ನಿರ್ಧಾರದ ಬದ್ಧತೆಗೆ ಒಳಗಾದ ಮಂದಿ ಕುಡಿತವನ್ನು ಬಿಟ್ಟಿದ್ದಾರೆ, ಕುಡಿಯುವವರಿಗೆ ಮನಃಪರಿವರ್ತನೆಗೆ ಮುಂದಾಗುತ್ತಿದ್ದಾರೆ. 

ಈಚೆಗೆ ಧಾರವಾಡ ಜಿಲ್ಲೆಯ ನವಲಗುಂದದ ಮೊರಬ ಹಳ್ಳಿಗೆ ಹೋಗಿದ್ದೆ. ಏನಿಲ್ಲವೆಂದರೂ ನೂರು ಮಂದಿ ಸಭಾಭವನ ತುಂಬಿದ್ದರು. ಯೋಜನೆಯ ವರಿಷ್ಠರು ಬರುತ್ತಾರೆ ಎನ್ನುವ ಕಾರಣಕ್ಕೆ ಇಷ್ಟು ಮಂದಿ ಸೇರಿರಲಾರರು ಅನ್ನಿಸಿತು. ಇವರೆಲ್ಲ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಹೊಸ ಬದುಕಿನತ್ತ ಹೊರಳಿದವರು. ಮಡುಗಟ್ಟಿದ ಮೌನಕ್ಕೆ ಮಾತು ಕೊಡುವ ಮತ್ತು ಬದಲಾದ ಬದುಕನ್ನು ತೋರಿಸುವ ಧಾವಂತ ಎಲ್ಲರಲ್ಲಿತ್ತು. ಶುಭ್ರವಸ್ತ್ರ, ಹಣೆಯಲ್ಲಿ ಸಿಂಧೂರ ತಿಲಕ, ಕುಳಿತುಕೊಳ್ಳುವಾಗಲೂ ಶಿಸ್ತಿನ ವಿನ್ಯಾಸ, ಸಭೆ ನಡೆಯುವಾಗಲೂ ಕಿವಿ ತೆರೆದಿಟ್ಟಿದ್ದರು. “”ಮೊದಲೆಲ್ಲ ಕುಡುಕರ ದೆಸೆಯಿಂದ ಹೀಗೆ ಸಭೆ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ” ಎಂದು ಪಿಸುಗುಟ್ಟಿದರು ಯೋಜನೆಯ ಅಧಿಕಾರಿ ಸತೀಶ್‌ ಎಚ್‌. 

Advertisement

ಹಳ್ಳಿಯ ಬಹುತೇಕ ಗಂಡಸರು ಬದಲಾಗಿದ್ದಾರೆ. ಕುಡಿತದಿಂದ ದೂರವಾಗಿದ್ದಾರೆ ಎನ್ನುವುದೇ ಗ್ರಾಮ ಭಾರತ ಬದಲಾಗುತ್ತಿ ರುವುದಕ್ಕೆ ನಿದರ್ಶನ. “”ನಮ್ಮೂರಲ್ಲಿ ಒಂದೇ ಮದ್ಯದಂಗಡಿ. ದಿನಕ್ಕೆ ಒಂದು ಲಕ್ಷ ರೂಪಾಯಿಗೂ ಮಿಕ್ಕಿ ವ್ಯಾಪಾರವಾಗುತ್ತಿತ್ತು. ಈಗದು ಇಪ್ಪತ್ತೈದು ಸಾವಿರಕ್ಕೆ ಇಳಿದಿದೆ” ಎನ್ನುವ ಅಂಕಿಅಂಶ ಮುಂದಿಟ್ಟರು ಕಸ್ತೂರಿ ಅಮ್ಮ. ಇವರು ಪೆಟ್ರೋಲ್‌ ಬಂಕಿನ ಯಜಮಾನರು. “”ನಮ್ಮೂರಲ್ಲಿ ದ್ವಿಚಕ್ರ ವಾಹನ ಹೊಂದಿದವರಿದ್ದಾರೆ. ದುಡಿದ ನೂರು ರೂಪಾಯಿಯಲ್ಲಿ ಇಪ್ಪತ್ತು ರೂಪಾಯಿ ಪೆಟ್ರೋಲು ಹಾಕಿ, ಮಿಕ್ಕುಳಿದ ಎಂಬತ್ತು ರೂಪಾಯಿ ಮದ್ಯದಂಗಡಿಗೆ ಸುರಿಯುತ್ತಿ ದ್ದರು. ಈಗ ಬೈಕ್‌, ಸ್ಕೂಟರಿಗೆ ಪೂರ್ತಿ ನೂರು ರೂಪಾಯಿ ಪೆಟ್ರೋಲು ಉಣಿಸುತ್ತಾರೆ” ವಿನೋದಕ್ಕೆ ಹೇಳಿದರು.

