Advertisement

ಬಹುಮುಖ ಸಾಹಿತ್ಯ ಸಾಧನೆ ದಿ|ಕೆ.ಟಿ. ವೇಣುಗೋಪಾಲ್‌

02:20 AM Jul 16, 2017 | Harsha Rao |

ಮಾತೃ ಭಾಷೆ ಮತ್ತು ಮನೆ ಮಾತು ಮಲೆಯಾಳವಾಗಿದ್ದು ಕನ್ನಡದಲ್ಲಿ ವಿದ್ಯಾರ್ಜನೆಗೈದು, ಹೊರನಾಡಿನಲ್ಲಿ ನೆಲೆಸಿ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತು ಪತ್ರಿಕಾ ರಂಗಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿ ಕಾಸರಗೋಡಿನ ಸಾಹಿತ್ಯಲೋಕಕ್ಕೆ ಮಹತ್ಕಿàರ್ತಿಯನ್ನು ತಂದುಕೊಟ್ಟವರು ಹಿರಿಯ ಸಾಹಿತಿ, ಪತ್ರಕರ್ತ ದಿ| ಕೆ.ಟಿ. ವೇಣುಗೋಪಾಲ್‌ ಅವರು.

Advertisement

ಬಾಲ್ಯಬದುಕು : ಕಾಸರಗೋಡು ತಾಲೂಕು ತಳಂಗ‌ರೆಯ ಪ್ರತಿಷ್ಠಿತ ಬಿಲ್ಲವ ಸಮುದಾಯದ ಪುಂಜಂಕೋಡಿ ದಿ|ಕೃಷ್ಣ ಹಾಗೂ ನಾರಾಯಣಿ ದಂಪತಿಯ ಪುತ್ರರಾಗಿ ದಿ| ಕೆ.ಟಿ. ವೇಣುಗೋಪಾಲರು 1947 ಮೇ 22ರಂದು ಜನಿಸಿದರು. ಕೆ.ಟಿ.ವೇಣುಗೋಪಾಲ್‌ ಎಂದೇ ಪ್ರಖ್ಯಾತರಾದ ಅವರ ಹೆಸರಿನ ಮುಂದಿರುವ ಕೆ.ಟಿ. ಎಂದರೆ ಕಾಸರಗೋಡು – ತಳಂಗರೆ ಎಂದಾಗಿದೆ. ಸರಸ್ವತಿ ಸಹೋದರಿ ಮತ್ತು ಕೆ.ಟಿ. ರಮೇಶ ಸೋದರರು.

ದಿ| ಕೆ.ಟಿ. ವೇಣುಗೋಪಾಲ ಅವರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕಾಸರಗೋಡಿನ ಮಡೋನಾ ಶಾಲೆಯಲ್ಲೂ ಹೆ„ಸ್ಕೂಲು ಶಿಕ್ಷಣವನ್ನು ಕಾಸರಗೋಡಿನ ಸರಕಾರಿ ಹೆ„ಸ್ಕೂಲಿನಲ್ಲೂ ಪೂರೈಸಿದರು. ಪದವಿ ಶಿಕ್ಷಣವನ್ನು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಪೂರೈಸಿ ಮುಂಬೈಗೆ ತೆರಳಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು. ಅಲ್ಲಿ ಖಾಸಗಿ ಯಾಗಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಪತ್ರಿಕಾ ಜೀವನ‌
ದಿ| ವೇಣುಗೋಪಾಲರು ಮುಂಬ ಯಿಯಲ್ಲಿ ವಾಸ್ತವ್ಯ ಹೂಡಿದ ಮೇಲೆ ಪತ್ರಿಕಾ ಜೀವನ ಆರಂಭಿಸಿದರು. ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾಗಿದ್ದ ನಿರಂಜನ್‌ ಅವರಿಂದ ಪ್ರಭಾವಿತ ರಾಗಿ ತಾನೂ ಅವರಂತೆ ಪೂರ್ಣ ವಾಗಿ ಬರೆಹಗಾರನಾಗಬೇಕೆಂದು ಬಯಸಿದ್ದರು. ಮಣಿಪಾಲ ಮುದ್ರಣ ಮತ್ತು ಪ್ರಕಾಶನ ಸಂಸ್ಥೆಯ “ಉದಯ ವಾಣಿ’ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಯಿಂದಲೇ “ಮುಂಬಯಿ ಪತ್ರ’ ಅಂಕಣದ ಮೂಲಕ ಪತ್ರಿಕಾರಂಗಕ್ಕೆ ಮೊದಲ ಹೆಜ್ಜೆಯಿಟ್ಟರು. ಮುಂಬಯಿ ಮಹಾನಗರದ ಬದುಕಿನ ಸಿಹಿಕಹಿ ತುಣುಕುಗಳು, ಅಲ್ಲಿ ನೆಲೆಸಿ ಸಾಧನೆ ಮಾಡುತ್ತಿರುವ ಕನ್ನಡಿಗರ ಸಾಹಸಗಳು ಈ ಪತ್ರಗಳ ಮೂಲಕ ಒಳನಾಡಿನ ಓದುಗರನ್ನು ತಲುಪತೊಡಗಿತು. ಮುಂದೆ ಉದಯವಾಣಿ ಪತ್ರಿಕೆಯ ಪ್ರತಿನಿಧಿಯಾಗಿ ನಿಯುಕ್ತಗೊಂಡ ದಿ| ವೇಣುಗೋಪಾಲರು ಸ್ವತಂತ್ರ ಪತ್ರಕರ್ತ ರಾಗಿ ಕಾರ್ಯನಿರತ ರಾದರು.

