Advertisement

ಬೆಳವಾಡಿಯಲ್ಲಿ ಬೆಳಕು ಕಂಡ ಹಳ್ಳಿಚಿತ್ರ

06:00 AM Apr 06, 2018 | |

ಒಂದು ಕಡೆ ಬಾನೆತ್ತೆಕ್ಕೆ ನಿಂತ ಗಿರಿ… ಇನ್ನೊಂದು ಕಡೆ ಗಿರಿಯ ಪ್ರತಿಫ‌ಲನವನ್ನು ತನ್ನಲ್ಲಿ ತುಂಬಿಕೊಂಡ ಝರಿ, ಕಣ್ಣು ಹಾಯಿಸಿದ ಉದ್ದಕ್ಕೂ ಮರಗಿಡಗಳ ಹಂದರ, ಎಲ್ಲೆಲ್ಲೂ ನಿಸರ್ಗಮಾತೆಯ ಸುಂದರ ಮಂದಿರ. ಬಾನಿನ ನೀಲ ಅಂಬರವೂ ಭುವಿಯ ಹಸಿರು ಬಣ್ಣವೂ ಒಂದಕ್ಕೊಂದು ಆಲಿಂಗನವಾಗಿ ಬಣ್ಣಗಳ ಸಮಾಗಮವಾಗಿ ಪ್ರಕೃತಿಯ ಸಹಜ ಕಲಾಕೃತಿಯೇ ಅಲ್ಲಿ ಪ್ರದರ್ಶನಗೊಂಡಿರುತ್ತದೆ. ಇಂತಹ ಸುಂದರ ದೃಶ್ಯಗಳು ಕಲಾವಿದರ ಕಣ್ಣಿಗೆ ಕಂಡರೆ… ಪ್ರಕೃತಿಯ ಕೃತಿ ಕೃತಿಗಳೂ ಸಿಂಚನಗೊಳ್ಳದೇ ಇದ್ದೀತೇ? ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ನಿಸರ್ಗ ದೃಶ್ಯ ಚಿತ್ರಕಲಾ ಶಿಬಿರವನ್ನು ಕಲಾಶಿಕ್ಷಕ ಸಯ್ಯದ್‌ ಆಸಿಫ್ ಆಲಿಯವರ ಮಾರ್ಗದರ್ಶನದಲ್ಲಿ ಆಯೋಜಿಸಿದ್ದು ಚಿಕ್ಕಮಗಳೂರಿನ ಬೆಳವಾಡಿ ಎಂಬ ಇತಿಹಾಸ ಪ್ರಸಿದ್ಧವಾದ ಪುಟ್ಟ ಹಸಿರು ಹಳ್ಳಿಯಲ್ಲಿ. 

Advertisement

ಮಲೆನಾಡಿನ, ಬಯಲುಸೀಮೆಯ ಹಳ್ಳಿಗಳೆಂದರೆ ಅದು ಕಲಾವಿದರ ಬಣ್ಣಗಳ ಚೌಕಟ್ಟಿಗೆ ಓತ ಪೋತವಾಗಿ, ವಿವಿಧ ಆಯಾಮಗಳೊಂದಿಗೆ ತೆರೆದಿಡಲ್ಪಡುತ್ತದೆ. ಕಾಣುವ ಕಣ್ಣಿಗೆ, ಗ್ರಹಿಸುವ ಮನಸ್ಸಿಗೆ ಮಾತ್ರ ಅರ್ಥವಾಗುವಂತಹ ಅಲ್ಲಿನ ದೃಶ್ಯಗಳು ಕಲಾತ್ಮಕವಾಗಿ, ಕಾವ್ಯಾತ್ಮಕವಾಗಿ ಸ್ಪಂದಿಸಲ್ಪಡುವ ಒಳಗಣ್ಣು-ಒಳಮನಸುಗಳಿಗೆ ಅಂಟಿಕೊಳ್ಳುತ್ತದೆ. ಜಲವರ್ಣವೆಂಬ ಪರಿಕರದ ಕಲಾವಿದರಿಗೆ ಯಾವುದೋ ಕಾಂಕ್ರೀಟು ಭವ್ಯ ಸುಸಜ್ಜಿತ ಮನೆಗಳಿಗಿಂತ ಮಣ್ಣಿನಗೋಡೆ, ಹುಲ್ಲಿನ ಹೊದಿಕೆ ಇರುವ ಪಾಳುಬಿದ್ದ ಮನೆಯೇ ಸುಂದರ ಅಭಿವ್ಯಕ್ತಿಗೆ ವಸ್ತುವಾದೀತು. ಕುರುಚಲು ತೋಟ, ಬಡುಕಲು ಮನೆಯ ನೋಟ, ಹರಟೆ ಹೊಡೆಯುತ್ತಾ ಕಟ್ಟೆಯಲ್ಲಿ ಕುಳಿತ ವೃದ್ದರು… ಪಕ್ಕದಲ್ಲೊಂದು ಎತ್ತಿನಗಾಡಿ… ಇಷ್ಟಿದ್ದರೆ ಸಾಕು ಕಲಾವಿದ ತಟ್ಟನೆ ಬಣ್ಣದ ಕುಂಚಗಳನ್ನೆತ್ತಿ ಸಕ್ರಿಯನಾಗುತ್ತಾನೆ.

