Advertisement

ಸಮರ್ಪಣ ಭಾವದಿಂದ ಗೆಲುವು ನಿಶ್ಚಿತ: ಹರೀಶ್‌

02:55 AM Jul 13, 2017 | Team Udayavani |

ಪುತ್ತೂರು: ಕಳೆದ ಬಾರಿ ಜಿಲ್ಲೆಯಲ್ಲಿ 8 ಸ್ಥಾನಗಳಲ್ಲಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೆವು. ಈ ಬಾರಿ ಅದನ್ನು ಉಳಿಸಿಕೊಳ್ಳುವುದರ ಜತೆಗೆ ಸುಳ್ಯವನ್ನೂ ಗೆಲ್ಲಬೇಕಿದೆ. ಇದು ಅಪಾರ ಶ್ರಮದಾಯಕ ಕೆಲಸ. ಕೇವಲ ಅಧ್ಯಕ್ಷನಿಂದ ಮಾತ್ರ ಅಸಾಧ್ಯ. ಎಲ್ಲರೂ ಸೇರಿ ಕಾರ್ಯಕರ್ತರು ಸಮರ್ಪಣ ಭಾವದಿಂದ ಕೆಲಸ ಮಾಡಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ನೂತನ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದರು.

Advertisement

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅನಂತರ ಮೊದಲ ಬಾರಿ ಬುಧವಾರ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ ಅವರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಅವಧಿ ಮುನ್ನ ಅಥವಾ ಅನಂತರ ಚುನಾವಣೆ ಬರುವ ಸಾಧ್ಯತೆ ಇದ್ದು, ಎಲ್ಲ ಬೂತ್‌ ಮಟ್ಟದ ಕಮಿಟಿಗಳ ರಚನೆಯಾಗಬೇಕು. ಪ್ರತಿ ಬೂತ್‌ ನಿಂದ ನಿಷ್ಠಾವಂತರನ್ನು ಬಿಎಲ್‌ಎಗಳಾಗಿ ನೇಮಿಸ ಬೇಕು. ಹೊಸ ಮತದಾರರ ಸೇರ್ಪಡೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಆಡಳಿತ ವಿರೋಧಿ ಇಲ್ಲ
ಹಿಂದಿನ ಅವಧಿಯಲ್ಲಿ ರಾಜ್ಯವನ್ನು ಆಳಿದ ಬಿಜೆಪಿ ಚುನಾವಣೆ ಸಂದರ್ಭ ಆಡಳಿತ ವಿರೋಧಿ ಅಲೆಯಿಂದ ತತ್ತರಿಸಿತ್ತು. ಸಿದ್ದರಾಮಯ್ಯ ಸರಕಾರದ ವಿರುದ್ಧ ಅಂತಹ ಯಾವ ವಿರೋಧಿ ಅಲೆ ಇಲ್ಲ ಎಂದು ಹರೀಶ್‌ ಕುಮಾರ್‌ ಹೇಳಿದರು.
ಅಭಿವೃದ್ಧಿ ಕಾರ್ಯಗಳ ಮೂಲಕ ಸಿದ್ದರಾಮಯ್ಯ ಜನ ಮನ ಗೆದ್ದಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಈ ಸರಕಾರದ ಮೇಲಿಲ್ಲ. ಸರಕಾರದ ಉತ್ತಮ ಸಾಧನೆ ಯನ್ನು ಮತಗಳನ್ನಾಗಿ ಪರಿವರ್ತನೆ ಮಾಡುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಅವರು ವಿವರಿಸಿದರು.

