Advertisement

ಹಲ್ಲೆ  ಮಾಡಿದವರಿಗೆ  ಶಿಕ್ಷೆಯಾಗಲೇ ಬೇಕು: ಡಿ’ಮೆಲ್ಲೊ

03:45 AM Jul 05, 2017 | Team Udayavani |

ಉಡುಪಿ: ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ ತನ್ನ ಮೇಲೆ ನಗರಸಭಾ ಸದಸ್ಯರು ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಅವರ ಮೇಲೆ ಶಿಕ್ಷೆಯಾಗಲೇ ಬೇಕು ಎಂದು ರೋನಿ ಡಿ’ಮೆಲ್ಲೋ ಆಗ್ರಹಿಸಿದ್ದಾರೆ.

Advertisement

ಅವರು ಜು. 3ರಂದು ಕಡಿಯಾಳಿ ಪರಿಸರದಲ್ಲಿ ಜರಗಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಡುಪಿ ನಗರಸಭೆಯ ಅಧಿವೇಶನದಲ್ಲಿ ಆಡಳಿತಾ ರೂಢಾ ಕಾಂಗ್ರೆಸ್‌ ಪಕ್ಷದ ನಗರಸಭೆಯ ಅವರದೇ ಪಕ್ಷದ ಸದಸ್ಯರಾದ ಗೀತಾ ಶೇಟ್‌ ಅವರು ಸಾಕ್ಷಿ ಹೇಳಲು ಕರೆದ ಹಿನ್ನಲೆಯಲ್ಲಿ ತಾವು ನಗರಸಭೆಗೆ ಆಗಮಿಸಿದ್ದೆವು. ಸಭೆಯ ಒಳಗೆ ಹೋಗುವಾಗ ಯಾವುದೇ ಆಕ್ಷೇಪವನ್ನು ಎತ್ತದ ಇತರ ಕಾಂಗ್ರೆಸ್‌ ಸದಸ್ಯರು ಸ್ಪಷ್ಟೀಕರಣ ನೀಡಲು ಮೈಕ್‌ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಏಕಾಏಕಿ ತಮ್ಮ ಮೇಲೆ ಬಿದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ಸದಸ್ಯರು ಅಂದು ತಮ್ಮನ್ನು ರಕ್ಷಿಸದಿದ್ದರೆ ತಾವಲ್ಲೇ ಸತ್ತು ಹೋಗುತ್ತಿದ್ದೆವು. ಈ ರೀತಿ ವಿನಾಕಾರಣ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಅವರು ಆಗ್ರಹಿಸಿದರು.

ಮನೆಯ ಸಮೀಪದ ರಸ್ತೆ ನಿರ್ಮಾಣಕ್ಕೆ ಸುಮಾರು 5 ಲಕ್ಷ ರೂಪಾಯಿಯನ್ನು ನೀಡಲಾಗಿದೆ. ಅದಕ್ಕೆ  ಡಿ’ಮೆಲ್ಲೊ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ನಮ್ಮ ಪ್ರಾಂತ್ಯದ ಧರ್ಮಗುರುಗಳು ವರ್ಗವಾಗಿ ಹೋಗುತ್ತಿರುವ ಹಿನ್ನಲೆಯಲ್ಲಿ ಅವರನ್ನು ಮನೆಗೆ ಕರೆಸಿದ್ದೆವು. ಅದೇ ಕಾರ್ಯಕ್ರಮಕ್ಕೆ ನಮ್ಮ ವಾರ್ಡಿನ ಸದಸ್ಯೆ ಗೀತಾ ಶೇಟ್‌ ಅವರನ್ನು ಕರೆದಿದ್ದೆವು. ಅದರಿಂದ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಂತು. ಅಂದು ರಸ್ತೆಯ ಉದ್ಘಾಟನೆಯಾಗಲೇ ಇಲ್ಲ. ಆದರೆ ಉದ್ಘಾಟನೆಯಾಗಿದೆ ಎಂದು ಕಾಂಗ್ರೆಸ್‌ ಸದಸ್ಯರು ಗುಲ್ಲು ಹಬ್ಬಿಸಿದರು. ವಾಸ್ತವವನ್ನು ತಿಳಿಸಲು ನಗರಸಭೆಗೆ ತೆರಳಿದಾಗ ತಮ್ಮ ಮೇಲೆ ಹಲ್ಲೆ ನಡೆಯಿತು ಎಂದು ಅವರು ಸ್ಪಷ್ಟೀಕರಣ ನೀಡಿದರು.