ತುಷಾರ, ತರಂಗ, ರೂಪತಾರಾ ಪತ್ರಿಕೆಗಳಲ್ಲದೆ ಪ್ರಜಾವಾಣಿ, ಸುಧಾ, ಮಯೂರ ಮೊದಲಾದ ಪತ್ರಿಕೆ ಗಳಲ್ಲಿಯೂ ಅವರ ಸಚಿತ್ರಲೇಖನ ಗಳು, ಕತೆಗಳು, ಸಂದರ್ಶನಗಳು ಪ್ರಕಟಗೊಳ್ಳತೊಡಗಿದವು. ಅವರು “ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ಬರೆಯುತ್ತಿದ್ದ ಕನ್ನಡ ನಾಟಕಗಳ ವಿಮರ್ಶೆ ಮುಂಬಯಿಗರ ಮೆಚ್ಚುಗೆ ಗಳಿಸಿತ್ತು. ರೂಪತಾರಾ ಪತ್ರಿಕೆಗಾಗಿ ಅವರು ನಡೆಸುತ್ತಿದ್ದ ಹಿಂದಿ ಚಿತ್ರರಂಗದ ತಾರೆಯರ ಸಂದರ್ಶನ ಮತ್ತು ಲೇಖನಗಳು ಜನಪ್ರಿಯವಾಗಿದ್ದವು. ದಿ| ಕೆ.ಟಿ. ವೇಣುಗೋಪಾಲ್‌ “ವಂಶ ಗೋವಿಂದಾ’, “ವಿ. ಗೋಪಾಲ್‌’, “ಕೇಟಿ’ ಎನ್ನುವ ಹೆಸರಿನಲ್ಲಿಯೂ ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ರೂಪತಾರಾ ಪತ್ರಿಕೆಯಲ್ಲಿ ಹಿಂದಿ ಚಿತ್ರ ರಂಗದಲ್ಲಿ ಕನ್ನಡಿಗರು ಲೇಖನ ಸರಣಿಯ ಮೂಲಕ ಸಾಧನೆ ಮಾಡಿದ ಪ್ರತಿಭೆಗಳನ್ನು ಓದುಗರಿಗೆ ಪರಿಚಯಮಾಡಿದ್ದಾರೆ. ತಮ್ಮ ಪತ್ರಿಕಾಜೀವನವನ್ನು ರೂಪಿಸಲು ಕಾರಣರಾದ ಮೂವರು ಆಚಾರ್ಯರು, “ಪ್ರಕಾಶ’ ಮತ್ತು ‘ಉದಯವಾಣಿ’ ಪುರವಣಿ ಸಂಪಾದಕರಾಗಿದ್ದ ಬನ್ನಂಜೆ ಗೋವಿಂದಾಚಾರ್ಯ, ‘ಕಸ್ತೂರಿ’ ಮಾಸ ಪತ್ರಿಕೆಯ ಸಹ ಸಂಪಾದಕ ಪಾ.ವೆಂ. ಆಚಾರ್ಯ ಮತ್ತು “ಉದಯವಾಣಿ’ ಪತ್ರಿಕೆಯ ಸಹ ಸಂಪಾದಕ ಬನ್ನಂಜೆ ರಾಮಾ ಚಾರ್ಯ ಅವರನ್ನು ದಿ| ವೇಣುಗೋಪಾಲ್‌ ಗೌರವ‌ದೊಂದಿಗೆ ಸದಾ ಸ್ಮರಿಸಿಕೊಳ್ಳುತ್ತಿದ್ದರು.

