ಅಥಣಿ: ತಾಲೂಕಿನ ಕೃಷ್ಣಾ ನದಿ ತೀರದ ಸುಮಾರು 21 ಹಳ್ಳಿಗಳು ಪ್ರವಾಹದಿಂದ ಬಾಧಿತವಾಗುತ್ತಿದ್ದರೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಾಲೂಕಾಡಳಿತ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದ್ದು, ನೆರೆ ಸಂತ್ರಸ್ತರು ಪರದಾಡುವಂತಾಗಿದೆ.
2005ರಲ್ಲಿ ಬಂದ ಮಹಾಪೂರದ ನಂತರ 2019 ಹಾಗೂ 2021 ರಲ್ಲಿ ಬಂದ ಪ್ರವಾಹದಿಂದಾಗಿ ಕೃಷ್ಣಾ ನದಿ ತೀರದ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಮುಳುಗಡೆಯಾಗುವ ಜನವಾಡ, ಮಹೇಶವಾಡಗಿ, ನಂದೇಶ್ವರ, ಸೌದಿ , ದರ್ಗಾ, ಸತ್ತಿ, ದೊಡವಾಡ, ನಾಗನೂರ ಪಿ.ಕೆ, ಅವರಖೋಡ, ಖವಟಕೋಪ್ಪ, ಶೇಗುಣಸಿ, ದರೂರ, ಹಲ್ಯಾಳ, ನದಿ ಇಂಗಳಗಾಂವ, ತೀರ್ಥ, ಸಪ್ತಸಾಗರ ಗ್ರಾಮಸ್ತರ ಸಮಸ್ಯೆಗಳಿಗೆ ಸ್ಪಂದಿಸುವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.
2019ರಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ 3357 ಮನೆ ಹಾನಿಯಾಗಿದ್ದು, ಸಂಪೂರ್ಣ ಬಿದ್ದ ಮನೆಗಳು 125, ಬಿ ಕೆಟೆಗೆರಿಯ 508 ಮನೆಗಳು, ಸಿ ಕೆಟೆಗೆರಿಯಲ್ಲಿ 2652 ಮನೆಗಳಿಗೆ ಹಾನಿಯಾಗಿದೆ. ಐವರು ಸಾವಿಗೀಡಾಗಿದ್ದು, 67 ಪ್ರಾಣಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದವು. 2019-20 ನೇ ಸಾಲಿನಲ್ಲಿ ತಾತ್ಕಾಲಿಕ ಪರಿಹಾರವಾಗಿ ತಲಾ 10 ಸಾವಿರ ರೂ., ವರ್ಗವಾರು ಮನೆ ಹಾನಿ ಪರಿಹಾರವಾಗಿ 24.82 ಕೋಟಿ ರೂ ನೀಡಲಾಗಿದೆ. ಆದರೂ ಬಹುತೇಕರಿಗೆ ಪರಿಹಾರ ದೊರಕಿಲ್ಲವೆಂಬ ಅಸಮಾಧಾನ, ಆರೋಪಗಳಿವೆ.
2021ರ ಪ್ರವಾಹದಲ್ಲಿ ಒಟ್ಟು 922 ಮನೆಗಳಿಗೆ ಹಾನಿಯಾಗಿದ್ದು, ಎ ಕೆಟೆಗೆರಿ 13, ಬಿ ಕೆಟೆಗೆರಿ 203 ಹಾಗೂ ಸಿ ಕೆಟೆಗೆರಿಯಲ್ಲಿ 706 ಮನೆ ಗಳಿವೆ. ಓರ್ವ ಸಾವಿಗೀಡಾಗಿದ್ದು, 4 ಪ್ರಾಣಿಗಳು ಕೊಚ್ಚಿ ಹೋಗಿದ್ದವು. ಮನೆ ಹಾನಿ ಮೂರು ವಿಭಾಗದಲ್ಲಿ ಪರಿಹಾರದ ಮೊದಲ ಕಂತು ಮಾತ್ರ ಈವರೆಗೆ ವಿತರಿಸಲಾಗಿದ್ದು, ಒಟ್ಟು 19.80 ಕೋಟಿ ರೂ ಪರಿಹಾರ ನೀಡಲಾಗಿದೆ. ಜೀವಹಾನಿ ಹಾಗೂ ಜಾನವಾರು ಹಾನಿಗಾಗಿ 5,92,000 ರೂ. ಪರಿಹಾರ ನೀಡಲಾಗಿದೆ.
ಅಥಣಿ ತಾಲೂಕಿನ ದರೂರ ಗ್ರಾಮಕ್ಕೆ ಆಗಿನ ಸಿಎಂ ಯಡಿಯುರಪ್ಪನವರು ಬಂದು ಪ್ರವಾಹ ಸಂತಸ್ತರ ಪ್ರತಿ ಮನೆಗೆ 5 ಲಕ್ಷ ಪರಿಹಾರ ಘೋಷಿಸಿ ಸಾಂಕೇತಿಕವಾಗಿ ಐದು ಜನರಿಗೆ ತಲಾ 5 ಲಕ್ಷ ರೂ. ಚೆಕ್ ವಿತರಿಸಿ ಹೋದ ಕೆಲವೇ ಗಂಟೆಯಲ್ಲಿ ಸಂತ್ರಸ್ತರಿಂದ ಆ ಚೆಕ್ ತಾಲೂಕು ಆಡಳಿತ ವಾಪಸ್ ಪಡೆದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ನಿಜವಾದ ಫಲಾನುಭವಿಗಳನ್ನು ಕಡೆಗಣಿಸಲಾಗಿದೆ. ಮನೆಗೆ ನೀರು ನುಗ್ಗಿ ಹಾನಿ ಆದಲ್ಲಿ ನೀಡುವ 10 ಸಾವಿರ ರೂ. ಪರಿಹಾರ ಅಧಿ ಕಾರಿಗಳು ಮತ್ತು ರಾಜಕೀಯ ಮುಖಂಡರ ಜೇಬನ್ನು ಸೇರಿದೆ ಎಂದು ರೈತ ಪರ ಸಂಘಟನೆಗಳ ಆರೋಪವಾಗಿದೆ.
ನೆರೆ ಸಂತ್ರಸ್ತರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯ ಅಧಿ ಕಾರಿಗಳೊಂದಿಗೆ ಚರ್ಚಿಸಿ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು.
ಮಹೇಳ ಕುಮಠಳ್ಳಿ, ಶಾಸಕರು.
ನಾನು ನೂತನವಾಗಿ ತಹಶೀಲ್ದಾರ್ ಹುದ್ದೆ ಅಲಂಕರಿಸಿದ್ದು, ಹಿಂದೆ ಆದ ತಪ್ಪುಗಳನ್ನು ಸರಿ ಪಡಿಸಿ ನಿಜವಾದ ಸಂತ್ರಸ್ತರ ನೆರವಿಗೆ ನಿಲ್ಲುತ್ತೇನೆ.
ಸುರೇಶ ಮುಂಜೆ, ತಹಶೀಲ್ದಾರ್
*ವಿಜಯಕುಮಾರ ಅಡಹಳ್ಳಿ.