ಮದ್ಯ ವ್ಯಸನದಿಂದ ಹೊರಬರುವ ಮನಃಸ್ಥಿತಿ ಬದಲಾದುದು ಹೇಗೆ? ಸತೀಶ್‌ ವಿವರಿಸುತ್ತಾರೆ: ಕಳೆದ ವರುಷ ಧಾರವಾಡದ ಕೆಲಗೇರಿಯ ಮದ್ಯವರ್ಜನ ಶಿಬಿರಕ್ಕೆ ಮೊರಬ ಗ್ರಾಮದ ಮಡಿ ವಾಳಪ್ಪಾ ಶಂಕ್ರೆಪ್ಪ ಮಂಟೂರು ಭಾಗವಹಿಸಿ ಮದ್ಯಮುಕ್ತರಾದರು. ಬಳಿಕ ಮಣಕವಾಡದ ಶಿಬಿರಕ್ಕೆ ತನ್ನೂರಿನ ಹದಿನಾರು ಮಂದಿ ಮದ್ಯ ವ್ಯಸನಿಗಳನ್ನು ಸೇರ್ಪಡೆಗೊಳಿಸಿದರು. ಮದ್ಯ ಮುಕ್ತರಾದ ಇವರೆಲ್ಲರ ನೇತೃತ್ವದಲ್ಲಿ ಮೊರಬದಲ್ಲಿ ಶಿಬಿರ ಜರುಗಿತು. ಹಳ್ಳಿಯ ನೂರ ಎಪ್ಪತ್ತೆಂಟು ಶಿಬಿರಾರ್ಥಿಗಳು ಭಾಗ ವಹಿಸಿದ್ದರು. ಪರಿಣಾಮ, ಊರಿಗೆ ಊರೇ ಮದ್ಯಮುಕ್ತತೆಯತ್ತ ಹೆಜ್ಜೆ ಊರಿತ್ತು. ಶ್ರೀಮಂತ ಮದ್ಯ ವ್ಯಸನಿಗಳಿಗಾಗಿಯೇ ಇರುವ ವಿಐಪಿ ಶಿಬಿರದಲ್ಲಿ ಉಳ್ಳವರೂ ಭಾಗವಹಿಸಿ ಮದ್ಯದಿಂದ ದೂರ ವಾಗುವ ಮನಃಸ್ಥಿತಿ ರೂಪಿಸಿಕೊಂಡರು.  

ಸತೀಶ್‌ ಮೊರಬ ಗ್ರಾಮದ ಬದಲಾವಣೆಯನ್ನು ಹೇಳುವುದರ ಜತೆಗೆ ಅಲ್ಲಿನ ಪೂರ್ವಸ್ಥಿತಿಯತ್ತಲೂ ಬೆಳಕು ಹಾಕಿದರು ಕುಡಿತದ ದಾಸ್ಯಕ್ಕೆ ಒಳಗಾಗಿ ಉದ್ಯೋಗವನ್ನು ಕಳಕೊಂಡವರೆಷ್ಟೋ ಮಂದಿ. ಹತ್ತಾರು ದಂಪತಿಗಳ ಮನಸ್ಸು ಚೂರಾಗಿದೆ. ಕುಡುಕ ಗಂಡನ ಉಪಟಳ, ಹಿಂಸೆ ತಾಳಲಾರದೆ ತವರು ಮನೆಯನ್ನು ಸೇರಿದ ಹೆಣ್ಣುಮಕ್ಕಳ ಸಂಖ್ಯೆಯೂ ದೊಡ್ಡದಿದೆ. ಊರಿನಲ್ಲಿ ಯಾವುದೇ ಸಭೆ ಮಾಡುವಂತಿಲ್ಲ. ಜಾತ್ರೆಯಲ್ಲೂ ಕುಡುಕರ ಬಾಧೆ. ರಸ್ತೆಯಲ್ಲಿ ಹೆಣ್ಮಕ್ಕಳು ನಡೆದುಕೊಂಡು ಹೋಗುವಂತಿಲ್ಲ. ಧರಿಸುವ ವಸ್ತ್ರವೂ ಅಸ್ತವ್ಯಸ್ತ. ಕುಡಿಯುವುದು ಮಾತ್ರವಲ್ಲ, ಇತರರಿಗೂ ಕುಡಿಸುವ ಧಾರಾಳತನ! ಇದರಿಂದ ಮದ್ಯದಂಗಡಿಯ ತಿಜೋರಿ ಭದ್ರವಾ ಗುತ್ತಿತ್ತು! ಈಗ ಬಾರ್‌ ಯಜಮಾನರಿಗೆ ತಲೆಬಿಸಿ!

