ಬೆಂಗಳೂರು: ನಗರದ ಬಹುದೊಡ್ಡ ಸಮಸ್ಯೆ ಎಂದರೆ ಸಂಚಾರ ದಟ್ಟಣೆ. ಆದರೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ಲಕ್ಕಸಂದ್ರವರೆಗಿನ ಹೊಸೂರು ರಸ್ತೆಯಲ್ಲಿ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಟ್ಟು ಸಂಚಾರ ದಟ್ಟಣೆ ಆಗುವುದನ್ನೇ ಕಾದು ಕುಳಿತು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವಂತಾಗಿದೆ.
ಸಂಚಾರ ದಟ್ಟಣೆ ಹೆಚ್ಚಿರುವ, ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ 100ಕ್ಕೂ ಹೆಚ್ಚು ಕಡೆ ಬಿಬಿಎಂಪಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಿದೆ. ಅದರಲ್ಲಿ ಬಹುತೇಕ ಪಾದಚಾರಿ ಮೇಲ್ಸೇತುವೆಗಳು ನಿರುಪಯೋಗವಾಗಿವೆ. ಆದರೆ ಲಾಲ್‌ಬಾಗ್ ಮುಖ್ಯದ್ವಾರದಿಂದ ಲಕ್ಕಸಂದ್ರವರೆಗಿನ ಹೊಸೂರು ರಸ್ತೆಯಲ್ಲಿ ಪಾದಚಾರಿಗಳು ಮಾತ್ರ ರಸ್ತೆ ದಾಟಬೇಕೆಂದರೆ ಜೀವ ಕೈಯಲ್ಲಿ ಹಿಡಿದು ಹೋಗಬೇಕಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿದರೂ ಈವರೆಗೆ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿಲ್ಲ.
3 ಅಡಿ ಎತ್ತರದ ಡಿವೈಡರ್: ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಲಕ್ಕಸಂದ್ರ ಮಾರ್ಗದವರೆಗೆ ರಸ್ತೆ ಡಿವೈಡರ್ ಅಂದಾಜು 3 ಅಡಿಯಿದೆ. ಅಲ್ಲದೆ ಮಧ್ಯದಲ್ಲಿ ಪಾದಚಾರಿಗಳು ದಾಟಲು ಮಾರ್ಗವನ್ನೂ ಬಿಟ್ಟಿಲ್ಲ. ಹೀಗಾಗಿ ಪಾದಚಾರಿಗಳು ರಸ್ತೆ ದಾಟಬೇಕೆಂದರೆ ಲಾಲ್ ಬಾಕ್ ಪಶ್ಚಿಮ ದ್ವಾರದ ವೃತ್ತ ಅಥವಾ ಸಿದ್ದಾಪುರ ಸಿಗ್ನಲ್‌ಗೆ ಬರಬೇಕು. ಅದೂ ಕೂಡ ವಾಹನ ದಟ್ಟಣೆ ಕಡಿಮೆಯಾದಾಗ ಅಥವಾ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚರಿಸದೆ ನಿಂತಾಗ ರಸ್ತೆ ದಾಟಬೇಕಾದ ಸ್ಥಿತಿಯಿದೆ.
