Advertisement

ಗ್ರಾಪಂಗೊಂದು ಮಾದರಿ ಅಂಗನವಾಡಿ-ಶಾಲೆ

06:49 PM Sep 04, 2021 | Team Udayavani |

ಕೊಪ್ಪಳ: ಜಿಲ್ಲಾದ್ಯಂತ ಗ್ರಾಮೀಣ ಭಾಗದ ಶಾಲೆ ಹಾಗೂ ಅಂಗನವಾಡಿಗಳಿಗೆ ಹೈಟೆಕ್‌ ಸ್ಪರ್ಶ ನೀಡಲು ಜಿಪಂ ಹೊಸ ಯೋಜನೆ ರೂಪಿಸಿದ್ದು, ಪ್ರತಿ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ಒಂದು ಅಂಗನವಾಡಿ, ಒಂದು ಶಾಲೆಯನ್ನು ಮಾದರಿಯನ್ನಾಗಿಸಲು ಸಿದ್ಧತೆ ನಡೆಸಿದೆ.

Advertisement

ಅಲ್ಲಿ ಕಾಂಪೌಂಡ್‌, ಶೌಚಾಲಯ, ಕಿಚನ್‌ ಗಾರ್ಡನ್‌, ಮಳೆ ನೀರು ಸಂಗ್ರಹ ಹಾಗೂ ಮಳೆನೀರು ಕೊಯ್ಲು ಸೇರಿ ಅಭಿವೃದ್ಧಿಗೂ ಪ್ಲ್ಯಾನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ನಗರ ಪ್ರದೇಶಗಳಲ್ಲಿ ಶಾಲೆ, ಅಂಗನವಾಡಿ ಕೇಂದ್ರಗಳು ಸ್ವಲ್ಪ ಮಟ್ಟಿಗೆ ಸುಸ್ಥಿತಿಯಲ್ಲಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ಶಾಲೆಗಳು ಕೆಲ ಮೂಲ ಸಮಸ್ಯೆ ಎದುರಿಸುತ್ತಿವೆ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಸರ್ಕಾರದ ವಿವಿಧ ಯೋಜನೆ ಜೊತೆಗೆ
ಕೊಪ್ಪಳ ಜಿಪಂ ನರೇಗಾ ಯೋಜನೆಯಲ್ಲೇ ಪ್ರಸಕ್ತ ವರ್ಷದಲ್ಲಿ ಆಸಕ್ತಿ ವಹಿಸಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳನ್ನು
ಅಭಿವೃದ್ಧಿಪಡಿಸಲು ಪ್ಲ್ಯಾನ್ ಮಾಡಿದೆ.

ಹಿಂದೆ ನರೇಗಾ ಯೋಜನೆ ಸೇರಿ ನಾನಾ ಯೋಜನೆಗಳಲ್ಲಿ ಸರ್ಕಾರಿ ಕಟ್ಟಡಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಆದರೆ ಸರ್ಕಾರಿ ಕಟ್ಟಡಗಳಿಗೆ ಮಾಡುವುದಕ್ಕಿಂತ ಶಾಲೆಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮೊದಲ ಆದ್ಯತೆ ನೀಡಲು ಜಿಪಂ ಮುಂದಾಗಿದ್ದು, ನಿಜಕ್ಕೂ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ:ಕೇಂದ್ರ ಅಧ್ಯಯನ ತಂಡ ಭೇಟಿ : ಮಾರ್ಗಸೂಚಿ ಬದಲಿಸಿ ಹೆಚ್ಚುವರಿ ಅನುದಾನಕ್ಕೆ ಮುಖ್ಯಮಂತ್ರಿ ಮನವಿ

Advertisement

ಮಾದರಿ ಶಾಲೆಗಳಲ್ಲಿ ಏನಿರುತ್ತೆ?: ಶಾಲೆ ಹಾಗೂ ಅಂಗನವಾಡಿಯನ್ನು ನರೇಗಾ ಯೋಜನೆಯಲ್ಲೇ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲು ಯೋಜಿಸಲಾಗಿದೆ. ಶಾಲೆ ಸುತ್ತ ಕಾಂಪೌಂಡ್‌ ನಿರ್ಮಾಣ ಮಾಡುವುದು, ಬಾಲಕ ಹಾಗೂ ಬಾಲಕಿಯರಿಗೆ ಶೌಚಾಲಯ, ಕಿಚನ್‌ ಶೆಡ್‌,  ಪ್ಲೇ ಗ್ರೌಂಡ್‌ ನಿರ್ಮಾಣ, ಮಕ್ಕಳಲ್ಲಿ ಮಳೆ ನೀರು ಸಂಗ್ರಹಣದ ಜಾಗೃತಿಗಾಗಿ ಮಳೆನೀರು ಸಂಗ್ರಹಣ ತೊಟ್ಟಿ ನಿರ್ಮಾಣ, ಮಳೆ ನೀರು ಇಂಗುವಿಕೆಯ ಅರಿವು ಮೂಡಿಸಲು ಮಳೆ ನೀರು ಕೊಯ್ಲು ನಿರ್ಮಾಣ ಹಾಗೂ ಶಾಲಾ ಬಿಸಿಯೂಟಕ್ಕೆ ಬಳಕೆಗಾಗಿ ಶಾಲಾ ಕೈತೋಟ ನಿರ್ಮಾಣ ಮಾಡುವ ಗುರಿ ಇದೆ.

