Advertisement

ಸಂತ್ರಸ್ತರಿಗೆ ಬಿಜೆಪಿ ಜನಪ್ರತಿನಿಧಿಗಳ 2 ತಿಂಗಳ ವೇತನ

06:00 AM Aug 20, 2018 | Team Udayavani |

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಮಳೆಹಾನಿಯಿಂದ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಸಹಾಯವಾಗುವಂತೆ ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

Advertisement

ಭಾನುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಶಾಸಕರು ಮತ್ತು ಪಾಲಿಕೆ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ತಿಳಿಸಿದರು.

ಕೊಡಗಿನ ಜನರಿಗೆ 15 ದಿನಕ್ಕೆ ಬೇಕಿರುವ ತುರ್ತು ಅಗತ್ಯ ವಸ್ತುಗಳನ್ನು ಬೆಂಗಳೂರು ಬಿಜೆಪಿಯಿಂದ ಸೋಮವಾರ ಮಧ್ಯಾಹ್ನ ಕೊಡಗಿಗೆ ಕೊಂಡೊಯ್ಯಲಾಗುತ್ತದೆ. ಇದರ ಜತೆಗೆ ಕೊಡಗು ಪುನರ್‌ನಿರ್ಮಾಣಕ್ಕೆ ಪೂರಕವಾಗುವಂತೆ ಬೆಂಗಳೂರು ನಗರದ ಬಿಜೆಪಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಪಾಲಿಕೆ ಸದಸ್ಯರು ಎರಡು ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ. ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿಯವರು ಶೀಘ್ರವೇ ಮುಖ್ಯಮಂತ್ರಿ ಹಾಗೂ ಮೇಯರ್‌ ಭೇಟಿ ಮಾಡಿ ಈ ಸಂಬಂಧ ಪತ್ರ ನೀಡಲಿದ್ದಾರೆ ಎಂದು ವಿವರಿಸಿದರು.

ಕೊಡಗಿನಲ್ಲಿ ಪರಿಹಾರ ಕಾರ್ಯ ಸಂಬಂಧ ಮುಂದೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಪಕ್ಷದ ಹಿರಿಯರು  ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅದರಂತೆ ನಾವು ನಡೆದುಕೊಳ್ಳಲಿದ್ದೇವೆ. ತುರ್ತಾಗಿ ಏನೇನೂ ಮಾಡಬೇಕೋ ಅದನ್ನೆಲ್ಲ  ಮಾಡುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕರಾದ ಅಪ್ಪಚ್ಚು ರಂಜನ್‌, ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸೇರಿದಂತೆ ಸಾವಿರು ಕಾರ್ಯಕರ್ತರು ಕೊಡಗಿನಲ್ಲಿ ಪರಿಹಾರ ಕಾರ್ಯ ನಿರತರಾಗಿದ್ದಾರೆ ಎಂದರು.

230 ಟನ್‌ ಸಾಮಗ್ರಿ:
ಬೆಂಗಳೂರಿನ ಜನರು ಕಾವೇರಿ ನೀರು ಕುಡಿಯುತ್ತಾರೆ. ಅಲ್ಲಿನ ಪ್ರವಾಸಿ ತಾಣಕ್ಕೆ ಸದಾ ಹೋಗುತ್ತಿರುತ್ತಾರೆ. ಸೈನ್ಯಕ್ಕೆ ರಾಜ್ಯದಿಂದ ಹೆಚ್ಚು ಸೈನಿಕರನ್ನು ನೀಡಿದ ನಾಡು ಈಗ ಸಂಕಷ್ಟದಲ್ಲಿದೆ. ಮಳೆಹಾನಿಗೆ ಇಡೀ ಕೊಡಗು ಪರಿತಪಿಸುತ್ತಿದೆ. ಅದರ ಮೂಲ ಸ್ವರೂಪ ಪುನರ್‌ ನಿರ್ಮಾಣಕ್ಕೆ ಕನಿಷ್ಠ ಐದಾರು ವರ್ಷ ಬೇಕಾಗುತ್ತದೆ. ಬಿಜೆಪಿಯ ಬೆಂಗಳೂರಿನ ಶಾಸಕರು, ಪಾಲಿಕೆ ಸದಸ್ಯರು ಸಹಿತವಾಗಿ ಕಾರ್ಯಕರ್ತರು ಅಗತ್ಯ ಸಹಾಯ, ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಕೊಡಗಿಗೆ ಬೇಕಾದ ಅಗತ್ಯ ವಸ್ತು ಸಂಗ್ರಹಿಸಲು ಶಾಸಕರಿಗೆ ಹಾಗೂ ಪಾಲಿಕೆ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.