ಅಶಾಂತಿ ಕೆಡಿಸುವವರು ಬಿಜೆಪಿ ನಾಯಕರು!
ಬಿಜೆಪಿಯ ಅಬ್ಬರ ಮೇಲ್ನೋಟಕ್ಕೆ ದೊಡ್ಡದಾಗಿ ಕಾಣುತ್ತದೆ. ಸಮಾಜದ ಅಶಾಂತಿ ಕೆಡಿಸುವವರೆಲ್ಲ ಆ ಸಂಘಟನೆಗಳ ನೇತಾರರು. ಅರ್ಧ ಗಂಟೆಯಲ್ಲಿ ರಸ್ತೆಯಲ್ಲಿ ಪ್ರತಿಭಟನೆಗೆ ಸೇರುವುದು ಅವರ ಸಾಧನೆ ಎಂದ ಅವರು, ಕಾಂಗ್ರೆಸ್‌ ಮತದಾರರು ಅಂಥವರಲ್ಲ. ತಮ್ಮಷ್ಟಕ್ಕೇ ದುಡಿಯುವವರು, ಜನರಿಗೆ ನೆರವಾಗು ವವರು. ಹಾಗಾಗಿ ಕಾಂಗ್ರೆಸ್‌ನ ಅಬ್ಬರ ಕಾಣುವುದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಂಚೂಣಿ ಯಲ್ಲಿದ್ದು, ಶೇ.55 ಮತ ನಮ್ಮ ಕೈಯಲ್ಲಿದೆ ಎಂದು ವಿಶ್ಲೇಷಿಸಿದರು.

ಭಿನ್ನಮತ ಪಕ್ಷಕ್ಕೆ ಹೊಸತಲ್ಲ
ಪಕ್ಷದೊಳಗೆ ಭಿನ್ನಮತ, ಗುಂಪುಗಾರಿಕೆ ಇದ್ದರೆ ಆ ಬಗ್ಗೆ ಚಿಂತೆ ಬೇಡ. ಭಿನ್ನಮತ ಪಕ್ಷಕ್ಕೆ ಹೊಸತಲ್ಲ. ಅದರೊಂದಿಗೆ ಬೆಳೆದು ಬಂದವರು ಕಾಂಗ್ರೆಸಿಗರು. ಅದು ಕಾಂಗ್ರೆಸ್‌ನ ಜೀವಂತಿಕೆ ಲಕ್ಷಣವೂ ಹೌದು ಎಂದ ಅವರು, ಅದನ್ನು ಮೀರಿ ನಾವು ಸಾಧನೆ ಮಾಡಬೇಕು ಎಂದು ಪುತ್ತೂರು ಕಾಂಗ್ರೆಸ್‌ನ ಗುಂಪುಗಾರಿಕೆಯ ಸಭೆಯಲ್ಲಿ ಪ್ರಸ್ತಾಪವಾದ ವಿಚಾರಕ್ಕೆ ಹರೀಶ್‌ ಕುಮಾರ್‌ ಉತ್ತರಿಸಿದರು.

Advertisement

ಸಂಸದರ ಸಾಧನೆ ಶೂನ್ಯ
ಸಂಸದ ನಳಿನ್‌ ಕುಮಾರ್‌ ಕಟೀಲು ಜಿಲ್ಲೆಯ ಸಂಸದರು ಅನ್ನುವುದನ್ನು ಮರೆತಿದ್ದಾರೆ. ಪುತ್ತೂರು ಮತ್ತು ಸುಳ್ಯಕ್ಕೆ ಭೇಟಿ ನೀಡುವುದು ಬಿಟ್ಟರೆ ಜಿಲ್ಲೆಯಲ್ಲಿ ಉಳಿದ ಕ್ಷೇತ್ರಕ್ಕೆ ಭೇಟಿ ಕೊಡುತ್ತಿಲ್ಲ. ಬೆಳ್ತಂಗಡಿಗಂತೂ ಬರುವುದೇ ಅಪರೂಪ. ಅಲ್ಲಿಗೆ ನಯಾ ಪೈಸೆ ಅನುದಾನ ನೀಡಿಲ್ಲ. ಸಂಘಟನೆಯ ಮೂಲಕ ಜಿಲ್ಲೆಯ ಸ್ವಾಸ್ಥÂ ಕೆಡಿಸುವ ಹೇಳಿಕೆ ನೀಡುವುದೇ ಅವರ ಸಾಧನೆ ಎಂದು ಟೀಕಿಸಿದರು.

ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಹರೀಶ್‌ ಕುಮಾರ್‌ ವಯಸ್ಸಿನಲ್ಲಿ ನನಗಿಂತ ಕಿರಿಯರಾದರೂ, ರಾಜಕೀಯದಲ್ಲಿ ನನಗೆ ಹಿರಿಯಣ್ಣ. ನಿಮ್ಮ ಸಾರಥ್ಯ ದಲ್ಲಿ ಪಕ್ಷ ಜಿಲ್ಲೆಯಲ್ಲಿ ಎಲ್ಲ 8 ಸ್ಥಾನಗಳನ್ನು ಗೆಲ್ಲುವಂತಾಗಲಿ ಎಂದರು.

ಗ್ರಾಮ ಭೇಟಿ
ಗ್ರಾಮಗಳಿಗೆ ಭೇಟಿ ನೀಡಿ ಮನೆಗಳಲ್ಲಿ ಪಕ್ಷದ ಸಭೆಯಂತಹ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಬೇಕು. ಈಗಾಗಲೇ ಐದು ಗ್ರಾಮದಲ್ಲಿ ಭೇಟಿ ನೀಡಿದ್ದೇನೆ ಎಂದ ಅವರು, ಪಕ್ಷದಿಂದ ಅಧಿಕಾರ ಪಡೆದವರು, ಪಕ್ಷ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫಝಲ್‌ ರಹಿಂ, ವಿಟ್ಲ – ಉಪ್ಪಿನಂಗಡಿ ಬ್ಲಾಕ್‌ ಅಧ್ಯಕ್ಷ ಪ್ರವೀಣ್‌ ಚಂದ್ರ ಆಳ್ವಾ, ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ಶೆಟ್ಟಿ, ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿಲ್ಮಾ, ಯುವ ಕಾಂಗ್ರೆಸ್‌ ಅಧ್ಯಕ್ಷ ಯು.ಟಿ. ತೌಫಿಕ್‌, ಪಕ್ಷದ ಪ್ರಮುಖರಾದ ನವೀನ್‌ ಭಂಡಾರಿ, ಪ್ರಸಾದ್‌ ಕೌಶಲ್‌ ಶೆಟ್ಟಿ, ಮಹೇಶ್‌ ರೈ ಅಂಕೊತ್ತಿಮಾರ್‌, ಅಮಳ ರಾಮಚಂದ್ರ, ಕೃಷ್ಣ ಪ್ರಸಾದ್‌ ಆಳ್ವ, ರೋಷನ್‌ ರೈ ಬನ್ನೂರು, ಇಸಾಕ್‌ ಸಾಲ್ಮರ, ನೂರುದ್ದೀನ್‌ ಸಾಲ್ಮರ, ಮಾಜಿ ನಗರಸಭಾ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ, ನಗರಸಭೆ ಸದಸ್ಯೆ ಝೊಹಾರಾ ನಿಸಾರ್‌, ಬೆಟ್ಟ ಈಶ್ವರ ಭಟ್‌, ಸಾಹಿರಾ ಜುಬೇರ್‌, ಉಲ್ಲಾಸ್‌ ಕೋಟ್ಯಾನ್‌, ಎ.ಕೆ. ಜಯರಾಮ್‌ ರೈ, ಗಪೂರ್‌ ಸಾಹೇಬ್‌ ಪಾಲ್ತಾಡು ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ.ಮಾಜಿ ಸದಸ್ಯ ಮಹಮ್ಮದ್‌ ಬಡಗನ್ನೂರು ನಿರೂಪಿಸಿದರು.

ಜು. 15: 
ಎಐಸಿಸಿ ಕಾರ್ಯದರ್ಶಿ ಭೇಟಿ

ಜು. 15ರಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್‌ ಅವರು ಪುತ್ತೂರು ಮತ್ತು ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣು ಗೋಪಾಲ್‌ ಅವರು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಪ್ರಕಟಿಸಿದರು.

