ದೋಟಿಹಾಳ: ಇತ್ತ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದರೂ ಹೇಳ್ಳೋರು, ಕೇಳ್ಳೋರು ಯಾರೂ ಇಲ್ಲದಂತಾಗಿದೆ. ಅಭಿವೃದ್ಧಿಗಳ ಹೆಸರಿನಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರ ವೈಯಕ್ತಿಕ ಪ್ರತಿಷ್ಠೆಗಾಗಿ ಗ್ರಾಪಂ ಸಭೆ ರದ್ದಾಗಿವೆ.
ಈ ಹಿನ್ನೆಲೆಯಲ್ಲಿ ಗ್ರಾಮ ಸಮಸ್ಯೆಗಳೇ ಪರಿಹರಿಸಬೇಕಿದ್ದ ಸದಸ್ಯರು ಹಾಗೂ ಅಧಿಕಾರಿಗಳು ಜನರ ಸಮಸ್ಯೆಯತ್ತ ತಿರುಗಿಯೂ ನೋಡುತ್ತಿಲ್ಲ. ಕಳೆದ ಕೆಲ ದಿನಗಳ ಹಿಂದೇ ಸುರಿದ ಮಳೆಯಿಂದ ಗ್ರಾಮದ ರಸ್ತೆಗಳಲ್ಲಿ ಕಸ, ಕಡ್ಡಿ, ನೀರು ನಿಂತು ದುರ್ವಾಸಣೆ ಹರಡಿದೆ.
ಗ್ರಾಮದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಕೊಳಚೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ, ಚಿಕೂನ್ ಗುನ್ಯಾ ಹರಡುವ ಭೀತಿ ಉಂಟಾಗಿದೆ. ಸರ್ಕಾರಿ ಶಾಲೆಯ ಹಿಂಬದಿ, ಶಾಲೆಗೆ ಹೋಗುವ ರಸ್ತೆಯಲ್ಲಿ ಕಸ, ಕಡ್ಡಿ ಹಾಕುತ್ತಿರುವುದರಿಂದ ಶಾಲಾ ಮಕ್ಕಳು, ಬಸ್ ನಿಲ್ದಾಣ ಹಾಗೂ ಬ್ಯಾಂಕ್‌ಗೆ ಹೋಗುವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಹಲವಾರು ಬಾರಿ ಗ್ರಾಪಂ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕಸ ವಿಲೇವಾರಿ ಮಾಡಬೇಕಾಗಿದ್ದ ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ವಾರದಿಂದ ಇಚೇಗೆ ಗ್ರಾಮದಲ್ಲಿ ಕೆಲವರು ಚಿಕೂನ್ ಗುನ್ಯಾ ಜ್ವರದಿಂದ ಬಳಲುತ್ತಿದ್ದಾರೆ. ಸ್ವತ್ಛತೆ ಕೈಗೊಳ್ಳದೇ ಇರುವುದರಿಂದ ರೋಗ ಹರಡುವ ಭೀತಿ ಉಂಟಾಗಿದೆ.
ಇನ್ನಾದರೂ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರೋಗದ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದೇ ವೇಳೆ ಮಾತನಾಡಿದ ಗ್ರಾಪಂ ಸದಸ್ಯ ಕಳಕಪ್ಪ ಗೌಡರ ಅವರು ಸ್ವತ್ಛತೆ ಕುರಿತು ಸಂಪರ್ಕಿಸಿದಾಗ ಪಿಡಿಒ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕೋರಂ ಕೊರತೆಯಿಂದ ನಾಲ್ಕು ಗ್ರಾಪಂ ಸಭೆಗಳು ರದ್ದಾಗಿವೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ಪಿಡಿಒ ವರದಿ ನೀಡಿ ತಿಂಗಳಾದರೂ ಅಧಿ ಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.