Advertisement

ಉದಯವಾಣಿ ಮುಂಬಯಿ ಆವೃತ್ತಿ ತೊಡಗುವ ವೇಳೆ ದಿ| ವೇಣುಗೋಪಾಲರು ತಮ್ಮ ಖಾಸಗಿ ಕಂಪನಿ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಪತ್ರಕರ್ತನಾಗಿ ಮಣಿಪಾಲ ಮುದ್ರಣ ಮತ್ತು ಪ್ರಕಾಶನ ಸಂಸ್ಥೆ ಸೇರಿಕೊಂಡರು. ಉದಯ ವಾಣಿಯ ಮುಂಬಯಿ ಆವೃತ್ತಿ ಮುಖ್ಯಸ್ಥರಾಗಿ ನಿಯುಕ್ತಗೊಂಡ ಅವರು ಪತ್ರಿಕೆಯ ಏಳಿಗೆಗಾಗಿ ಶ್ರಮಿಸಿದರು. ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ನಿಲು ವನ್ನು ತಮ್ಮದ್ದಾಗಿಸಿಕೊಂಡು ಪತ್ರಿಕಾ ಧರ್ಮವನ್ನು ಅನುಸರಿಸಿ ನಡೆದ ದಿ| ವೇಣುಗೋಪಾಲರನ್ನು ಒಳ ಮತ್ತು ಹೊರನಾಡಿನ ಓದುಗರು ಈಗಲೂ ಗೌರವದಿಂದ ನೆನಪಿಸಿಕೊಳ್ಳುತ್ತಾರೆ.

ಮುಂಬಯಿಯಲ್ಲಿ ನೆಲೆಸಿದ್ದ ಕನ್ನಡದ ಖ್ಯಾತ ಸಾಹಿತಿಗಳಾದ ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಬಿ.ಎ. ಸನದಿ, ವ್ಯಾಸರಾವ್‌ ನಿಂಜೂರು, ರಾಮಚಂದ್ರ ಉಚ್ಚಿಲ್‌, ರಂಗಭೂಮಿಯ ಹಿರಿಯ ನಾಟಕಕಾರ ಕೆ.ಜೆ. ರಾವ್‌, ಸದಾನಂದ ಸುವರ್ಣ, ಖ್ಯಾತ ಛಾಯಾಗ್ರಾಹಕರಾಗಿದ್ದ ಎನ್‌.ಸಿ. ದೇಸಾಯಿ, ಬಿ.ಕೆ.ಸನಿಲ್‌ ಮೊದಲಾ ದವರು ದಿ| ಕೆ.ಟಿ. ವೇಣುಗೋಪಾಲರ ಆತ್ಮೀಯ ಬಳಗದಲ್ಲಿದ್ದರು.

2007ರಲ್ಲಿ ಮಣಿಪಾಲ ಮುದ್ರಣ ಮತ್ತು ಪ್ರಕಾಶನ ಸಂಸ್ಥೆಯಿಂದ ನಿವೃತ್ತಿ ಪಡೆದರು. ಆದರೆ ಅವರ ಬರವಣಿಗೆ ಮುಂದುವರಿದೇ ಇತ್ತು. 1997ರಲ್ಲಿ ಬಿಡುಗಡೆಗೊಂಡ ದಿ| ವೇಣುಗೋಪಾಲರ ಕಥಾ ಸಂಕಲನ “ದೇವಕಿಯಮ್ಮನ ತರವಾಡು ಮನೆ’ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದೆ. “ಮುಂಬಯಿ ಪತ್ರ’ ಅಂಕಣ ಬರಹ ಮೂರು ದಶಕಗಳನ್ನು ದಾಟಿದಾಗ ಅವರು ಆಯ್ದ ಪತ್ರಗಳ “ಮುಂಬಯಿ ಪತ್ರ’ ಸಂಕಲನವು ಬಿಡುಗಡೆಗೊಂಡಿತು. ಅವರ ಸಂದರ್ಶನ ಲೇಖನಗಳ ಸಂಕಲನ “ಬಾಳ ಠಾಕ್ರೆ ಮತ್ತು ಇತರ ಸಂದರ್ಶನಗಳು’ 2008ರಲ್ಲಿ ಪ್ರಕಟಗೊಂಡಿತು. ಪತ್ನಿ ತುಳಸೀ ವೇಣುಗೋಪಾಲರ ಮತ್ತು ತಮ್ಮ ಆಯ್ದ ಕಥೆಗಳ ಸಂಕಲನ “ಜುಗಲ ಬಂದಿ’ಯನ್ನು ಹೊರತಂದಿದ್ದರು.