ಗೂಂಡಾ ರಾಜ್ಯ
ಆಡಳಿತ ರೂಢಾ ಪಕ್ಷದ ಸದಸ್ಯರು ತಮ್ಮ ವಾರ್ಡಿನ ನಾಗರಿಕರ ಮೇಲೆ ಹಲ್ಲೆಯಾಗುವಾಗ ತಡೆಯಲು ಹೋದಾಗ ಅವರ ಸೀರೆ ಬಿಚ್ಚುವತನಕ ಅವರ ಸದಸ್ಯರೇ ಹಲ್ಲೆ ಮಾಡುತ್ತಾರೆ ಎಂದರೆ ಇದು ಗೂಂಡಾ ರಾಜ್ಯವೇ ಸರಿ ಎಂದು ಮಾಜಿ ಶಾಸಕ ರಘುಪತಿ ಭಟ್‌ ಹೇಳಿದರು.

ಉಸ್ತುವಾರಿ ಮಂತ್ರಿ ಅವರನ್ನು ರಸ್ತೆ ಉದ್ಘಾಟನೆಗೆ ಕರೆಯಲಿಲ್ಲವೆಂಬ ಉದ್ದೇಶದಿಂದ ಈ ಕೃತ್ಯನಡೆದಿದೆ. ಇದನ್ನು ಬಿಜೆಪಿ ಲಘುವಾಗಿ ಪರಿಗಣಿಸುವುದಿಲ್ಲ. ಓರ್ವ ಅಲ್ಪಸಂಖ್ಯಾಕರ ಮೇಲೆ ಹಲ್ಲೆಯಾದಾಗಲೂ ಆ ವ್ಯಕ್ತಿಯನ್ನು ನೋಡಲು ಬಾರದ ಕಾಂಗ್ರೆಸ್‌ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಹೇಳಿದ ಅವರು ಇಂದು ಸಭೆಮಾಡಿದ ಹಿನ್ನಲೆಯಲ್ಲಿ ಪರವಾನಿಗೆ ಕುರಿತಾಗಿ ನಾಳೆ ಪ್ರಕರಣ ದಾಖಲಾದರೆ ಸ್ಥಳೀಯರನ್ನು ಹಿಂಸಿಸದೆ ತಮ್ಮ ಮೇಲೆ ಪ್ರಕರಣ ದಾಖಲಿಸಿ ಅದಕ್ಕೆ ನಾವು ಕಾನೂನು ಆಧಾರದಲ್ಲಿ ಹೋರಾಡುತ್ತೇವೆ ಎಂದು ಅವರು ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರು ಭ್ರಷ್ಟರಾಗದಿದ್ದರೂ ಅವರು ಭ್ರಷ್ಟರಿಗೆ ಪ್ರೋತ್ಸಾಹ ನೀಡುತ್ತಿರುವುದು ಶೋಚನೀಯ. ಕಡಿಯಾಳಿ ದೇವಸ್ಥಾನದ ಸತ್ಯಾಸತ್ಯತೆ ತಿಳಿದಿದ್ದರೂ ಮೌನ ವಹಿಸಿರುವುದು ಅತ್ಯಂತ ಬೇಸರದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮೊನ್ನೆ ನಾಗರಿಕರ ಮೇಲೆ ನಡೆದ ಹಲ್ಲೆಯ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಬಳಕೆದಾರರ ವೇದಿಕೆಯ ದಾಮೋದರ ಐತಾಳ್‌ ಆಗ್ರಹಿಸಿದರು.
ಸ್ಥಳೀಯರಾದ ಶ್ರೀನಿವಾಸ ಉಪಾಧ್ಯಾಯ, ವಸಂತ್‌ ಭಟ್‌ ಮತ್ತಿತರರು ಸಭೆಯಲ್ಲಿ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next