Advertisement

ಸಂಘರ್ಷಕ್ಕಿದು ಸಮಯವಲ್ಲ ಸಂತ್ರಸ್ತರ ಸಹಾಯ ಆದ್ಯತೆಯಾಗಲಿ

06:00 AM Aug 27, 2018 | Team Udayavani |

ಭೀಕರ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಕ್ಕೆ ಪದೇ ಪದೇ ಮಂತ್ರಿಗಳು ಭೇಟಿ ನೀಡುವುದರಿಂದ ಪರಿಹಾರ ಕಾರ್ಯಾಚರಣೆಗೆ ತೊಡಕಾಗುತ್ತಿರುವುದು ನಿಜ.

Advertisement

ಮಡಿಕೇರಿಯಲ್ಲಿ ಶುಕ್ರವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಕೊಡಗು ಉಸ್ತುವಾರಿ ಸಚಿವ ಸಾ. ರಾ. ಮಹೇಶ್‌ ನಡುವೆ ನಡೆದ ಸಣ್ಣದೊಂದು ತಿಕ್ಕಾಟ ಇದೀಗ ಕೇಂದ್ರ ಮತ್ತು ರಾಜ್ಯದ ನಡುವಿನ ಸಂಘರ್ಷವಾಗಿ ಬದಲಾಗಿದೆ. ಸಚಿವೆ ಅಧಿಕಾರಿಗಳ ಸಭೆಗೆ ಮುನ್ನ ಕೊಡಗಿನ ಪರಿಸರವಾದಿಗಳ ಜತೆಗೆ ಮಾತುಕತೆ ನಡೆಸಿದ್ದು ಸ್ಥಳೀಯ ಜನಪ್ರತಿನಿಧಿಗಳಿಗೆ, ಉಸ್ತುವಾರಿ ಸಚಿವರಿಗೆ ಹಿಡಿಸಿಲ್ಲ. 

ಅಧಿಕಾರಿಗಳಿಗೆ ಪರಿಹಾರ ಕಾರ್ಯಾಚರಣೆಗೆ ಹೋಗಲು ತಡವಾಗುತ್ತಿರುವ ಕಾರಣ ಕೇಂದ್ರ ಸಚಿವರು ಮೊದಲು ಅವರ ಸಭೆ ನಡೆಸಬೇಕೆಂದು ಮಹೇಶ್‌ ಹೇಳಿದ್ದಾರೆ. ಇದು ನಿರ್ಮಲಾ ಸೀತಾರಾಮನ್‌ ಅವರನ್ನು ಕೆರಳಿಸಿದೆ. ಅವರು ಭುಸು ಗುಡುತ್ತಲೇ ಸಭೆಗೆ ಬಂದು ಇಲ್ಲಿ ಕೇಂದ್ರ ಸಚಿವರು ರಾಜ್ಯ ಸಚಿವರ ಮಾತಿನಂತೆ ನಡೆದುಕೊಳ್ಳಬೇಕು. ಎಲ್ಲ ಕಾರ್ಯಕ್ರಮಗಳು ಶಿಷ್ಟಾಚಾರದ ಪ್ರಕಾರವೇ ನಡೆಯಲಿ. ನಿಮ್ಮ ಶಿಷ್ಟಾಚಾರಕ್ಕೆ ತಕ್ಕಂತೆ ನಾನು ನಡೆಯುತ್ತೇನೆ ಎಂದು ಹೇಳಿದ್ದಾರೆ. ಇದೆಲ್ಲ ಅಧಿಕಾರಿಗಳು ಮತ್ತು ಮಾಧ್ಯಮದವರು ತುಂಬಿದ್ದ ಸಭೆಯಲ್ಲೇ ನಡೆದಿದೆ ಮತ್ತು ಎಲ್ಲ ಘಟನಾವಳಿಗಳು ಯಥಾವತ್ತು ರೆಕಾರ್ಡ್‌ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇಲ್ಲಿಗೆ ಈ ಘಟನೆ ತಣ್ಣಗಾಗಬಹುದಿತ್ತು. ಆದರೆ ಅನಂತರ ಮಹೇಶ್‌ ಹಾಗೂ ಇತರ ಕೆಲವು ನಾಯಕರು ಈ ಘಟನೆಗೆ ನೀಡಿದ ಪ್ರತಿಕ್ರಿಯೆ ಹಾಗೂ ಇದಕ್ಕೆ ಪ್ರತಿಯಾಗಿ ರಕ್ಷಣಾ ಇಲಾಖೆ ನೀಡಿರುವ ಸ್ಪಷ್ಟೀಕರಣ ಹೀಗೆ ಬೆನ್ನುಬೆನ್ನಿಗೆ ನಡೆದ ಬೆಳವಣಿಗೆಗಳಿಂದಾಗಿ ಇದು ರಾಷ್ಟ್ರೀಯ ವಿವಾದವಾಗಿ ಬದಲಾಗಿರುವುದು ದುರದೃಷ್ಟಕರ. 

ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪರಿಶೀಲನೆಗೆ ಬಂದ ನಿರ್ಮಲಾ ಸೀತಾರಾಮನ್‌ ಪರಿಸರವಾದಿಗಳೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಪರಿಸರವಾದಿಗಳ ಪೈಕಿ ಹೆಚ್ಚಿನವರು ನಿವೃತ್ತ ಸೈನಿಕರೇ. ಇವರು ಕೊಡಗಿನ ಪರಿಸರ ಸಂರಕ್ಷಣೆಗೆ ಕಸ್ತೂರಿರಂಗನ್‌ ವರದಿ ಜಾರಿಯಾಗಬೇಕೆಂದು ಒತ್ತಾಯಿಸುತ್ತಿರುವವರು. ಕಸ್ತೂರಿರಂಗನ್‌ ವರದಿಯನ್ನು ಪ್ರಸ್ತುತ ಇರುವ ರೂಪದಲ್ಲೇ ಅನುಷ್ಠಾನಿಸುವುದನ್ನು ರಾಜ್ಯ ಸರಕಾರ ವಿರೋಧಿಸುತ್ತಿದೆ. ಇದೀಗ ಈ ಆಯಾಮವೂ ವಿವಾದದ ಜತೆಗೆ ತಳುಕು ಹಾಕಿಕೊಂಡಿದೆ. 

ಈ ಘಟನೆಯಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳುವುದು ಕಷ್ಟ. ಆದರೆ ಮೇಲ್ನೋಟಕ್ಕೆ ಇಬ್ಬರದ್ದೂ ತಪ್ಪಿರುವಂತೆ ಕಾಣಿಸುತ್ತದೆ. ಭೀಕರ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಕ್ಕೆ ಪದೇ ಪದೇ ಮಂತ್ರಿಗಳು ಭೇಟಿ ನೀಡುವುದರಿಂದ ಪರಿಹಾರ ಕಾರ್ಯಾಚರಣೆಗೆ ತೊಡಕಾಗುತ್ತಿರುವುದು ನಿಜ. ಜಿಲ್ಲಾಧಿಕಾರಿಯೂ ಸೇರಿದಂತೆ ಪ್ರಮುಖ ಅಧಿಕಾರಿಗಳೆಲ್ಲ ಮಂತ್ರಿ ಮಹೋದಯರು ಹೋಗುವ ತನಕ ಅವರ ಜತೆಗೆ ಇರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸಚಿವೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆದಷ್ಟು ಬೇಗ ಅಧಿಕಾರಿಗಳ ಜತೆಗಿನ ಸಭೆ ಮುಗಿಸಿದ್ದರೆ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಇದೇ ವೇಳೆ ಸಾ. ರಾ. ಮಹೇಶ್‌ ಕೂಡಾ ಒಂದಷ್ಟು ಹೊತ್ತು ತಡವಾಗಿದ್ದಕ್ಕೆ ಸಭಾತ್ಯಾಗ ಮಾಡುವ ಬೆದರಿಕೆ ಹಾಕಿದ್ದು ಸರಿಯಾದ ಕ್ರಮವಲ್ಲ. ಸಚಿವೆಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಾದದ್ದು ಅಲ್ಲಿದ್ದ ರಾಜ್ಯದ ಪ್ರತಿನಿಧಿಗಳ ಕೆಲಸವಾಗಿತ್ತು. ಇದಾದ ಇಡೀ ಘಟನೆಗೆ ಸಿದ್ದರಾಮಯ್ಯ, ಪರಮೇಶ್ವರ್‌, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸುತ್ತಿರುವುದು ಮಾತ್ರ ಸಮರ್ಪಕ ನಡೆಯಲ್ಲ.ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅವುಗಳದ್ದೇ ಅಧಿಕಾರ ಮತ್ತು ಜವಾಬ್ದಾರಿಗಳಿವೆ. 

Advertisement

ಸಂವಿಧಾನವೇ ಕೇಂದ್ರ ಮತ್ತು ರಾಜ್ಯಗಳ ಅಧಿಕಾರವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರವಿರುವಾಗ ತಿಕ್ಕಾಟ ನಡೆಯು ತ್ತಿರುವುದು ಇದೇನು ಹೊಸತಲ್ಲ. ಹಿಂದಿನ ಸರಕಾರ ಕೂಡಾ ಉದ್ದಕ್ಕೂ ಕೇಂದ್ರದ ಜತೆಗೆ ಸಂಘರ್ಷ ನಡೆಸಿಕೊಂಡೇ ಬಂದಿತ್ತು. ಇದೀಗ ನೂತನ ಸರಕಾರವೂ ಅದೇ ಹಾದಿ ಹಿಡಿದರೆ ಅದರಿಂದ ನಷ್ಟವಾಗುವುದು ರಾಜ್ಯಕ್ಕೆ. 

ನೆರೆ ಮತ್ತು ಭೂಕುಸಿತದಿಂದ ಕೊಡಗು ಜರ್ಜರಿತಗೊಂಡಿದ್ದು, ವ್ಯಾಪಕವಾಗಿ ನಾಶನಷ್ಟ ಸಂಭವಿಸಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಆದಷ್ಟು ಸಂಪನ್ಮೂಲ ಕ್ರೊಢೀಕರಿಸಿ ಸಂತ್ರಸ್ತರಿಗೆ ಹೊಸ ಬದುಕು ಕೊಡುವ ಕೆಲಸವನ್ನು ಆದ್ಯತೆಯಾಗಿ ಪರಿಗಣಿಸಬೇಕು. ಕೇಂದ್ರದ ಜತೆಗೆ ಸಂಘರ್ಷ ನಡೆಸಲು ಇದು ಸಮಯವಲ್ಲ ಎನ್ನುವುದನ್ನು ರಾಜ್ಯದ ನಾಯಕರು ಅರ್ಥ ಮಾಡಿಕೊಳ್ಳಬೇಕು. 

Advertisement

Udayavani is now on Telegram. Click here to join our channel and stay updated with the latest news.

Next