ಎಲ್ಲವನ್ನೂ ನರೇಗಾ ಅನುದಾನದಲ್ಲೇ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಜಿಪಂ ಸಿಇಒ ಫೌಜಿಯಾ ತರನುಮ್‌ ಅವರು ಶಾಲೆ ಹಾಗೂ ಅಂಗನವಾಡಿಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದು, ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಜಿಲ್ಲಾದ್ಯಂತ ಶಾಲಾ ಕೇಂದ್ರ ಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಸಮಸ್ಯೆಗಳನ್ನೂ ಅರಿತಿದ್ದು, ಸರ್ಕಾರದ ಯೋಜನೆ ಜೊತೆ ಜೊತೆಗೂ ನರೇಗಾದಲ್ಲೂ ಶಾಲೆಗಳಲ್ಲಿನ ಸಮಸ್ಯೆ ನಿವಾರಣೆ ಮಾಡಲಾಗುವುದು. ಗ್ರಾಪಂ ಹಂತದಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲೂ ಸೂಚನೆ ನೀಡಿದ್ದಾರೆ.

ಈಗಾಗಲೇ ಕೆಲವೊಂದು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ, ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ. ಅಲ್ಲಿ ಅಗತ್ಯ ಸೌಲಭ್ಯಗಳು ಏನು ಬೇಕಾಗಿವೆ? ಯಾವ ಕೇಂದ್ರಕ್ಕೆ ಸೌಲಭ್ಯ ಬೇಕಾಗಿವೆಯೋ ಅಂತಹ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಪ್ರತಿವರ್ಷ ಬೇರೆ ಬೇರೆ ಕೆಲಸ ಮಾಡುವುದಕ್ಕಿಂತ ಆದ್ಯತೆ ಮೇಲೆ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಹೆಚ್ಚು ಆದ್ಯತೆ ನೀಡಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಡಲು ಜಿಪಂ ಯೋಜನೆ ರೂಪಿಸಿದೆ. ಇದರಿಂದ ಮಕ್ಕಳು ಸಹ ಖಾಸಗಿ ಶಾಲೆ ಭಾವನೆ ಬಿಟ್ಟು ಸರ್ಕಾರಿ ಶಾಲೆಗಳತ್ತ ಮುಖ ಮಾಡಲು ಸಹಕಾರಿಯಾಗಲಿದೆ.

ಗ್ರಾಪಂಗೊಂದು ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿದ್ದು ನಿಜಕ್ಕೂ ಸಂತಸದವಿಚಾರ. ಅಂದುಕೊಂಡಂತೆ ಕಾರ್ಯ ವೇಗವಾಗಿ ನಡೆದರೆ ಮಕ್ಕಳ ಕಲಿಕೆಗೂ ಅನುಕೂಲವಾಗಲಿದೆ ಎನ್ನುವುದು ಪಾಲಕರ
ಅಭಿಮತವಾಗಿದೆ.

ಕೊಪ್ಪಳ ಜಿಪಂನಿಂದ ನರೇಗಾಯೋಜನೆಯಡಿ ಪ್ರಸಕ್ತ ವರ್ಷದಲ್ಲಿ ಆದ್ಯತೆ ಮೇರೆಗೆ ಗ್ರಾಪಂಗೊಂದು ಅಂಗನವಾಡಿ ಕೇಂದ್ರ ಹಾಗೂ ಶಾಲೆಯನ್ನು ಮಾದರಿಯನ್ನಾಗಿ ಮಾಡಲುಯೋಜನೆ ರೂಪಿಸಿದ್ದೇವೆ. ಈಗಾಗಲೇ ಸಮಸ್ಯೆ ಎದುರಿಸುವ ಶಾಲೆ,ಕೇಂದ್ರಗಳ ಪಟ್ಟಿ ಮಾಡಿದ್ದು
ಅಲ್ಲಿ ಕಾಂಪೌಂಡ್‌ ನಿರ್ಮಾಣ,ಕಿಚನ್‌ ಶೆಡ್‌, ಮಳೆ ನೀರುಕೊಯ್ಲು, ಮಳೆ ನೀರು ಸಂರಕ್ಷಣೆಯಕಾರ್ಯವನ್ನೂ ಕೈಗೊಳ್ಳಲಿದ್ದೇವೆ. ಅವುಗಳನ್ನು ನೋಡಿ ಇತರರಿಗೂ ಪ್ರೇರಣೆಯಾಗಲಿದೆ.
-ಫೌಜಿಯಾ ತರನುಮ್‌,ಕೊಪ್ಪಳ ಜಿಪಂ ಸಿಇಒ

-ದತ್ತು ಕಮ್ಮಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next