ಪಕ್ಷ ವಿರೋಧಿ ಚಟುವಟಿಕೆ
ಜಿಲ್ಲಾಧ್ಯಕ್ಷರ ಮುಂದೆ ಪ್ರಸ್ತಾವ

ಶಾಸಕಿ ಶಕುಂತಳಾ ಟಿ. ಶೆಟ್ಟಿ ನಗರದ ಕಾಂಗ್ರೆಸ್‌ ಪಕ್ಷದೊಳಗಿನ ಭಿನ್ನಮತದ ಕುರಿತು ಜಿಲ್ಲಾಧ್ಯಕ್ಷರ ಮುಂದೆ ವಿಷಯ ಪ್ರಸ್ತಾವಿಸಿದ ಘಟನೆಯು ನಡೆಯಿತು. ಈ ದೇಶದ ಇತಿಹಾಸದಲ್ಲೇ ಆಡಳಿತ ಪಕ್ಷ ಸಭಾತ್ಯಾಗ ಮಾಡಿದ್ದ ಘಟನೆ ಕಾಂಗ್ರೆಸ್‌ ಆಡಳಿತ ಇರುವ ಪುತ್ತೂರು ನಗರಸಭೆಯಲ್ಲಿ ನಡೆದಿದೆ. ಇಂತಹ ಘಟನೆಯನ್ನು ನಾನು ಎಂದೂ ನೋಡಿಲ್ಲ, ಕೇಳಿಲ್ಲ.  ನಗರಸಭೆ ಕೌನ್ಸೆಲ್‌ ಮೀಟಿಂಗ್‌ಗೆ ನಾನು ಹೋಗಿದ್ದೆ. ಅಲ್ಲಿ ಆಡಳಿತ ದಲ್ಲಿರುವ ನಮ್ಮ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡಿದರು ಎಂದು ನಗರಸಭೆ ಆಡಳಿತ ವಿರುದ್ಧ  ಜಿಲ್ಲಾಧಕ್ಷರಲ್ಲಿ ಬಹಿರಂಗವಾಗಿಯೇ ಅಸಮಧಾನ ತೋಡಿಕೊಂಡ ಶಾಸಕಿ, ಇಂತಹ ನಡೆಯಿಂದ ಪಕ್ಷಕ್ಕೆ ಧಕ್ಕೆ ಆಗುತ್ತದೆ. ಹಾಗಾಗಿ ಪಕ್ಷ  ವಿರೋಧಿ ನಡೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯದಲ್ಲಿ ಬೇರೆಲ್ಲೂ ಇಲ್ಲದ ಜಮೀನು ಖಾತೆ ಸಮಸ್ಯೆ ಪುತ್ತೂರು ನಗರದಲ್ಲಿದೆ. ಇಲ್ಲಿ ಖಾತೆ ಸಮಸ್ಯೆ ಆಗುವಂತೆ ಮಾಡಿದವರೂ ನಮ್ಮವರೇ. ಈಗ ಖಾತೆ ಕೊಡುತ್ತಿಲ್ಲ ಅನ್ನುವವರು ನಮ್ಮವರೇ ಎಂದ ಶಾಸಕಿ ಪುತ್ತೂರಿನ ಸಂತೆಯನ್ನು ಓಡಿಸಿದ್ದೂ ನಮ್ಮವರೇ. ಅನಂತರ ಸಮಸ್ಯೆಯಾದಾಗ ಮತ್ತೆ ಕರೆಸಿಕೊಂಡದ್ದು ನಮ್ಮವರೇ. ಪುತ್ತೂರಿನ ಈ ಸಮಸ್ಯೆಗೆ ತೇಪೆ ಹಚ್ಚುವ ಕೆಲಸ ಮಾಡಿ ಎಂದು ಜಿಲ್ಲಾಧ್ಯಕ್ಷರಲ್ಲಿ  ವಿನಂತಿಸಿದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next