Advertisement

ಭಾಲ್ಕಿ ನಗರ ಪೊಲೀಸ್ ಠಾಣೆಯ ಸಿಪಿಐ ಲಂಚ ಪಡೆಯುತ್ತಿದ್ದ ವಿಡಿಯೋ ವೈರಲ್

12:39 PM Jan 24, 2022 | Team Udayavani |

ಭಾಲ್ಕಿ: ನಗರ ಪೊಲೀಸ್ ಠಾಣೆಯ ಸಿಪಿಐ ಪಿ.ಆರ್.ರಾಘವೇಂದ್ರ ಅವರು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

Advertisement

ಶಿಸ್ತು, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಿಗೆ ಅಪಾರ ಗೌರವ ಇದೆ. ಆದರೆ, ಕೆಲ ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಅಂತಹ ಇಲಾಖೆಗೆ ಕಳಂಕ ತರುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಭ್ರಷ್ಟಾಚಾರ ವ್ಯಾಪಕವಾಗಿ ಬೇರೂರಿದೆ. ಅದಕ್ಕೆ ನನ್ನ ಕ್ಷೇತ್ರ ಕೂಡ ಹೊರತಾಗಿಲ್ಲ. ಇಲ್ಲಿ ವಿವಿಧ ಇಲಾಖೆಗೆ ಅಧಿಕಾರಿಗಳು ಯಾವಾಗ ನಿಯೋಜನೆಗೊಳ್ಳುತ್ತಾರೆ ಮತ್ತು ಯಾವಾಗ ವರ್ಗಾವಣೆ ಆಗುತ್ತಾರೆ ಎನ್ನುವುದೇ ಒಬ್ಬ ಶಾಸಕನಾಗಿ ನನ್ನ ಗಮನಕ್ಕೆ ಬರುತ್ತಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯ ಗೊಂಡಿದೆ. ರಾಜರೋಷವಾಗಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಯಾರೂ ಕ್ಯಾರೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲ ತಿಂಗಳ ಹಿಂದೆ ಇಲ್ಲಿನ ನಗರ ಪೊಲೀಸ್ ಠಾಣೆಗೆ ಸಿಪಿಐ ಆಗಿ ನಿಯೋಜನೆಗೊಂಡಿರುವ ಪಿ.ಆರ್.ರಾಘವೇಂದ್ರ ಅವರ ಮೇಲೆ ಮೊದಲಿನಿಂದಲೂ ಲಂಚದ ಆರೋಪ ಕೇಳಿ ಬರುತ್ತಿದೆ.

ಜನರಿಗೆ ಅನ್ಯಗತ್ಯ ಕಿರುಕುಳ ನೀಡುವುದು, ಸಣ್ಣಪುಟ್ಟ ವಿಷಯಗಳಿಗೆ ತೊಂದರೆ ಕೊಡುತ್ತಿರುವುದು, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಜನರಿಗೂ ಹಣದ ಬೇಡಿಕೆ ಈಡುತ್ತಿರುವ ಬಗ್ಗೆ ಜನರು ನನ್ನ ಗಮನಕ್ಕೆ ತಂದಿದ್ದಾರೆ ಎಂದಿದ್ದಾರೆ.

Advertisement

ಈ ಕುರಿತು ಸಾಕಷ್ಟು ಸಲ ಅವರನ್ನು ಕರೆಸಿ ಎಚ್ಚರಿಕೆ ನೀಡಿ ತಮ್ಮ ನಡುವಳಿಕೆಯಲ್ಲಿ ಸುಧಾರಣೆ ತಂದು ಕೊಳ್ಳುವಂತೆ ತಿಳಿ ಹೇಳಿದ್ದೇನೆ. ಆದರೂ ಅವರು ಎಚ್ಚೆತ್ತುಕೊಳ್ಳದಂತೆ ಕಾಣುತ್ತಿಲ್ಲ. ಇಂತಹ ಅಧಿಕಾರಿಗಳಿಂದ ಜನರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಎನ್ನುವುದು ಕನಸಿನ ಮಾತು.

ವ್ಯಕ್ತಿಯೊಬ್ಬರಿಂದ ಸಿಪಿಐ ಅವರು ಸಮವಸ್ತ್ರದಲ್ಲೇ ಲಂಚ ಪಡೆಯುತ್ತಿರುವುದು ದೃಶ್ಯ ವೈರಲ್ ಆಗಿರುವುದು ನೋಡಿದರೇ ಸಾರ್ವಜನಿಕರ ರಕ್ಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ.

ಕೂಡಲೇ ಮೇಲಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next