ಲಕ್ಕಸಂದ್ರದಲ್ಲಿ ಟ್ರಾಫಿಕ್ ಜಾಮ್ ವರದಾನ:ಲಕ್ಕಸಂದ್ರ ಬ್ರಾಂಡ್‌ಫ್ಯಾಕ್ಟರಿ ಸಮೀಪದ ವೃತ್ತ ಹಾಗೂ ಲಕ್ಕಸಂದ್ರ 10ನೇ ತಿರುವಿನಲ್ಲಿನ ವೃತ್ತದಲ್ಲಿ ಸಂಚಾರ ಸಿಗ್ನಲ್ ಕಂಬಗಳಿವೆ. ಆದರೆ ಅವುಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಸಂಚಾರ ಪೊಲೀಸರು ವಾಹನಗಳ ಓಡಾಟವನ್ನು ನಿಯಂತ್ರಿಸುತ್ತಿದ್ದಾರೆ. ಒಂದು ವೇಳೆ ಸಂಚಾರ ಪೊಲೀಸರು ಇರದಿದ್ದರೆ ವಾಹನಗಳು ಎಗ್ಗಿಲ್ಲದೆ ಓಡಾಡುತ್ತವೆ. ಈ ವೇಳೆ ಪಾದಚಾರಿಗಳು ರಸ್ತೆ ದಾಟಲಾಗದ ಸ್ಥಿತಿ ಎದುರಾಗುತ್ತದೆ. ಆಗೆಲ್ಲ
ಟ್ರಾಫಿಕ್ ಜಾಮ್ ಆಗಿ ವಾಹನಗಳು ಓಡಾಡಲಾಗದ ಸ್ಥಿತಿಗೆ ತಲುಪಿದಾಗ ವಾಹನಗಳ ಮಧ್ಯದಲ್ಲಿ ತೂರಿಕೊಂಡು ರಸ್ತೆ ದಾಟಬೇಕಿದೆ.
ಅಪಘಾತಗಳ ಹೆಚ್ಚಳ: ಹೀಗೆ ವಾಹನಗಳ ಮಧ್ಯದಲ್ಲಿ ಓಡಾಡುತ್ತಾ ರಸ್ತೆ ದಾಟುವುದರಿಂದ ಪಾದಚಾರಿಗಳು ಅತಿಹೆಚ್ಚು ಸಂಖ್ಯೆಯಲ್ಲಿ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಬಸ್ ಅಥವಾ ಲಾರಿಯಂತ ಭಾರಿ ವಾಹನಗಳ ಎದುರು ರಸ್ತೆ ದಾಟುವಾಗ ಅದು ತಿಳಿಯದೆ ಚಾಲಕ ವಾಹನ ಚಲಾಯಿಸಿದರೆ ಪಾದಚಾರಿಗಳು ಗಂಭೀರ ಗಾಯಗೊಳ್ಳುವ ಪರಿಸ್ಥಿತಿಯೂ ಇದೆ. ಈ ರೀತಿಯ ಹಲವು ಪ್ರಕರಣಗಳು ಇಲ್ಲಿ ದಾಖಲಾಗಿದೆ.
ಲಕ್ಕಸಂದ್ರದಲ್ಲಿ ರಸ್ತೆ ದಾಟಬೇಕೆಂದರೆ ಭಯಪಡುವ ಪರಿಸ್ಥಿತಿಯಿದೆ. ವಾಹನಗಳು ನಿಂತಾಗ ಓಡೋಡಿ ರಸ್ತೆ ದಾಟಬೇಕಿದೆ. ಇಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಿದರೆ ಅನುಕೂಲವಾಗುತ್ತದೆ.
● ಲಕ್ಷ್ಮೀ, ಪಾದಚಾರಿ
ಹಿಂದೆ ರಸ್ತೆ ಡಿವೈಡರ್ ಎತ್ತರ ಸಣ್ಣದಾಗಿತ್ತು. ಈಗ ಆಳೆತ್ತರದ ಡಿವೈಡರ್ ಅಳವಡಿಸಲಾಗಿದೆ. ಅಲ್ಲದೆ ಮಧ್ಯದಲ್ಲಿ ಎಲ್ಲೂ ರಸ್ತೆ ದಾಟಲು ಸ್ಥಳವನ್ನು ನಿಗದಿ ಮಾಡಿಲ್ಲ. ಹೀಗಾಗಿ ಜೀವ ಕೈಯ್ಯಲ್ಲಿ ಹಿಡಿದು ಓಡಾಡಬೇಕಿದೆ.
● ರಮೇಶ್, ಪಾದಚಾರಿ
ಗಿರೀಶ್ ಗರಗ