ಈಗ ಚಿತ್ರವೇ ಬದಲಾಗಿದೆ. ಮದ್ಯ ಬಿಟ್ಟು ಎಚ್ಚರ ಬದುಕನ್ನು ಅಪ್ಪಿಕೊಂಡ ಬಳಿಕ ಕೋಪಿಸಿ ತವರು ಮನೆ ಸೇರಿದ ಹೆಂಡತಿ ಗಂಡನ ಮನೆಗೆ ಬಂದಿದ್ದಾಳೆ. ಮೊದಲು ಗಂಡನನ್ನು ಊಟಕ್ಕೆ ಕಾಯುತ್ತಿರಲಿಲ್ಲ. ಈಗ ಕಾದುಕುಳಿತು ಜತೆಯಲ್ಲಿ ಉಣ್ಣು ತ್ತಿ ದ್ದಾರೆ. ಊರಿನ ಜಾತ್ರೆಯಲ್ಲಿ ಒಟ್ಟಾಗಿ ದುಡಿಯುತ್ತಾರೆ. ಪರವೂರಿ ನಿಂದ ಬಂದ ಭಕ್ತರಿಗೆ ಆತಿಥ್ಯ ಒದಗಿಸುತ್ತಿದ್ದಾರೆ. ಮನೆಯಲ್ಲಿ, ಸಮಾಜ ದಲ್ಲಿ ಮರ್ಯಾದೆ ಸಿಗುತ್ತಿದೆ. ಒಬ್ಬ ಬದಲಾದಾಗ ಅವನನ್ನು ನೋಡಿ ಇತರರೂ ಬದಲಾವಣೆಯ ಹೆಜ್ಜೆ ಇಡುತ್ತಿದ್ದಾರೆ. “”ಗ್ರಾಮಾ ಭಿವೃದ್ಧಿ ಯೋಜನೆಯ ಬದುಕಿನ ವಿಕಾಸದ ಶಿಬಿರಗಳಿಂದ ಹೆಣ್ಮಕ್ಕಳ ಬದುಕು ಭಯ ರಹಿತವಾಗಿದೆ. ಮೊದಲು ಗಂಡಸರಲ್ಲಿ ಮೃಗದ ರೀತಿಯ ವರ್ತನೆಯಿತ್ತು. ಮಕ್ಕಳಿಗೆ ತಂದೆ ಮನೆಗೆ ಯಾಕಾಗಿ ಬರ್ತಾನೋ ಎನ್ನುವ ಭಾವ ಇತ್ತು. ಈಗ ಬದಲಾಗಿದೆ” ಎನ್ನುತ್ತಾರೆ ಸ್ಥಳೀಯ ಪಂಚಾಯತ್‌ ಸದಸ್ಯ ಬಸವಂತ್‌. 

ಮೊರಬದಲ್ಲಿ ಯೋಜನೆಯ ನಿರ್ದೇಶನದಲ್ಲಿ ಮದ್ಯಮುಕ್ತರ ಸಮಿತಿ ರಚನೆಯಾಗಿದೆ. ವಾರಕ್ಕೊಮ್ಮೆ ಒಬ್ಬರ ಮನೆಯಲ್ಲಿ ಭಜನೆ, ಪೂಜೆ. ಅದರಲ್ಲಿ ಎಲ್ಲರೂ ಭಾಗವಹಿಸಬೇಕೆನ್ನುವುದು ಶರತ್ತು. ಹೀಗೆ ಎಲ್ಲರೂ ಒಟ್ಟು ಸೇರಿದಾಗ ಪರಸ್ಪರ ಮಾತುಕತೆ. ಕಷ್ಟ- ಸುಖಗಳ ವಿನಿಮಯ. ಸ್ವ-ಸಹಾಯ ಅನುಷ್ಠಾನ. ಹಬ್ಬದ ವಾತಾವರಣ. ಇವರೆಲ್ಲ ಹಳ್ಳಿಯ ಶಕ್ತಿ. ಮಾನವೀಯ ಸಂಬಂಧಗಳ, ಕೌಟುಂಬಿಕ ಬಂಧಗಳ ಅರಿವು ಮೂಡುತ್ತಿದೆ. “”ಈಗ ಎಲ್ಲರ ಡ್ರೆಸ್‌ ಕೋಡ್‌ ಬದಲಾಗಿದೆ. ಗಳಿಕೆಯ ದುಡ್ಡೆಲ್ಲ ಸದುಪಯೋಗವಾಗು ತ್ತಿದೆ” ಎಂಬ ಖುಷಿಯನ್ನು ರಮೇಶ್‌ ಶಾಲ್ವಾಡಿ ಹಂಚಿಕೊಳ್ಳುತ್ತಾ ಮುಖ್ಯ ವಿಚಾರದತ್ತ ಗಮನ ಸೆಳೆದರು, “”ಇಷ್ಟೆಲ್ಲ ಬದಲಾವಣೆ ಹಿಂದೆ ರಾಜಕೀಯ ಪ್ರವೇಶ ಮಾಡಲಿಲ್ಲ. ಸಾರ್ವಜನಿಕರ ವಿರೋಧವಿಲ್ಲ. ಗುಂಪುಗಾರಿಕೆ ಇರಲಿಲ್ಲ. ಗಲಾಟೆಯಿಲ್ಲ.”  

