ಬೆಂಗಳೂರು: ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಎಲ್ಲರಿಗೂ ಸಮಾಧಾನ ತಂದಿದೆ. ಸುಪ್ರೀಂ ಕೋರ್ಟ್ ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿ ತೀರ್ಪು ನೀಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಕೊಟ್ಟ ತೀರ್ಪನ್ನು ಎಲ್ಲ ಧರ್ಮಿಯರು ಸಮಾನ ಮನಸ್ಸಿನಿಂದ ಸ್ವೀಕರಿಸುವ ಬಗ್ಗೆ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ಇನ್ನೂ ಎರಡು ದಿನ ರಾಜ್ಯದ ಜನರು ಶಾಂತಿ ಕಾಪಾಡಬೇಕು. ನಮ್ಮ ಅಧಿಕಾರಿಗಳು ಶಾಂತಿ ಕಾಪಾಡುವಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ತೀರ್ಪು ಬಂದ ನಂತರ ಸಿಎಂಗೆ ಪ್ರಾಥಮಿಕ ಮಾಹಿತಿ ಒದಗಿಸಿದ್ದೇನೆ. ಈ ತೀರ್ಪು ಬಂದ ಮೇಲೆ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸದಂತೆ ಪ್ರಧಾನಿ ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ಎರಡೂ ಧರ್ಮಗಳ ಮುಖಂಡರು ಮನವಿ ಮಾಡಿದ್ದಾರೆ. ಅದರಂತೆ ಯಾರೂ ಸಂಭ್ರಮಾಚರಣೆ ಮಾಡಬಾರದು ಎಂದು ಮನವಿ ಮಾಡಿದರು.
144 ಸೆಕ್ಸೆನ್ ಇವತ್ತು ಪೂರ್ಣ ದಿನ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಇವತ್ತಿನ ಬೆಳವಣಿಗೆ ನೋಡಿಕೊಂಡು ಸೆಕ್ಷನ್ 144 ಮುಂದುವರೆಸುವ ಬಗ್ಗೆ ಚಿಂತನೆ ಮಾಡುತ್ತೇವೆ. ಮುಂದಿನ ಮೂರು ದಿನ ಈದ್ ಮಿಲಾದ್. ಟಿಪ್ಪು ಜಯಂತಿ ಆಚರಿಸುವುದರಿಂದ ಪೊಲೀಸ್ ಇಲಾಖೆ ಜಾಗೃತವಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಕ್ರೈಮ್ ವಿಭಾಗ ನಿರಂತರ ನಿಗಾ ವಹಿಸಿದೆ. ಕಳೆದ ಒಂದು ತಿಂಗಳಿಂದ ಈ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ. ಕೆಲವು ಸಂಘಟನೆಗಳು ಪ್ರಚೋದನೆ ಮಾಡುವ ಪ್ರಯತ್ನ ನಡೆಸುತ್ತಿವೆ ಅಂತಹ ಸಂಘಟನೆಗಳ ಮೇಲೆ ನಿರಂತರ ಕಣ್ಣಿಡಲಾಗಿದೆ ಎಂದು ಹೇಳಿದರು.