ಪ್ರಶಸ್ತಿ ಸಮ್ಮಾನಗಳು 
ಮುಂಬಯಿ ಕನ್ನಡಿಗರಿಗೆ ಕೇಟಿ ಎಂದೇ ಪರಿಚಿತರಾದ ದಿ| ವೇಣುಗೋಪಾಲರ ಸಾಹಿತ್ಯ ಸೇವೆಗಾಗಿ, ಪತ್ರಿಕಾ ಧರ್ಮದ ಋಜುತ್ವಕ್ಕಾಗಿ ಮುಂಬಯಿಯ ಕನ್ನಡ, ತುಳು, ಕೊಂಕಣಿ ಸಂಘಗಳೆಲ್ಲÉ ಅವರಿಗೆ ಗೌರವ ನೀಡಿ ಸಮ್ಮಾನಿಸಿವೆ. ಪ್ರಮುಖವಾಗಿ ಮುಂಬಯಿ ಕರ್ನಾಟಕ ಸಂಘ 2008ರ ‘ಸಾಧನಾ ಶಿಖರ’ ಗೌರವ ಪುರಸ್ಕಾರವಿತ್ತು ಗೌರವಿಸಿದೆ.
 ಮಂಗಳೂರಿನ ಬೋಳಾರು ಪದ್ಮನಾಭ – ಕೃಷ್ಣಮ್ಮ ದಂಪತಿಯರ ಸುಪುತ್ರಿ ಸಾಹಿತಿ,ಕತೆಗಾರ್ತಿ ತುಳಸಿಯವರನ್ನು ವಿವಾಹವಾದ ವೇಣುಗೋಪಾಲರು ಏಕಮಾತ್ರ ಪುತ್ರ ವಿಕಾಸ್‌ (ಎಚ್‌.ಎಸ್‌. ಬಿ. ಬ್ಯಾಂಕ್‌ ಪ್ರೊಜೆಕ್ಟ್ ಮೆನೇಜರ್‌), ಸೊಸೆ ರಿಚಾ ಶರ್ಮಾ, ಮೊಮ್ಮಗಳು ವೆನ್ಯಾ ಅವರೊಂದಿಗೆ ಸಂತƒಪ್ತ ಜೀವನ ನಡೆಸಿ 2009ರ ಮೇ 19ರಂದು ದೆ„ವಾಧೀನರಾದರು.

