ಸವಣೂರು: ದೇಶ ರಕ್ಷಣೆಗೆ ಕಲಿವಾಳ ಗ್ರಾಮದ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸೇನೆ ಸೇರಿಸುವ ಮೂಲಕ ಯೋಧರ ಗ್ರಾಮ ಎಂದು ರಾಷ್ಟ್ರದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಜಿಲ್ಲೆಗಿದೆ. ಈ ಶ್ರೇಯಸ್ಸು ಗ್ರಾಮದ ಯೋಧರ ತಂದೆ, ತಾಯಂದಿರಿಗೆ ಸಲ್ಲುತ್ತದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಹೇಳಿದರು.
ತಾಲೂಕಿನ ಕಲಿವಾಳ ಗ್ರಾಮದ ಶ್ರೀ ಗೋಣಿಬಸವೇಶ್ವರ ರಥೋತ್ಸವ ನಿಮಿತ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಜರುಗಿದ ಮಾಜಿ ಹಾಗೂ ಹಾಲಿ ಸೈನಿಕರ ಸಂಘದ ಉದ್ಘಾಟನೆ ಹಾಗೂ ಗ್ರಾಮದ ಮಾಜಿ ಹಾಗೂ ಹಾಲಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರ ರಕ್ಷಣೆಗಾಗಿ ಕಲಿವಾಳ ಗ್ರಾಮದಿಂದ ನೂರಾರು ಯೋಧರು ಸೇನೆ ಸೇರಿರುವುದು ಶ್ಲಾಘನೀಯ. ಇಂತಹ ಗ್ರಾಮ ಹಾವೇರಿ ಜಿಲ್ಲೆಯಲ್ಲಿರುವುದು ನಮ್ಮೆಲ್ಲರ ಹೆಮ್ಮೆ. ಇಂದಿಗೂ ಗ್ರಾಮದ 35ಕ್ಕೂ ಹೆಚ್ಚು ಯೋಧರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಯೋಧರು ನಿವೃತ್ತಿಯಾಗಿದ್ದಾರೆ. ಈ ಗ್ರಾಮದ ಮಣ್ಣಿನಲ್ಲಿರುವ ರಾಷ್ಟ್ರ ಭಕ್ತಿಯ ಕಂಪು ದೇಶಕ್ಕೆ ಮಾದರಿಯಾಗಿದೆ ಎಂದರು.
ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತೀಯ ಸೇನೆಯ ಲೆಪ್ಟಿನೆಂಟ್ ಕರ್ನಲ್ ಕರಬಸಪ್ಪ ಗುರಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಪಂ ಸದಸ್ಯ ಶಿವರಾಜ ಅಮರಾಪೂರ, ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ಸದಸ್ಯ ಬಸವರಾಜ ಕಳಸದ, ಹಾವೇರಿ ಜಿಲ್ಲೆಯ ಮಾಜಿ ಹಾಗೂ ಹಾಲಿ ಯೋಧರು ಇದ್ದರು.
ನಿವೃತ್ತ ಶಿಕ್ಷಕರಿಗೆ ಹಾಗೂ 2018-19ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಿವಾಳ ಗ್ರಾಮದ ಪಿಯುಸಿ ಹಾಗೂ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೂವಿನಶಿಗ್ಲಿಯ ಡಾ| ಎನ್.ಬಿ.ನಾಗರಹಳ್ಳಿ ಸೇನಾಭಿಮಾನಿಗಳು ಹಾಗೂ ನುರಿತ ವೈದ್ಯರ ತಂಡ ತಪಾಸಣೆ ನಡೆಸಿದರು.
112ಕ್ಕೂ ಅಧಿಕ ಜನ ಶಿಬಿರದ ಸದುಪಯೋಗಪಡೆದುಕೊಂಡರು. ನಂತರ, ಕೊತಬಾಳದ ಜಾನಪದ ನೃತ್ಯ ಕಲಾ ತಂಡದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.