ಹಳ್ಳಿಯ ಚಂದ ಮತ್ತು ಆಕರ್ಷಣೆಯೇ ಅಂಥದ್ದು. ಹಳ್ಳಿಗೆ ಹಳ್ಳಿಯೇ ಸಾಟಿ… ಅದೇ ಅದರ ನೈಜ ಬ್ಯೂಟಿ. ಹಳ್ಳಿಯ ಗಲ್ಲಿಯ ಎಡೆಯಲಿ, ನೊರೆಗಳ ಪುಟಿಸುತ ಕುಣಿಕುಣಿದಾಡುತ, ಹರಿಯುವ ನೀರಿನ ಜುಳುಜುಳು ನಾದವೂ… ದೂರದಲ್ಲಿ ಈ ಝರಿ ಹರಿದು ತೊರೆಯಾಗಿ ಕೆರೆಯಾಗಿ, ಕೆರೆಯಲ್ಲಿ ಹಳ್ಳಿಯ ದೃಶ್ಯವು ಸೆರೆಯಾಗಿ ನಿಂತಿರುವ ನೋಟವೂ ಏಕ ಕಾಲಕ್ಕೆ ಮಹಾಲಸಾ ಚಿತ್ರ ಕಲಾಶಾಲೆಯ ಯುವ ಕಲಾವಿದರಿಗೆ ವರ್ಣಾಭಿವ್ಯಕ್ತರೂಪಕ್ಕೆ ಪಥವಾಯಿತು. ಪ್ರತಿಯೊಬ್ಬರ ಕ್ಯಾನ್ವಾಸಿನಲ್ಲೂ ಬೆಳವಾಡಿ ಹಳ್ಳಿಯ ವಿವಿಧ ಆಯಾಮಗಳು… ಬೆಳವಾಡಿಯವರೇ ಈವರೆಗೆ ಕಾಣದ ಸುಂದರ ದೃಶ್ಯಗಳು ವ್ಯಕ್ತವಾದವು. ಈ ಶಿಬಿರಕ್ಕೆ ಇಟ್ಟಂತಹ ಶಿರ್ಷಿಕೆಯೂ ಹಳ್ಳಿಚಿತ್ರವಾಗಿದ್ದು ಹಳ್ಳಿಯ ಎಲ್ಲಾ ನೈಜ ಸೌಂದರ್ಯಗಳು ಇಲ್ಲಿ ಬಣ್ಣಗಳ ತೋರಣವಾದವು. ಮರ, ಗಿಡ, ಹೂ, ಬಳ್ಳಿ, ಗಲ್ಲಿ, ಹಾಡಿ, ಗುಡಿ, ಗುಡಿಸಲುಗಳು ಕಲಾವಿದರ ಮನದಭಿಲಾಷೆಗೆ ಪೂರಕವಾಗಿ ವರ್ಣ ಕುಂಚಕ್ಕೆ ಸೆರೆಯಾದವು. ವಿದ್ಯಾರ್ಥಿಗಳ ನಿಸರ್ಗ ದೃಶ್ಯ ಚಿತ್ರಣದ ಹಂಬಲವೂ, ವಿಶ್ವಕರ್ಮ ಆಚಾರ್ಯ ಮತ್ತು ಸಯ್ಯದ್‌ ಆಸಿಫ್ ಅಲಿಯವರ ಬೆಂಬಲವೂ ಒಂದಕ್ಕೊಂದು ಜೋಡಣೆಗೊಂಡು ಈ ಹಳ್ಳಿಚಿತ್ರಕಲಾ ಶಿಬಿರವು ಯಶಸ್ವಿಗೊಂಡಿತ್ತು. ಮಹಾಲಸಾ ಶಿಕ್ಷಣ ಸಂಸ್ಥೆಯ ಸನತ್‌, ಜೀವನ್‌, ಅವನಿ, ಶ್ರೇರ್ಧನ್ಯ, ಐಶ್ವರ್ಯ, ಜಯಲಕ್ಷ್ಮೀ, ಪ್ರಮೋದ್‌, ಕೌಶಿಕ್‌, ಶ್ರೀಕಾಂತ್‌, ತಾಂಡವೇಶ್ವರ, ರಮೇಶ್‌, ಕಾರ್ತಿಕ್‌, ಪ್ರಶಾಂತ್‌, ಸೌಮ್ಯ, ರಕ್ಷಿತ್‌, ಶಶಿಧರ್‌, ರೋಸಿಲ್‌, ಕಮಿಲ್‌ರಾಝ, ವಿನೋದ್‌, ರೂಪೇಶ್‌, ಇಮ್ರಾನ್‌ ಮುಂತಾದವರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಬಹುತೇಕ ಕಲಾಕೃತಿಗಳಲ್ಲಿ ಆಯಾ ಕಲಾವಿದರು ಅವರ ದೃಷ್ಟಿಕೋನಕ್ಕೆ ತಕ್ಕಂತೆ ಹಳ್ಳಿಯ ದೃಶ್ಯವನ್ನು ಆಯ್ಕೆ ಮಾಡಿರುವ ಕಾರಣ ಪ್ರತಿಯೊಂದು ಕಲಾಕೃತಿಯಲ್ಲಿ ಭಿನ್ನತೆಯಿತ್ತು.