Advertisement

ಸೋಮವಾರ ಮಧ್ಯಾಹ್ನ 15ರಿಂದ 20 ಟ್ರಕ್‌ಗಳಲ್ಲಿ ಅಕ್ಕಿ, ಬೇಳೆ, ರವ, ಬಟ್ಟೆ, ಕಂಬಳಿ, ಚಾಪೆ, ಇತರೆ ಆಹಾರ ಪದಾರ್ಥಗಳನ್ನು ಕೊಡಗಿಗೆ ಸಾಗಿಸಿ, ಅಲ್ಲಿ ದಾಸ್ತಾನು ಮಾಡಲಿದ್ದೇವೆ. ನಗರದ ಭಾಗ್ಯಲಕ್ಷ್ಮೀ ಟ್ರೇಡರ್ ಜತೆ ಮಾತುಕತೆ ಮಾಡಿದ್ದೇವೆ. ಎಲ್ಲ ರೀತಿಯ ಸಾಮಗ್ರಿ ಒದಗಿಸುವುದಾಗಿ ಒಪ್ಪಿಕೊಂಡಿದ್ದಾರೆ. ಸೇವಾ ಭಾರತಿ ಹೆಸರಿನಲ್ಲಿ ಚೆಕ್‌ ನೀಡುವ ಮೂಲಕ ಕಾರ್ಯಕರ್ತರು, ಸಾರ್ವಜನಿಕರು ಸಹಾಯ ಮಾಡಬಹುದು ಎಂದರು.

ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಪೋರೇಟರ್‌ ಹಾಗೂ ಶಾಸಕರು ತಕ್ಷಣವೇ 11.50 ಲಕ್ಷ ರೂ. ಸಂಗ್ರಹಿಸಿದ್ದಾರೆ. ಇನ್ನು ಹೆಚ್ಚಿನ ಹಣ ಸಂಗ್ರಹಿಸಿ, ಕೊಡಗಿಗೆ ಬೇಕಾದ ಎಲ್ಲ ಸೌಲಭ್ಯ ಇಲ್ಲಿಂದಲೇ ಒದಗಿಸಲಿದ್ದೇವೆ. ಕೇಂದ್ರ ಸಚಿವ ಅನಂತ ಕುಮಾರ್‌ ಅವರು ತಲಾ ಒಂದು ಲೋಡ್‌ ಅಕ್ಕಿ ಹಾಗೂ ಬೇಳೆ ನೀಡಲಿದ್ದಾರೆ. ಬೆಂಗಳೂರಿನ ಗಾರ್ಮೆಂಟ್ಸ್‌ಗಳಿಂದ ಹೊಸ ಉಡುಗಳನ್ನು ಕೊಂಡೊಯ್ಯಲಿದ್ದೇವೆ ಎಂದು ವಿವರಿಸಿದರು.

ಎಲ್ಲ ಶಾಸಕರು ಹಾಗೂ ಕಾರ್ಯಕರ್ತರು ಈ ಸಂಬಂಧ ಸಕ್ರಿಯರಾಗಿದ್ದಾರೆ. ಪಕ್ಷದ ಹಿತೈಷಿಗಳಿಗೂ ಕರೆ ನೀಡಿದ್ದೇವೆ. ಸಾವಿರಾರೂ ಕಾರ್ಯಕರ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೊಡಗಿನ ಜನರಿಗೆ 15 ದಿನಕ್ಕೆ ತುರ್ತಾಗಿ ಬೇಕಿರುವ ಎಲ್ಲ ಅವಶ್ಯಕತೆ ಪೂರೈಸಲಿದ್ದೇವೆ. ಸೋಮವಾರ  ಮಧ್ಯಾಹ್ನ ನ್ಯಾಷನಲ್‌ ಕಾಲೇಜಿನ ಮೈದಾನದಿಂದ ಸಾಮಗ್ರಿಗಳನ್ನು ಟ್ರಕ್‌ನಲ್ಲಿ ತುಂಬಿಸಿಕೊಂಡು ಸ್ವತಃ ನಾನೇ ಹೋಗಲಿದ್ದೇನೆ ಎಂದು ಹೇಳಿದರು.

