Advertisement

ಪತ್ನಿ ಕೊಲೆಗೈದ ಹಂತಕನಿಗೆ ಜೀವಾವಧಿ ಶಿಕ್ಷೆ

06:08 AM Feb 28, 2019 | Team Udayavani |

ಬೆಂಗಳೂರು: ಪತ್ನಿಯನ್ನು ಕೊಲೆಮಾಡಿದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಹಾಗೂ 15 ಸಾವಿರ ರೂ. ದಂಡ, ಕೊಲೆಯ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆತನ ಸ್ನೇಹಿತನಿಗೆ ಐದುವರ್ಷ ಜೈಲು, ಐದು ಸಾವಿರ ರೂ ದಂಡ ವಿಧಿಸಿ ನಗರದ 69ನೇ ಸೆಷನ್ಸ್‌ ಕೋರ್ಟ್‌ ಬುಧವಾರ ಆದೇಶಿಸಿದೆ.

Advertisement

 ಗೊಟ್ಟಿಗೆರೆ ನಿವಾಸಿ ವಿನಯ್‌ ಕುಮಾರ್‌ ಹಾಗೂ ಸೋಮಶೇಖರ್‌ ಶಿಕ್ಷೆಗೆ ಗುರಿಯಾದವರು. ಆರೋಪಿ ವಿನಯ್‌ ಕುಮಾರ್‌ ತನ್ನ ಪತ್ನಿ ವನಜಾಕ್ಷಿಯನ್ನು 2011ರ ಜುಲೈ 22ರಂದು ತನ್ನ ಸ್ನೇಹಿತ ಸೋಮಶೇಖರ್‌ ಜತೆಗೂಡಿ ಕೊಲೆಮಾಡಿದ್ದ. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಹುಳಿಮಾವು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. 

ವಿಚಾರಣೆ ವೇಳೆ ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳು ಹಾಗೂ ಪ್ರಾಸಿಕ್ಯೂಶನ್‌ ವಾದವನ್ನು ಪುರಸ್ಕರಿಸಿದ 69ನೇ ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶರಾದ ಬಿ. ನಂದಕುಮಾರ್‌, ಆರೋಪಿಗಳು ಕೊಲೆಕೃತ್ಯದ ಅಪರಾಧಿಗಳು ಎಂದು ಅಭಿಪ್ರಾಯಟ್ಟಿದ್ದಾರೆ. ಮೊದಲ ಆರೋಪಿ ವಿನಯ್‌
ಕುಮಾರ್‌ಗೆ ಜೀವಾವಧಿ ಹಾಗೂ 15 ಸಾವಿರ ರೂ ದಂಡ ಹಾಗೂ 2ನೇ ಆರೋಪಿಯಾದ ಸೋಮಶೇಖರ್‌ಗೆ ಐದು ವರ್ಷ ಜೈಲು ಹಾಗೂ ಐದುಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್‌ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಪ್ರಶಾಂತ್‌ ಎಸ್‌ ತೋರಗಲ್‌ ವಾದಿಸಿದ್ದರು.

ಮಸಾಲೆಪುರಿಯಲ್ಲಿ ನಿದ್ರೆ ಮಾತ್ರೆ: 2005ರಲ್ಲಿ ವನಜಾಕ್ಷಿಯವರನ್ನು ವಿನಯ್‌ಕುಮಾರ್‌ ವಿವಾಹವಾಗಿದ್ದ. ದಂಪತಿಗೆ ಒಂದು ವರ್ಷದ ಗಂಡು ಮಗುವಿತ್ತು. ವನಜಾಕ್ಷಿಯವರಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ದಂಪತಿ ವಾಸಿಸಲು ವನಜಾಕ್ಷಿಯರ ತಂದೆ ಮನೆ ಕೊಡಿಸಿದ್ದರು, ಜೀವನೋಪಾಯಕ್ಕಾಗಿ ಪ್ರಾವಿಷನ್‌ ಸ್ಟೋರ್‌ ಕೂಡ ಹಾಕಿಸಿಕೊಟ್ಟಿದ್ದರು. 

