ಬಸವಕಲ್ಯಾಣ: ಆಧುನಿಕ ವಚನ ಮತ್ತು 12ನೇ ಶತಮಾನದ ವಚನಕ್ಕೂ ವ್ಯತ್ಯಾಸ ಇವೆ. ಅಂದಿನ ವಚನ ಅನುಭವ ಅನುಭಾವದಿಂದ ಕೂಡಿದ್ದವು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ| ಜಯದೇವಿ ಗಾಯಕವಾಡ ಹೇಳಿದರು.
ಸಸ್ತಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಪ್ರಭುಗಳ 33ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಿಲ್ಲಾ ಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ಸಾಂಸ್ಕೃತಿಕ ಹಾಗೂ ಹಾಸ್ಯ ಕಾರ್ಯಕ್ರಮ ಮತ್ತು ಆಧುನಿಕ ವಚನ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ದಿನಗಳಲ್ಲಿ ಆಧುನಿಕ ವಚನಗಳು ಪ್ರಚಲಿತ ವಿಷಯ ಆಧಾರಿತವಾದ ಚಿಂತನೆ ಕಂಡು ಬರುತ್ತಿದೆ. ವಚನಕಾರರಿಗೆ ವಚನಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತದೆ. ಸಾಮಾಜಿಕ ಚಿಂತನೆಯ ವಚನಗಳ ರಚನೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಆಧುನಿಕ ವಚನಗಳಲ್ಲಿ ದಲಿತ ಪ್ರಜ್ಞೆ ಕುರಿತು ಭೀಮಸೇನ ಗಾಯಕವಾಡ ಮಾತನಾಡಿ, ದಲಿತ ಪ್ರಜ್ಞೆ ಆಧುನಿಕ ವಚನಗಳಲ್ಲಿ ರಚನೆಯಾಗಿದ್ದು, ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಜೀವನ ಹೋರಾಟದ ಮೂಲಕ ಸ್ವಾಭಿಮಾನದ ವಿಚಾರಗಳು ವಚನಗಳಲ್ಲಿ ಕಂಡುಬರುತ್ತವೆ. ದಲಿತ ಪ್ರಜ್ಞೆಯ ವಿಚಾರಗಳನ್ನು ಹಂಚಿಕೊಂಡಿದ್ದು ಸ್ವಾಗತಾರ್ಹವಾಗಿದೆ ಎಂದು ನುಡಿದರು.
ಬೀದರ್ ಜಿಲ್ಲೆಯ ಆಧುನಿಕ ವಚನ ಸಾಹಿತ್ಯದ ಬಗ್ಗೆ ಡಾ| ರಘುಶಂಖ ಭಾತಂಬ್ರಾ ಮಾತನಾಡಿ, ಸಮ್ಮೇಳನಾಧ್ಯಕ್ಷರಾದ ಪ್ರೊ| ಮಾಣಿಕರಾವ್ ಬಿರಾದಾರ್ ಅವರು, ಬಹುಮುಖ ಪ್ರತಿಭಾವಂತರು. ಮಹಾರಾಷ್ಟ್ರದ ಉದಗಿರನಲ್ಲಿ ನೆಲೆಸಿ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಕಟ್ಟುವ ಕೆಲಸ ಮಾಡುತ್ತ ಬಂದಿರುವುದು ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದರು.
ನಂತರ ಡಾ| ಬಾಬುರಾವ್ ಚಿಮಕೋಟ ಮಾತನಾಡಿ, ನಡೆನುಡಿ ಒಂದಾದ ಆತ್ಮಶುದ್ಧಿ ಉಂಟಾಗುತ್ತದೆ. ಕವಿ, ವಚನಕಾರರು ಮೊದಲು ನನ್ನ ಸಾಧನೆ ಏನೂ ಇಲ್ಲ ಎಂದು ತಿಳಿದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ದೇಶಾಂಶ ಹುಡಗಿ ಮಾತನಾಡಿ, ಈ ವಚನಗಳು ಸಂಸ್ಕೃತಿ ಭಕ್ತಿ, ಆರಾಧನೆಗಳ ಮೂಲಕ ಸಾಂಸ್ಕೃತಿಕ ಅನುಗುಣವಾಗಿ ಮಾಡುತ್ತವೆ ಎಂದು ಅಭಿಪ್ರಾಯ ಪಟ್ಟರು.
ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಆಶ್ರಮದ ಶ್ರೀ ಬಾಲತಪಸ್ವಿನಿ ಶಿವಶರಣೆ ಮಹಾದೇವಿ ತಾಯಿ, ಸಾಕ್ಷರತಾ ಸಂಯೋಜಕ ಚನ್ನವೀರ ಎಸ್.ಜಮಾದಾರ್, ಹೈ.ಕ. ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಗರೆಡ್ಡಿ ಗದ್ಲೆಗಾಂವ್, ಸಮ್ಮೇಳನದ ಸಂಯೋಜಕ ಡಾ| ಗವಿಸಿದ್ದಪ್ಪಾ ಪಾಟೀಲ ಮತ್ತಿತರರು ಇದ್ದರು.