ಶಾಸಕರಾದ ಎಸ್‌.ರಘು, ಸತೀಶ್‌ ರೆಡ್ಡಿ, ವಿ.ಸೋಮಣ್ಣ, ವಿಧಾನ ಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌, ತೇಜಸ್ವಿನಿ ಗೌಡ, ಬಿಜೆಪಿ ಮುಖಂಡರಾದ ತಾರಾ ಅನುರಾಧ, ಎಸ್‌.ಮುನಿರಾಜು, ಮಂಜುಳಾ, ಸುಬ್ಬಣ್ಣ, ಪದ್ಮನಾಭರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ಬೆಂಗಳೂರಿನ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಎರಡು ತಿಂಗಳ ವೇತನ ಕೊಡಗಿನ ನೆರೆ ಪರಿಹಾರಕ್ಕೆ ನೀಡಲು ನಿರ್ಧರಿಸಿದ್ದಾರೆ. ಪಕ್ಷದ ಇತರ ಪದಾಧಿಕಾರಿಗಳು ಕನಿಷ್ಠ 10 ಸಾವಿರ ರೂ. ನೆರೆ ಸಂತ್ರಸ್ತರಿಗೆ ನೀಡುವಂತಾಗಲಿ.
– ಆರ್‌.ಅಶೋಕ, ಮಾಜಿ ಉಪ ಮುಖ್ಯಮಂತ್ರಿ

ತಲಾ ಒಂದು ಲಕ್ಷ ಪರಿಹಾರ
ಬೆಂಗಳೂರು
: ಮಹಾ ಮಳೆಗೆ ನಲುಗಿರುವ ಕೇರಳ ಹಾಗೂ ಕೊಡಗಿಗೆ ಅಖೀಲ ಭಾತರ ವೀರಶೈವ ಮಹಾಸಭೆ ವತಿಯಿಂದ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಅಖೀಲ ಭಾತರ ವೀರಶೈವ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿಈಶ್ವರ್‌ ಖಂಡ್ರೆ, ಕೇರಳ ಸರ್ಕಾರಕ್ಕೆ ಒಂದು ಲಕ್ಷ ಹಾಗೂ ಕೊಡಗು ಜಿಲ್ಲಾಡಳಿತಕ್ಕೆ ಒಂದು ಲಕ್ಷ ರೂ.ವನ್ನು ಮಹಾಸಭೆ ವತಿಯಿಂದ ದೇಣಿಗೆ ನೀಡಲಾಗಿದ್ದು, ಪರಿಹಾರ ಕಾರ್ಯಕ್ಕೆ ಮಹಾಸಭೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕರ ಒಂದು ದಿನ ವೇತನ
ಬೆಂಗಳೂರು:
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಒಂದು ದಿನದ ವೇತನವನ್ನು ಕೊಡಗಿನ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಳಿಸಿದೆ.
ಅದೇ ರೀತಿ ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜಿನ ಪ್ರಾಧ್ಯಾಪಕರೂ ತಮ್ಮ ಒಂದು ದಿನದ ವೇತನವನ್ನು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗಾಗಿ ನೀಡಿದ್ದಾರೆ.

ನೆರೆ ಸಂತ್ರಸ್ತರಿಗೆ ಕಳುಹಿಸಬೇಕಾದ ಪದಾರ್ಥಗಳು
ಬಟ್ಟೆ

– ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಹೊಸ ಬಟ್ಟೆಗಳು
– ಚಿಕ್ಕ ಹಾಗೂ ದೊಡ್ಡದಾದ ಟವಲ್‌
– ಬೆಡ್‌ಶೀಟ್‌ ಹಾಗೂ ಬ್ಲಾಂಕೆಟ್ಸ್‌
ಸ್ಯಾನಿಟರಿ ವಸ್ತುಗಳು
– ಶೌಚಾಲಯ ಕಿಟ್‌
– ಸೋಪ್‌
– ಟೂತ್‌ಪೇಸ್ಟ್‌
– ಬ್ರಷ್‌
– ಸ್ಯಾನಿಟರಿ ನ್ಯಾಪ್‌ಕೀನ್‌
ಇತರೆ ವಸ್ತುಗಳು
– ಟಾರ್ಚ್‌
– ಬೆಂಕಿಪೊಟ್ಟಣ
– ಮೇಣದಬತ್ತಿ
– ಡೆಟಾಯಿಲ್‌
– ಪೆನಾಯಿಲ್‌
– ಫ್ಲೋರ್‌ ಕ್ಲೀನರ್‌
– ಟಾಯ್ಲೆàಟ್‌ ಕ್ಲೀನರ್‌
– ಸೊಳ್ಳೆಬತ್ತಿ
– ಛತ್ರಿ  ಇತರೆ ದಿನಬಳಕೆ ಸಾಮಗ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next