ಇಂತಹ ಪ್ರಕೃತಿ ಶಿಬಿರಗಳನ್ನು ಮಾಡುವುದರೊಂದಿಗೆ ಕಲಾವಿದರ ಕಲಾಚಾಕಚಕ್ಯತೆ, ಪ್ರಬುದ್ಧತೆ ಹೇಗೆ ಬೆಳವಣಿಗೆಯಾಗುತ್ತದೆಯೋ ಅದರ ಜೊತೆಗೆ ನಗರ ಪ್ರದೇಶದ ಕಾಂಕ್ರೀಟು ಕಾಡಿನಲ್ಲಿ ಒತ್ತಡ ಜಂಜಾಟಗಳಿಂದ ಬದುಕು ಸಾಗಿಸುವವರಿಗೆ ಹಳ್ಳಿಯ ಪ್ರಶಾಂತ ವಾತಾವರಣ, ಮಾಲಿನ್ಯಮುಕ್ತ ನೆಮ್ಮದಿ, ಸೌಹಾರ್ದ ಬದುಕು ಅದರ ಜೊತೆಗೆ ಮರಗಿಡ, ಹೂ, ಬಳ್ಳಿ, ಝರಿ ತೊರೆಗಳ ಒಡನಾಟವಾಗಿ ಪ್ರಕೃತಿಯ ಬಗ್ಗೆ ಅಭಿಮಾನ ಕಾಳಜಿ, ಅರಿವು ಮೂಡುವಂತಹ ಬದಲಾವಣೆಯೂ ಆಗುವ ಸಾಧ್ಯತೆ ಇದೆ. ನಗರದ ಒಂದು ಕಡೆ ಕ್ಯಾನ್ವಾಸು ಒಟ್ಟು ದೃಶ್ಯ ಚಿತ್ರ ಮಾಡಲು, ಹೊರಟರೆ ಏನು ಲಭಿಸಬಹುದು! ಹಳ್ಳಿಯ ಒಂದು ಕಡೆ ಕ್ಯಾನ್ವಾಸಿಗೆ ಏನು ದೊರೆಯಬಹುದು ಎಂಬುದಂತೂ ಇಂತಹ ಶಿಬಿರಗಳಿಂದ ಉತ್ತರ ಸಿಗಬಹುದು. ಈ ಹಳ್ಳಿ ಚಿತ್ರ ಶಿಬಿರದ ಕಲಾಕೃತಿಗಳನ್ನು ಮಂಗಳೂರಿನ ಪ್ರಸಾದ್‌ ಆರ್ಟ್‌ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. 
                                       
ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next