ಸಚಿವ ಆಂಜನೇಯರ ಸ್ವಗತದ ಹಿನ್ನೆಲೆಯಲ್ಲಿ ಅವರ ಮದ್ಯ ಮುಕ್ತ ಬದ್ಧತೆಯ ಬದುಕಿನ ನೋಟವಿದೆ. ಮೊರಬ ಹಳ್ಳಿಯಲ್ಲೂ ಬದ್ಧತೆಯ ಬದುಕಿನತ್ತ ಗ್ರಾಮಾಭಿವೃದ್ಧಿ ಯೋಜ ನೆಯು ಕೈ ತೋರಿದೆ. ಹಳ್ಳಿಗೆ ಮಾರ್ಗದರ್ಶಕನಾಗಿ ಮುನ್ನಡೆಸಿದೆ. ಹಿರಿಯ ರನ್ನು ನೋಡುತ್ತಾ ಮನೆಯ ಮಗು ಬೆಳೆಯುತ್ತದೆ, ಬದುಕನ್ನು ಕಟ್ಟಿಕೊಳ್ಳುತ್ತದೆ. ಮನೆಯ ಯಜಮಾನ ಕುಡುಕ ನಾದರೆ, ಅವನನ್ನು ನೋಡಿ ಬೆಳೆಯುವ ಇತರ ಸದಸ್ಯರ ಪಾಡೂ ಅದೇ. ಹಾಗಾಗಿ ಹಿರಿಯರು ಬದಲಾವಣೆಯನ್ನು ಅನುಷ್ಠಾನಿಸಿ ದಾಗ ಕಿರಿಯರೂ ಅದೇ ಹಾದಿ ತುಳಿಯುತ್ತಾರೆ. ಗ್ರಾಮಾಭಿವೃದ್ಧಿ ಯೋಜ ನೆಯು ಕಾರ್ಯಹೂರಣದಲ್ಲಿ ಮದ್ಯಮುಕ್ತರ ಯಶೋ ಗಾಥೆಗಳು ನೂರಾರಿವೆ. ಈ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಹೇಳಿದ ಮಾತು ನೆನಪಾಗುತ್ತದೆ, “”ಮದ್ಯಪಾನ ನಿಷೇಧ ಮಾಡದೇ ಹೋದರೆ ಸಮಾಜದ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲ.” 

ಕೋಟಿಗಟ್ಟಲೆ ರೂಪಾಯಿ ಆದಾಯ ತರುವ ಮದ್ಯದ ವ್ಯವಹಾರವು, ಅದಕ್ಕಿಂತ ಮೂರೋ ನಾಲ್ಕೋ ಪಟ್ಟು ಅಧಿಕ ಆರೋಗ್ಯ ಹಾನಿ ಮಾಡುತ್ತಿದೆ. ಸರಕಾರಗಳು ಕೋಟಿಯ ಅಂಕೆಗಳ ಮೇಲಿನ ಮೋಹವು ಮದ್ಯದಂಗಡಿಗಳಿಗೆ ಪರವಾನಿಗೆಗಳನ್ನು ನೀಡುತ್ತಿವೆ. ಮದ್ಯಪಾನಕ್ಕೆ ಪ್ರೋತ್ಸಾಹ ನೀಡುತ್ತಿವೆ. ಆಗಾಗ್ಗೆ ಕಣ್ಣೊರೆಸುವ ನಿಷೇಧ ಪ್ರಹಸನವೂ ಜತೆಜತೆಗೆ ನಡೆಯುತ್ತಿರುತ್ತದೆ. ಸರಕಾರದ ಆಶ್ರಯದಲ್ಲಿ ಮದ್ಯಪಾನ ಸಂಯಮ ಮಂಡಳಿಯಿದೆ. ಮದ್ಯಪಾನವು ಆರೋಗ್ಯಕ್ಕೆ ಅಪಾಯ ಎಂದು ಪ್ರಚಾರ ಮಾಡುತ್ತಿದೆ. ಈ ಪ್ರಚಾರದ ದನಿಯು ಕೋಟಿಯ ಅಬ್ಬರದ ಮಧ್ಯೆ ಕೇಳಿಸಲಾಗದಷ್ಟು ಕ್ಷೀಣ!

ನಾ. ಕಾರಂತ ಪೆರಾಜೆ

Advertisement

Udayavani is now on Telegram. Click here to join our channel and stay updated with the latest news.

Next