ಮೈಸೂರು: ಅಲ್ ಖೈದಾ ನಾಯಕ ಮಂಡ್ಯದ ವಿದ್ಯಾರ್ಥಿನಿಗೆ ಬೆಂಬಲ ನೀಡಿತುವ ವೀಡಿಯೋ ವಿಚಾರವನ್ನು ಸರಕಾರ ಗಂಭೀರ ವಾಗಿ ಪರಿಗಣಿಸಿದ್ದು, ಆ ಬಗ್ಗೆ ಪೊಲೀಸರು ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಗುರುವಾರ ಹೇಳಿಕೆ ನೀಡಿದ್ದಾರೆ.
‘ಅಲ್ ಖೈದಾ ವೀಡಿಯೋ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ’ ಎಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಈ ರೀತಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ.ಅವರು ಮೊದಲು ಅಲ್ ಖೈದಾ ಸಂಘಟನೆಯ ಹೇಳಿಕೆ ಖಂಡಿಸಬೇಕು. ಇದನ್ನು ಬಿಟ್ಟು ಈ ರೀತಿ ಬೇಜಾವಾಬ್ದಾರಿಯಾಗಿ ಒಂದು ಸಂಘಟನೆ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದರು.
ಸಮಾಜ ಇದನ್ನು ಸೂಕ್ಷ್ಮವಾಗಿ ನೋಡುತ್ತಿದೆ. ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಯಾವ ಬೆಲೆಯೂ ಇಲ್ಲ. ಹಿಜಾಬ್ ಬಗ್ಗೆ ಮಾತನಾಡುತ್ತಾ ಅದನ್ನು ಕಾವಿಗೆ ಹೋಲಿಸಿ ಜನರಿಂದ ಟೀಕೆಗೆ ಒಳಗಾಗಿದ್ದರು.ಈ ಹೇಳಿಕೆಯಿಂದಲೂ ಅದೇ ರೀತಿ ಟೀಕೆಗೆ ಒಳಗಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಇಂತಹವರನ್ನು ವಿಚಾರಣೆ ಮಾಡಿ, ಹೀಗೆ ವಿಚಾರಣೆ ಮಾಡಿ ಎಂದು ನಾವು ಹೇಳುವುದು ಸರಿಯಲ್ಲ ಎಂದರು.
‘ಸಿಎಂ ಮೌನ ಮುರಿಯಬೇಕು’ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಮುಸ್ಲಿಂಮರನ್ನು ಓಲೈಕೆ ಮಾಡಲು ಎಚ್ ಡಿಕೆ, ಸಿದ್ದರಾಮಯ್ಯ ನಡುವೆ ಪೈಪೋಟಿ ಶುರುವಾಗಿದೆ.ನಮಗೆ ಹೆಚ್ಚು ಮುಸ್ಲಿಂ ವೋಟು ಬೇಕು ಅಂತ ಕಾಂಪಿಟೇಶನ್ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಮೌನಿಯಾಗಿಲ್ಲ.ಉತ್ತಮ ವಾಗ್ಮಿಗಳು, ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ.ಯಾವ ವಿಚಾರಕ್ಕೆ ಏನು ಹೇಳಬೇಕೋ ಅದನ್ನು ಹೇಳುತ್ತಾರೆ’ ಎಂದು ತಿರುಗೇಟು ನೀಡಿದರು.
‘ಬೆಲೆ ಏರಿಕೆ ವಿಚಾರ ಡೈವರ್ಟ್ ಮಾಡಲು ಎಮೋಷನಲ್ ಕಾರ್ಡ್ ಪ್ಲೇ’ ವಿಚಾರ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿಗೆ ಇನ್ನೂ ಅಂತಹ ಸ್ಥಿತಿ ಬಂದಿಲ್ಲ.ರಷ್ಯಾ ಉಕ್ರೇನ್ ಯುದ್ದದ ಪರಿಣಾಮ ತೈಲ ಆಮದಿನಲ್ಲಿ ವ್ಯತ್ಯಾಸವಾಗಿದೆ. ಹಣದುಬ್ಬರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಪ್ರಧಾನಿ ಮೋದಿ ಅವರು ವಿಶ್ವದಲ್ಲೇ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.ಬೆಲೆ ಏರಿಕೆಯನ್ನೂ ಹಂತ ಹಂತವಾಗಿ ಕಡಿಮೆ ಮಾಡುತ್ತೇವೆ’ ಎಂದರು.