ಬಹುಮುಖ ಸಾಹಿತ್ಯ ಸಾಧನೆ 
ದಿ| ವೇಣುಗೋಪಾಲರು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಸಾಹಿತ್ಯದಲ್ಲಿ ಪ್ರೀತಿ, ಆಸಕ್ತಿ ಹೊಂದಿದ್ದರು. ಕನ್ನಡ, ಮಲಯಾಳ ಎರಡು ಭಾಷೆಗಳ ಸಾಹಿತ್ಯ ಓದಿಕೊಂಡು ಪ್ರಭಾವಿತರಾದರು. ಅವರ ಈ ಸಾಹಿತ್ಯ ಒಡನಾಟಕ್ಕೆ ಜತೆಯಾಗಿ ನಿಂತವರು ಅವರ ಸೋದರ ಮಾವ, ಕನ್ನಡದ ಸೃಜನಶೀಲ ಬರೆಹಗಾರರಾಗಿದ್ದ ದಿ| ಕೆ.ಟಿ. ಶ್ರೀಧರರು. ಕಾಸರಗೋಡಿನಲ್ಲಿ ವಿದ್ಯಾಭ್ಯಾಸದ‌ ದಿನಗಳಲ್ಲಿ ಕಾಸರಗೋಡು ಗಡಿ ವಿವಾದ ಬಿರುಸಿನಲ್ಲಿತ್ತು. ಹಿರಿಯ ರಾದ ಕಯ್ನಾರ ಕಿಞ್ಞಣ್ಣ ರೈ ಬಿ.ಎಸ್‌. ಕಕ್ಕಿಲ್ಲಾಯ. ಖಂಡಿಗೆ ಶ್ಯಾಮ ಭಟ್‌, ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ ಮೊದಲಾದ ಹಿರಿಯರನೇಕ‌ರು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಹೋರಾಟಕ್ಕಿಳಿದಿದ್ದು, ಹದಿಹರೆಯದ ವೇಣುಗೋಪಾಲರೂ ಅವರ ಜತೆ ಸೇರಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕನ್ನಡದ ಹಲವಾರು ಹಿರಿಯ ಸಾಹಿತಿಗಳ ಒಡನಾಟವೂ ಬರೆವಣಿಗೆಯ ಪ್ರೇರಣೆಯೂ ಸಿಗುವಂತಾಯಿತು. ಹೆ„ಸ್ಕೂಲಿನಲ್ಲಿರುವಾಗಲೇ ವೇಣು ಗೋಪಾಲ್‌ ಬರೆದ ಕಥೆಯೊಂದು ಬನ್ನಂಜೆ ಗೋವಿಂದಾಚಾರ್ಯ ಸಂಪಾದಕರಾಗಿದ್ದ “ಪ್ರಕಾಶ’ ಪತ್ರಿಕೆಯಲ್ಲಿ ಪ್ರಕಟವಾಗುವುದರೊಂದಿಗೆ ಅವರು ಸಾಹಿತ್ಯಲೋಕಕ್ಕೆ ಕಾಲಿರಿಸಿದರು.

ಕಾಸರಗೋಡು ಕನ್ನಡ ಚಳವಳಿಯ ಸಂದರ್ಭದಲ್ಲಿ   ಹಲವಾರು ಬರಹ ಗಾರರು, ಸೃಜನಶೀಲ ಲೇಖಕರು ಮೂಡಿಬಂದರು. ದಿ| ವೇಣುಗೋಪಾಲರು, ದಿ| ಕೆ.ಟಿ. ಶ್ರೀಧರ್‌ ಅವರ ಜತೆಯಾಗಿ ಮಲಯಾಳದ ಖ್ಯಾತ ಬರಹಗಾರರಾಗಿದ್ದ ಎಂ.ಟಿ. ವಾಸುದೇವನ್‌ ನಾಯರ್‌, ವೈಕಂ ಮುಹಮ್ಮದ್‌ ಬಶೀರ್‌, ತಕಝಿ ಶಿವಶಂಕರ ಪಿಳ್ಳೆ ಮೊದಲಾದವರ ಕತೆೆ ಮತ್ತು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಅವುಗಳು “ಕಸ್ತೂರಿ’ ಪತ್ರಿಕೆಯ ಪುಸ್ತಕ ವಿಭಾಗದಲ್ಲಿ ಪ್ರಕಟವಾಗಿವೆ. ಅಂತೆಯೇ ಅನಂತಮೂರ್ತಿ ಅವರ “ಸಂಸ್ಕಾರ’ ಕಾದಂಬರಿ ಕುರಿತು ಕಾಸರಗೋಡು ಲೇಖಕರ ಬಳಗವು ಪ್ರಪ್ರಥಮ ಬಾರಿಗೆ ಕಾಸರಗೋಡಿನಲ್ಲಿ ಒಂದು ಚರ್ಚೆ ಹಾಗೂ ಕೃತಿ ವಿಮರ್ಶೆ ಏರ್ಪಡಿಸಿ ಅದನ್ನು ಪುಸ್ತಕ ರೂಪದಲ್ಲೂ ತಂದರು. ಅದರಲ್ಲಿ ಕಾಸರಗೋಡಿನ ಹಲವಾರು ಹಿರಿಯ ಕವಿ-ಲೇಖಕ – ಸಾಹಿತಿಗಳ ಲೇಖನಗಳಿವೆ.

– ಕೇಳು ಮಾಸ್ತರ್‌, ಅಗಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next