ಜಮೀನು ವ್ಯವಹಾರಕ್ಕೆ ಇಳಿದಿದ್ದ ವಿನಯ್‌ ಕುಮಾರ್‌ ಪತ್ನಿ ವನಾಜಾಕ್ಷಿಯವರ ಚಿನ್ನಾಭರಣಗಳನ್ನು ಅಡವಿಟ್ಟಿದ್ದ. ಒಡವೆ ಬಿಡಿಸಿಕೊಡುವಂತೆ ಪತ್ನಿ ಕೇಳುತ್ತಿದ್ದರು. ಈ ವಿಚಾರಕ್ಕೆ ಸಿಟ್ಟುಮಾಡಿಕೊಂಡಿದ್ದ ಆರೋಪಿ ಪತ್ನಿಯನ್ನು ಕೊಲೆಮಾಡುವ ನಿರ್ಧಾರಕ್ಕೆ ಬಂದಿದ್ದ, ಈ ಕೃತ್ಯಕ್ಕೆ ಸಹಕರಿಸಿದರೆ ತನಗೆ ನೀಡಬೇಕಾಗಿರುವ 30 ಸಾವಿರ ರೂ. ಸಾಲ ವಾಪಸ್‌ ಕೊಡುವುದು ಬೇಡ ಎಂದು ಸೋಮಶೇಖರ್‌ಗೆ ತಿಳಿಸಿದ್ದ. ಹೀಗಾಗಿ ಸೋಮಶೇಖರ್‌ ಕೃತ್ಯಕ್ಕೆ ಒಪ್ಪಿದ್ದ.

Advertisement

ವಿನಯ್‌ಕುಮಾರ್‌ 2011ರ ಜು. 22ರಂದು ರಾತ್ರಿ ಮಸಾಲೆಪುರಿ ಕಟ್ಟಿಸಿಕೊಂಡು ಬಂದು ಅದಕ್ಕೆ ನಿದ್ರೆಮಾತ್ರೆ ಬೆರೆಸಿ ಪತ್ನಿ ವನಜಾಕ್ಷಿಗೆ ನೀಡಿದ್ದ, ಮಸಾಲೆಪುರಿ ಸೇವಿಸಿದ್ದ ಆಕೆ ಪ್ರಜ್ಞೆ ತಪ್ಪಿಬಿದ್ದಿದ್ದರು. ಪೂರ್ವ ನಿಗದಿಯಂತೆ ಸ್ನೇಹಿತ ಸೋಮಶೇಖರ್‌ ನನ್ನು ಕಾರು ತೆಗೆದುಕೊಂಡು ಬರುತ್ತಿದ್ದಂತೆ
ವನಜಾಕ್ಷಿಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಪುಂಗನೂರಿನ ಬಳಿ ಬಂದಿದ್ದರು. ಬಳಿಕ ಟೆಲಿಫೋನ್‌ ವೈರ್‌ನಿಂದ ಆಕೆಯ ಕತ್ತುಬಿಗಿದು ಕೊಲೆಗೈದು. ಆರೋಪಿಗಳು ಶವ ಕಾಣದಂತೆ ಕೆರೆ ಸೇತುವೆಗೆ ಹಾಕಲಾಗಿದ್ದ ಪೈಪ್‌ನಲ್ಲಿಟ್ಟು ವಾಪಸ್‌ ಬಂದಿದ್ದರು. 

ಮಾಟಮಂತ್ರ ನಾಟಕ ಅದೇ ದಿನ ರಾತ್ರಿ ಮನೆಗೆ ಬಂದ ವಿನಯ್‌ ಕುಮಾರ್‌, ಮನೆಯ ಹಾಲ್‌ನಲ್ಲಿ ಕುಂಕುಮ ಚೆಲ್ಲಿ ಮೊಟ್ಟೆಗಳನ್ನು ಹೊಡೆದಿದ್ದ. ನಿಂಬೆ ಹಣ್ಣು ಕುಯ್ದು ವಾಮಾಚಾರದ ಚಿತ್ರಣ ಬಿಡಿಸಿದ್ದ. ಮಾರನೇ ದಿನ ಸ್ಥಳೀಯರಿಗೆ ಅಪರಿಚಿತದ ದುಷ್ಕರ್ಮಿಗಳು ವಾಮಾಚಾರ ಮಾಡಿಸಿ ಪತ್ನಿಯನ್ನು ಕರೆದೊಯ್ದಿದ್ದಾರೆ ಎಂದು ಕಥೆಕಟ್ಟಿದ್ದ. ಮಗಳ ನಾಪತ್ತೆ ಕುರಿತು ವನಜಾಕ್ಷಿಯವರ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಅನುಮಾನದ ಮೇರೆಗೆ ವಿನಯ್‌ಕುಮಾರ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯ ಬಾಯ್ಬಿಟ್ಟಿದ್ದ ಎಂದು ಸರ್ಕಾರಿ ಅಭಿಯೋಜಕರಾದ ಪ್ರಶಾಂತ್‌ ಎಸ್‌ ತೋರಗಲ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next